ಬೆಂಗಳೂರು: ವಿಧಾನಸಭಾ ಕಲಾಪಕ್ಕೆ ಬರದಿರುವ ಸಚಿವರ ವಿರುದ್ಧ ಬಿಜೆಪಿ ಗರಂ ಆಗಿದ್ದು, ಸದನದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳ ಸುರಿಮಳೆ ಸುರಿಯಿತು.
ಸದನ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಈ ವಿಷಯ ಪ್ರಸ್ತಾಪಿಸಿ, ಕೆಲ ಸಚಿವರುಗಳು ಸದನ ಮರೆತು ಉಪಚುನಾವಣೆಯಲ್ಲಿ ಜನರಿಗೆ ಆಮಿಷ ವೊಡ್ಡುತ್ತಿದ್ದಾರೆ. ಸದನಕ್ಕೆ ಬರದೇ ಪ್ರಚಾರದಲ್ಲಿ ನಿರತರಾಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಹಾರ ಸಚಿವ ಯು.ಟಿ. ಖಾದರ್ ಮತದಾರರಿಗೆ ಆಮಿಷವೊಡ್ಡಿದ ಪ್ರಕರಣ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಸಚಿವ ಮಹದೇವಪ್ಪರವರಂತೂ ಸದನಕ್ಕೆ ಬಂದಿಲ್ಲ. ಅವರಿಗ ಕೇಳಿದ ಪ್ರಶ್ನೆಗಳಿಗೆ ಬೇರೆಯವರು ಉತ್ತರ ನೀಡಿದ್ದಾರೆ ಎಂದು ಹರಿಹಾಯ್ದರು. ಬಿಜೆಪಿಯ ಸಿ.ಟಿ. ರವಿ, ಆರ್. ಅಶೋಕ್, ಬೋಪಯ್ಯ ಇವರುಗಳು ಶೆಟ್ಟರ್ ಮಾತಿಗೆ ದನಿಗೂಡಿಸಿದರು.
ಸೋಲುವ ಭೀತಿಯಿಂದ ಕಾಂಗ್ರೆಸ್ ಪಕ್ಷ ಈ ರೀತಿ ಮಾಡುತ್ತಿದೆ. ಜನರ ವಿಶ್ವಾಸಗಳಿಸಿದ್ದರೆ ಈ ರೀತಿ ಮಾಡುವ ಅವಶ್ಯಕತೆ ಏನಿತ್ತು ಎಂದು ಏರು ಧ್ವನಿಯಲ್ಲಿ ವಾಗ್ದಾಳಿ ನಡೆಸಿದರು. ಈ ರೀತಿ ಮಾಡಿರುವ ಸಚಿವರಿಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡಲಿ. ಇಲ್ಲವೇ ಸಂಪುಟದಿಂದ ವಜಾ ಮಾಡಿ ಎಂದು ಬಿಜೆಪಿಯ ಸಿ.ಟಿ. ರವಿ ಹೇಳಿದರು.
ಪ್ರತಿಪಕ್ಷಗಳು ಹೇಳುತ್ತಿರುವುದು ಸುಳ್ಳಿನ ಕಂತೆ, ಇವರು ರಾಜಕಾರಣ ಮಾಡುತ್ತಿದ್ದಾರೆ. ಸದನದಲ್ಲಿ ಈ ರೀತಿ ಪ್ರಸ್ತಾಪಿಸುವುದು ಸರಿಯಲ್ಲ ಟಿ.ಬಿ.ಜಯಚಂದ್ರ ಹೇಳಿದರು. ಈ ವಿಚಾರ ಪ್ರಸ್ತಾಪಕ್ಕೆ ಅವಕಾಶ ಇಲ್ಲ ಎಂದು ಸಭಾಧ್ಯಕ್ಷರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.