ಹುಬ್ಬಳ್ಳಿ: ರಾಜ್ಯ ಒಲಿಂಪಿಕ್ ಕ್ರೀಡಾ ಕೂಟದ ಮೂರನೇ ದಿನ ಹುಬ್ಬಳ್ಳಿಯ ಹೊರವಲಯದ ಗಬ್ಬೂರು ಬೈಪಾಸ್ನಲ್ಲಿ ಪುರುಷರ ವೈಯಕ್ತಿಕ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಗದಗಿನ ಸಂತೋಷ ವಿಭೂತಿಹಳ್ಳಿ ಚಿನ್ನದ ಪದಕ ಪಡೆದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 4ರ ಗಬ್ಬೂರು ಬೈಪಾಸ್ನಿಂದ ವರೂರು ಗ್ರಾಮದವರೆಗೆ 60 ಕಿ.ಮೀ ಸೈಕ್ಲಿಂಗ್ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಗಬ್ಬೂರಿನಿಂದ ವರೂರುವರೆಗೆ 10 ಕಿ.ಮೀ. ಅಂತರವನ್ನು 6 ಸುತ್ತು ಕ್ರಮಿಸಬೇಕಾಗಿತ್ತು.
ಬಾಗಲಕೋಟೆಯ ಮಾಳಪ್ಪ ಮಾಯಣ್ಣವರ್ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕವನ್ನು ಪಡೆದುಕೊಂಡರು. ತೃತೀಯ ಸ್ಥಾನಕ್ಕೆ ಬೆಳಗಾವಿಯ ಪ್ರಶಾಂತ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಬೆಳ್ಳಂಬೆಳಗ್ಗೆ ಹುಬ್ಬಳ್ಳಿ ಗಬ್ಬೂರು ಕ್ರಾಸ್ನ ಜೈನ ಮಂದಿರದ ಬಳಿ ಸ್ಪರ್ಧೆಯಲ್ಲಿ 61 ಸ್ಪರ್ಧಾಳುಗಳು ಪಾಲ್ಗೊಳ್ಳಬೇಕಾಗಿತ್ತು. ಆದ್ರೆ 51 ಜನ ಸ್ಪರ್ಧಾಳುಗಳು ಮಾತ್ರ ಪಾಲ್ಗೊಂಡಿದ್ದರು.
ಹುಬ್ಬಳ್ಳಿ ನಗರದ ಸಂಚಾರಿ ಸಿಪಿಐ ಸಲೀಂ ಅಲಿಯವರು ಸ್ಪರ್ಧೆಗೆ ಚಾಲನೆ ನೀಡುತ್ತಿದ್ದಂತೆಯೇ ಸ್ಪರ್ಧಿಗಳು ನಿಧಾನವಾಗಿ ಚಲಿಸಿ ನಂತರ ವೇಗವನ್ನು ಮೈಗೂಡಿಸಿಕೊಂಡು ನೋಡು ನೋಡುತ್ತಿದ್ದಂತೆಯೆ ಶರ ವೇಗದಲ್ಲಿ ಸೈಕಲ್ ತುಳಿದು ಸ್ಪರ್ಧೆಗೆ ಹುಮ್ಮಸು ತುಂಬಿದರು.
ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಾಗಪ್ಪ ಮಾಳಿ (ಬೆಳಗಾವಿ), ಆಸಿಫ್ ಅತ್ತರ ( ವಿಜಯಪುರ), ಫೈಗಂಬರ್ ನಧಾಪ್ (ಗದಗ), ಸಂತೋಷ ಕುರಣಿ (ವಿಜಯಪುರ) ಇವರಿಗೆ ಪ್ರಮಾಣಪತ್ರ ನೀಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.