ಮಥುರಾ: ಸಂಸತ್ತಿನಲ್ಲಿ ನಾಯಕನಾಗಿ ಆಯ್ಕೆಯಾದ ಮೊದಲ ದಿನವೇ ಇದು ಬಡವರಿಗಾಗಿ ಮತ್ತು ಅವರ ಅಭಿವೃದ್ಧಿಗಾಗಿರುವ ಸರ್ಕಾರ ಎಂದಿದ್ದೆ, ಅದರಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಎನ್ಡಿಎ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಸೋಮವಾರ ಮಥುರಾದ ದೀನ್ ದಯಾಳ್ ಉಪಧ್ಯಾಯ ಸ್ಮಾರಕ ಭವನದಲ್ಲಿ ಒಂದು ಲಕ್ಷಕ್ಕೂ ಅಧಿಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಯುಪಿಎ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಭ್ರಷ್ಟಾಚಾರ ಮುಕ್ತ ಸರ್ಕಾರಕ್ಕೆ ಮತ ಹಾಕಿದಕ್ಕಾಗಿ ಜನರಿಗೆ ಧನ್ಯವಾದ ತಿಳಿಸಿದರು. ಅಲ್ಲದೇ ಯುಪಿಎ ಸರ್ಕಾರ ರಿಮೋಟ್ ಕಂಟ್ರೋಲ್ಡ್ ಆಗಿತ್ತು ಎಂದು ಟೀಕಿಸಿದರು.
ಹಗರಣಗಳನ್ನು ಹತ್ತಿಕ್ಕಿ ನುಡಿದಂತೆ ನಡೆದಿದ್ದೇನೆ ಎಂದ ಅವರು, ಹಗರಣ ಮತ್ತು ಅಂಧಕಾರದ ದಿನಗಳು ಕಳೆದು ಹೋಗಿವೆ ಎಂದಿದ್ದಾರೆ.
ಗಣಿಗಾರಿಕೆಯನ್ನು ಮೊದಲೂ ಮಾಡಲಾಗುತ್ತಿತ್ತು, ಆದರೆ ಅದರ ಹಣವನ್ನು ಬಡವರಿಗಾಗಿ ಬಳಸುತ್ತಿರಲಿಲ್ಲ. ಕೆಲ ಭ್ರಷ್ಟಾಚಾರಿಗಳಿಗೆ ಕೆಟ್ಟ ದಿನಗಳು ಬಂದಿವೆ, ಹೀಗಾಗೀ ಅವರು ದೂರುತ್ತಿದ್ದಾರೆ.
ಬಡವರಿಗಾಗಿ ನಾವು ಬ್ಯಾಂಕ್ ಖಾತೆಗಳನ್ನು ತೆರೆದಿದ್ದೇವೆ, ಈ ಹಿಂದೆ ಅವರಿಗೆ ಬ್ಯಾಂಕ್ ಪ್ರವೇಶಿಸುವ ಅವಕಾಶವೂ ಸಿಗುತ್ತಿರಲಿಲ್ಲ.
12 ಕೊಟಿಗೂ ಅಧಿಕ ಜನರಿಗೆ ನಾವು ಬ್ಯಾಂಕ್ ಸಬ್ಸಿಡಿಗಳನ್ನು ನೀಡಿದ್ದೇವೆ.
3 ಲಕ್ಷ ರೈತರ ಆತ್ಮಹತ್ಯೆಗೆ ಕಾರಣ ಯಾರು ಎಂದು ಚರ್ಚಿಸಲು ನಾನು ಇಲ್ಲಿಗೆ ಬಂದಿಲ್ಲ, ಆ ವಿಷಯದಲ್ಲಿ ನಾನು ರಾಜಕೀಯ ಮಾಡುವುದಿಲ್ಲ.
ರೈತರಿಗೆ ವಿದ್ಯುತ್ ನೀಡಲು ನಾವು ಬದ್ಧರಾಗಿದ್ದೇವೆ, ಕಳೆದ 30ವರ್ಷಗಳಿಗಿಂತ ಅಧಿಕ ವಿದ್ಯುತನ್ನು ನಾವೀಗ ಉತ್ಪಾದಿಸುತ್ತಿದ್ದೇವೆ, 5 ವರ್ಷದಲ್ಲಿ 24 ಗಂಟೆ ವಿದ್ಯುತ್ ಸರಬರಾಜು ಮಾಡುವುದು ನಮ್ಮ ಗುರಿ.
ರೈತರಿಗೆ ಸಾಯಿಲ್ ಹೆಲ್ತ್ ಕಾರ್ಡ್ ಬಗ್ಗೆ ತಿಳಿಸಿದ್ದೇವೆ, ಅವರೀಗ ತಮ್ಮ ಜಮೀನಿನ ಗುಣಮಟ್ಟವನ್ನು ತಿಳಿದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ರೈತರು ಶ್ರಮಪಡುವುದಕ್ಕೆ ಹೆದರುವುದಿಲ್ಲ, ಆದರೆ ಅವರಿಗೆ ನಾವು ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಬೇಕು.
ಯೂರಿಯಾ ಉತ್ಪಾದನೆ 20 ಟನ್ಗಳಷ್ಟು ಏರಿಕೆ ಕಂಡಿದೆ. ರೈತರಿಗಾಗಿ ನಾವು ಮೈಕ್ರೋ ಇರ್ರಿಗೇಶನ್ ಮತ್ತು ಹೆಚ್ಚಿನ ವಿದ್ಯುತ್ನ್ನು ನೀಡುವ ಸಂಕಲ್ಪ ಮಾಡಿದ್ದೇವೆ.
ಭಾರತಕ್ಕೆ ಅದರ ನಾಗರಿಕರ ಮೇಲೆ ನಂಬಿಕೆ ಇಡುವುದನ್ನು ಕಲಿಸಿಕೊಟ್ಟಿದ್ದೇವೆ. ಹಲವಾರು ಮಂದಿಗೆ ಪೆನ್ಯನ್ ಸಿಗುತ್ತಿಲ್ಲ, ನಮ್ಮದು ಬಡವರಿಗಾಗಿ ಇರುವ ಸರ್ಕಾರ, ಅವರಿಗೆ ಸೂಕ್ತ ಪೆನ್ಶನ್ ಸಿಗುವಂತೆ ನೋಡಿಕೊಳ್ಳುತ್ತೇವೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.