ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರಗಳನ್ನು ಕಡಿತಗೊಳಿಸಿದೆ. ಆದರೆ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ನಿರ್ವಹಣೆ ಹಾಗೂ ಚೆಕ್ ಬುಕ್ ಮತ್ತು ಲಾಕರ್ ಇತರ ಸೇವೆಗಳ ಮೇಲಿನ ದರಗಳಲ್ಲಿ ಏರಿಕೆ ಮಾಡಿದೆ.
ಇದು ಸಾಲದಾತರ ನಡುವೆ ದರ ಕಡಿತದ ಪೈಪೋಟಿ ನಡೆಯಲಿದ್ದು, ಲಕ್ಷಾಂತರ ಎಸ್ಬಿಐ ಖಾತೆದಾರರ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.
ಈ ಹೆಚ್ಚಿನ ದರಗಳು ಸ್ಟೇಟ್ ಬ್ಯಾಂಕ್ ಜೊತೆ ವಿಲೀನಗೊಂಡ ಎಲ್ಲ ಐದು ಬ್ಯಾಂಕ್ಗಳು ಹಾಗೂ ಭಾರತೀಯ ಮಹಿಳಾ ಬ್ಯಾಂಕ್ ಖಾತೆದಾರರಿಗೆ ಅನ್ವಯವಾಗಲಿದೆ.
ಕಡಿಮೆ ದರಗಳ ಠೇವಣಿ ಮತ್ತು ವಹಿವಾಟುಗಳು ಹೆಚ್ಚಿದ್ದು, ಎಸ್ಬಿಐ ತನ್ನ ಮೂಲ ದರದಲ್ಲಿ 15 ಮೂಲಾಂಕ ಕಡಿತಗೊಳಿಸಿದೆ. ಮೂಲ ದರ ಶೇ.9.25ರಿಂದ 9.10ಕ್ಕೆ ಕಡಿತಗೊಳಿಸಲಾಗಿದ್ದು, ಇದು ಎಪ್ರಿಲ್ 1ರಿಂದ ಜಾರಿಯಾಗಲಿವೆ.
ಎಸ್ಬಿಐನ ಖಾತೆದಾರರು ತಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಿಸದಿದ್ದಲ್ಲಿ ರೂ.20 (ಗ್ರಾಮೀಣ ಶಾಖೆ)ರಿಂದ ರೂ. 100 (ಮೆಟ್ರೋ ಶಾಖೆ)ವರೆಗೆ ದಂಡ ಪಾವತಿಸಬೇಕಿದೆ ಎಂದು ಎಸ್ಬಿಐ ತಿಳಿಸಿದೆ.
ಮಾರ್ಚ್ 31ರ ವರೆಗೆ ಖಾತೆದಾರರ ಮಾಸಿಕ ಸರಾಸರಿ ಬ್ಯಾಲೆನ್ಸ್ ತಿಂಗಳಿಗೆ ರೂ. 500 ಹಾಗೂ ಚೆಕ್ ಪುಸ್ತಕದ ಸೌಲಭ್ಯ ಹೊಂದಿದವರಿಗೆ ರೂ. 1000 ಆಗಿತ್ತು. ಎಸ್ಬಿ ಮುಂದಿನ ಆರ್ಥಿಕ ವರ್ಷದಿಂದ ಮೆಟ್ರೋ, ಪಟ್ಟಣ, ನಗರ ಪ್ರದೇಶಗಳಿಗೆ ಪ್ರತ್ಯೇಕ ಸರಾಸರಿ ಬ್ಯಾಲೆನ್ಸ್ (ಎಂಎಬಿ) ನಿಗದಿಪಡಿಸಲು ನಿರ್ಧರಿಸಿದೆ.
ಮೆಟ್ರೋ ಶಾಖೆಗಳಲ್ಲಿ ಮಾಸಿಕ ಸರಾಸರಿ ಬ್ಯಾಲೆನ್ಸ್ 5000 ಎಂದು ನಿಗದಿಪಡಿಸಲಾಗಿದ್ದು, ಈ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿದ್ದಲ್ಲಿ ರೂ.50ರಿಂದ ರೂ. 100ರ ವರೆಗೆ ದಂಡ ವಿಧಿಸಲಾಗುವುದು. ಇನ್ನು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸರಾಸರಿ ಬ್ಯಾಲೆನ್ಸ್ ಕನಿಷ್ಠ ರೂ.3000 ಹಾಗೂ ರೂ. 2000 ನಿಗದಿಪಡಿಸಲಾಗಿದೆ.
ಬ್ಯಾಂಕ್ ಲಾಕರ್ ಬಾಡಿಗೆ ಮೊತ್ತ ಹೆಚ್ಚಿಸಲಾಗಿದ್ದು, 12 ಬಾರಿ ಬಳಕೆ ನಂತರ ಲಾಕರ್ ಬಳಕೆದಾರರು ರೂ. 100 ಮತ್ತು ಸೇವಾ ತೆರಿಗೆ ಪಾವತಿಸಬೇಕಾಗುತ್ತದೆ. ಕರೆಂಟ್ ಅಕೌಂಟ್ ಮೇಲಿನ 50 ಚೆಕ್ಗಳು ಉಚಿತವಾಗಿರಲಿದದು, ಅನಂತರ ಪ್ರತಿ ಚೆಕ್ ಮೇಲೆ ರೂ. 3 ಅನ್ವಯವಾಗಲಿದೆ. ಅಂದರೆ 25 ಪುಟಗಳ ಚೆಕ್ ಪುಸ್ತಕದ ದರ ರೂ. 75 ಮತ್ತು ಸೇವಾ ತೆರಿಗೆ ಹಾಗೂ 50 ಪುಟಗಳ ಚೆಕ್ ಪುಸ್ತಕದ ದರ ರೂ. 150 ಮತ್ತು ಸೇವಾ ತೆರಿಗೆ ಅನ್ವಯವಾಗಲಿದೆ.
ಎಸ್ಬಿಐ ಉಳಿತಾಯ ಖಾತೆ ದಾಖಲಾತಿ ಮತ್ತು ಹೊಸ ಅಕೌಂಟ್ ಆರಂಭಿಸಲು ರೂ. 20 ಮತ್ತು ಇತರ ಸೇವಾ ತೆರಿಗೆಗಳನ್ನು ಹೇರಲಿದೆ.
ಈ ನಿಯಮವನ್ನು ಇತರ ಸಾರ್ವಜನಿಕ ಬ್ಯಾಂಕುಗಳು ಅನ್ವಯಿಸುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.