ಧಾರವಾಡ : ರಾಜ್ಯ ಒಲಿಂಪಿಕ್ ಸಂಸ್ಥೆಯು ಇನ್ನು ಮುಂದೆ 2 ವರ್ಷಗಳಿಗೊಮ್ಮೆ ರಾಜ್ಯದ ವಿವಿಧ ಭಾಗಗಳಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಏರ್ಪಡಿಸುವಂತೆ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಕರ್ನಾಟಕ ಒಲಿಂಪಿಕ್ ಸಂಸ್ಥೆ, ಯುಬ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿರುವ ರಾಜ್ಯ ಒಲಿಂಪಿಕ್ ಕ್ರೀಡಾಕೂಟ-2017ನ್ನು ಘೋಷಣೆಯ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯ ಸರ್ಕಾರ ಕ್ರೀಡೆಗಳನ್ನು ಹಾಗೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಬದ್ದವಾಗಿದೆ. ಈ ಉದ್ದೇಶಕ್ಕಾಗಿ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ನೀಡಲಾಗಿದೆ. ಮುಂಬರುವ ಬಜೆಟ್ನಲ್ಲಿ ಅನುದಾನ ಇನ್ನಷ್ಟು ಹೆಚ್ಚಿಸಲಾಗುವುದು. 2020 ರಲ್ಲಿ ಟೋಕಿಯೋದಲ್ಲಿ ನಡೆಯುವ ಅಂತರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆಯುವ ರಾಜ್ಯದ ಕ್ರೀಡಾಪಟುವಿಗೆ 5 ಕೋಟಿ ರೂಪಾಯಿಗಳ ನಗದು ಪ್ರೋತ್ಸಾಹವನ್ನು ಹಾಗೂ ಕ್ರಮವಾಗಿ ರಜತ ಮತ್ತು ಕಂಚಿನ ಪದಕ ಪಡೆಯುವ ಕ್ರೀಡಾಪಟುಗಳಿಗೆ 3 ಮತ್ತು 2 ಕೋಟಿ ರೂಪಾಯಿಗಳ ಪ್ರೋತ್ಸಾಹಧನವನ್ನು ನೀಡಲು ಸರಕಾರ ತೀರ್ಮಾನಿಸಿದೆ. ಅದೇ ರೀತಿ ಚಿನ್ನದ ಪದಕ ಪಡೆದ ಅಭ್ಯರ್ಥಿಗೆ ರಾಜ್ಯ ಸರ್ಕಾರದ ಕ್ಲಾಸ್ಒನ್ ಹುದ್ದೆಯನ್ನು ನೀಡುವದಾಗಿ ಪ್ರಕಟಿಸಿದರು. ಇದಲ್ಲದೇ ಎಶಿಯನ್ ಗೇಮ್ಸ್ ಮತ್ತು ಕಾಮನ್ವೆಲ್ತ ಕ್ರೀಡಾಕೂಟದಲ್ಲಿ ವಿಜೇತರಾದವನ್ನು ಸಹ ಪ್ರೋತ್ಸಾಹಿಸಲಾಗುದು. ನಮ್ಮ ನಾಡಿನ ಕ್ರೀಡಾಪಟುಗಳು ಈಗಿನಿಂದಲೇ ಸಿದ್ದತೆ ಮಾಡಿಕೊಂಡು 2020 ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜಾಗತಿಕ ಸಾಧನೆ ಮಾಡಬೇಕು ಎಂದರು.
ಧಾರವಾಡದಲ್ಲಿ ಗರಡಿಮನೆ ಹಾಗೂ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ನೆರವು ನೀಡುವುದಾಗಿ ಘೋಷಿಸಿದ ಮುಖ್ಯಮಂತ್ರಿಗಳು ಕ್ರೀಡೆಗಳಿಗಾಗಿ ಸಂಪನ್ಮೂಲ ಹಾಗೂ ತರಬೇತಿ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ. ಅಗತ್ಯವಾದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ತರಬೇತಿದಾರರನ್ನು ಸಹ ಸರಕಾರ ಪಡೆಯಲಿದೆ ಎಂದು ತಿಳಿಸಿದರು.
ಗಣಿ ಹಾಗೂ ಭೂವಿಜ್ಞಾನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಲಕರ್ಣಿ ಮಾತನಾಡಿ ಧಾರವಾಡ ಜಿಲ್ಲೆಯಲ್ಲಿ ಮೊದಲಿನಿಂದಲೂ ಅನೇಕ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪಧೆರ್ಗಳಲ್ಲಿ ವಿಜೇತರಾಗಿದ್ದಾರೆ. ಆದ್ದರಿಂದ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಧಾರವಾಡದಲ್ಲಿ ಕ್ರೀಡಾ ಸಂಕೀರ್ಣ ಮತ್ತು ಗರಡಿ ಮನೆಯನ್ನು ಸ್ಥಾಪಿಸಲು ನೆರವು ನೀಡುವಂತೆ ಮುಖ್ಯ ಮಂತ್ರಿಗಳಿಗೆ ಕೋರಿದರು. ಒಲಿಂಪಿಕ್ ಕ್ರೀಡೆಯನ್ನು ಧಾರವಾಡದಲ್ಲಿ ಆಯೋಜಿಸಲು ಕಾರಣಿಕರ್ತರಾದ ಮುಖ್ಯಮಂತ್ರಿಗಳನ್ನು ಅಭಿನಂದಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಪ್ರಮೋದ ಮದ್ವರಾಜ್ ಈ ಸಂದರ್ಭದಲ್ಲಿ ಮಾತನಾಡಿ ಇಲಾಖೆಯು ರಾಜ್ಯದ ಅತ್ಯುತ್ತಮ 1000 ಪ್ರತಿಭಾವಂತ ಕ್ರೀಡಾಪಟುಗಳ ವಿವರಗಳನ್ನು ಡಾಟಾಬೇಸದಲ್ಲಿ ಸಿದ್ದಪಡಿಸುತ್ತಿದೆ. ತನ್ಮೂಲಕ ಈ ಕ್ರೀಡಾಪಟುಗಳಿಗೆ ವಿವಿಧ ಕಾರ್ಪೋರೇಟ ಸಂಸ್ಥೆಗಳು ದತ್ತು ಸ್ವೀಕಾರ ಮತ್ತು ನೆರವು ನೀಡಲು ಅನುಕೂಲ ಕಲ್ಪಿಸಲಾಗುತ್ತಿದೆ. ಪ್ರಸಕ್ತ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪ್ರಥಮ, ದ್ವಿತಿಯ ಹಾಗೂ ತೃತೀಯ ಸ್ಥಾನ ಪಡೆಯುವ ಕ್ರೀಡಾಪಟುಗಳ ಹೆಸರನ್ನು ಸಹ ಈ ಡಾಟಾ ಬೇಸ್ದಲ್ಲಿ ಅಳವಡಿಸಲಾಗುವದೆಂದರು. ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಮುಂಬರುವ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಕೋರಿದರು.
ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ.ಖಾದರ ಮಾತನಾಡಿ ಕ್ರೀಡಾಪಟುಗಳು ದೇಶದ ಸಂಪತ್ತು ಈ ನಿಟ್ಟಿನಲ್ಲಿ ಯುವಜನತೆ ಕ್ರೀಡೆಗಳಲ್ಲಿ ತಮ್ಮ ಪ್ರತಿಭೆ ತೋರಲು ಪ್ರಯತ್ನಿಸುವಂತೆ ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ಮಾತನಾಡಿ ಅನೇಕ ವರ್ಷಗಳ ನಂತರ ಈ ಭಾಗದಲ್ಲಿ ಒಲಿಂಪಿಕ್ ಕ್ರೀಡೆ ನಡೆಯುತ್ತಿರುವದು ಸಂತಸದ ಸಂಗತಿ, ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವದು ಅಗತ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹೆಚ್ಚಿನ ಗಮನಹರಿಸಲು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಕೇಂದ್ರ ಸರಕಾರ ಖೇಲೋ ಇಂಡಿಯಾ ಕಾರ್ಯಕ್ರಮದಡಿ ಧಾರವಾಡಕ್ಕೆ 50 ಕೋಟಿ ರೂ.ಗಳನ್ನು ನೀಡಲು ಮುಂದಾಗಿದ್ದು, ಡಿ.ಪಿ.ಆರ್.ಸಿದ್ಧಪಡಿಸಲಾಗಿದೆ ಎಂದರು. ಸರಕಾರ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಕೋರಿದರು.
ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಶಾಸಕರುಗಳಾದ ಅಬ್ಬಯ್ಯ ಪ್ರಸಾದ, ಎನ್.ಎಚ್.ಕೋನರಡ್ಡಿ, ಪ್ರದೀಪ ಶೆಟ್ಟರ, ಮಾಜಿ ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ನಿಗಮ ಮಂಡಳಿ ಅಧ್ಯಕ್ಷರುಗಳಾದ ಸದಾನಂದ ಡಂಗನವರ, ವೇದವ್ಯಾಸ ಕೌಲಗಿ, ಅನ್ವರ ಮುಧೋಳ, ರವೀಂದ್ರ ಕಲಬುರ್ಗಿ ಜಿ.ಪಂ. ಅಧ್ಯಕ್ಷೆ ಶ್ರೀಮತಿ ಚೈತ್ರಾ ಶಿರೂರ, ಉಪಾಧ್ಯಕ್ಷ ಶಿವಾನಂದ ಕರಿಗಾರ, ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಮಂಜುಳಾ ಅಕ್ಕೂರ, ಉಪ ಮಹಾಪೌರ ಶ್ರೀಮತಿ ಲಕ್ಷ್ಮೀ ಉಪ್ಪಾರ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ರೋಷನ್ ಅಲಿ, ಮುಂತಾದವರು ಉಪಸ್ಥಿತರಿದ್ದರು.
ಆರಂಭದಲ್ಲಿ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಕೆ.ಗೋವಿಂದರಾಜ್ ಸ್ವಾಗತಿಸಿ ಮಾತನಾಡಿ ಅಲ್ಪಾವಧಿಯಲ್ಲಿಯೇ ಜಿಲ್ಲಾಡಳಿತ ಹಾಗೂ ಇತರ ಸಂಸ್ಥೆಗಳು ಕ್ರೀಡಾಕೂಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಕ್ಕೆ ಅಭಿನಂದಿಸಿದರು. ವಿಜಾಪೂರದಲ್ಲಿ 7 ಕೋಟಿ ರೂ.ಗಳ ವೆಚ್ಚದಲ್ಲಿ ವೆಲೋಡ್ರೋಮ್ ನಿರ್ಮಿಸಲಾಗುತ್ತಿದೆ. ರಾಜ್ಯದ 4 ಕಂದಾಯ ವಿಭಾಗದಲ್ಲಿ ಅತ್ಯುತ್ತಮ ಕ್ರೀಡಾ ಸೌಕರ್ಯಗಳನ್ನು ಕಲ್ಪಿಸುವದರಿಂದ ಆ ಭಾಗದ ಕ್ರೀಡಾಪಟುಗಳಿಗೆ ನೆರವಾಗಲಿದೆ ಎಂದರು. ಹುಬ್ಬಳ್ಳಿ-ಧಾರವಾಡದಲ್ಲಿ ಶೂಟಿಂಗ ರೇಂಜ್ ನಿರ್ಮಾಣ ಅಗತ್ಯವಿದ್ದು ಇದರಿಂದ ಶೂಟಿಂಗ್ ಕ್ರೀಡಾಪಟುಗಳಿಗೆ ಮತ್ತು ಪೋಲಿಸರ ತರಬೇತಿಗೆ ನೆರವಾಗುವದು ಎಂದರು.
ಜಿಲ್ಲಾಧಿಕಾರಿ ಡಾ: ಎಸ್.ಬಿ.ಬೊಮ್ಮನಹಳ್ಳಿ ವಂದಿಸಿದರು. ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಅಪರ ಮುಖ್ಯ ಕಾರ್ಯದರ್ಶಿ ಡಾ: ರಜನೀಶ್ ಗೋಯಲ್, ಕ್ರೀಡಾ ಇಲಾಖೆ ನಿರ್ದೇಶಕ ಅನುಪಮ್ ಅಗ್ರವಾಲ್, ಜಿ.ಪಂ. ಸಿ.ಇ.ಓ. ಆರ್.ಸ್ನೇಹಲ್, ಪೊಲೀಸ ಆಯುಕ್ತ ಪಾಂಡುರಂಗ ರಾಣೆ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಧಮೇಂದ್ರ ಕುಮಾರ ಮೀನಾ, ಒಲಿಂಪಿಕ್ ಸಂಸ್ಥೆ ಕಾರ್ಯದರ್ಶಿ ಅನಂತರಾಜು ಹಾಗೂ ಪಾಲಿಕೆ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.
ಅವಳಿ ನಗರದಲ್ಲಿ ಫೆಬ್ರವರಿ 10 ರ ವರೆಗೆ ನಡೆಯುವ ಈ ಕ್ರೀಡಾಕೂಟವನ್ನು ಮುಖ್ಯ ಮಂತ್ರಿಗಳು ಪಾರಿವಾಳ ಹಾಗೂ ಬಲೂನಗಳನ್ನು ಆಕಾಶಕ್ಕೆ ಹಾರಿಸುವ ಮೂಲಕ ಸಾಂಕೇತಿಕ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳು ಒಲಿಂಪಿಕ್ ಕ್ರೀಡಾಕೂಟದ ದ್ವಜಾರೋಹಣ ನೆರವೆರಿಸಿದರು. ಕ.ವಿ.ವಿ. ಸಮೂಹ ಸಂಹನ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳು ಹೊರತಂದ “ ವಿದ್ಯಾ ಸಮಾಚಾರ” ಪ್ರಾಯೋಗಿಕ ಪತ್ರಿಕೆ ಬಿಡುಗಡೆ ಮಾಡಿದರು.
ಕ್ರೀಡಾಕೂಟದ ಆರಂಭದಲ್ಲಿ ಕ್ರೀಡಾಪಟುಗಳ ಆಕರ್ಷಕ ಪಥಸಂಚಲನದ ಮೂಲಕ ಮುಖ್ಯ ಮಂತ್ರಿಗಳು ಗೌರವ ವಂದನೆ ಸ್ವೀಕರಿಸಿದರು.
ಪಥ ಸಂಚಲನದಲ್ಲಿ ಧಾರವಾಡ ಕ್ರೀಡಾಶಾಲೆ, ಹಾಗೂ ಕ್ರೀಡಾ ಕೂಟದಲ್ಲಿ ಪಾಲ್ಗೊಂಡ ಆರ್ಚರಿ, ಬಾಸ್ಕೆಟ್ಬಾಲ್, ಅಥ್ಲೇಟಿಕ್ಸ್, ಬಾಕ್ಸಿಂಗ, ಸೈಕ್ಲಿಂಗ್, ಪುಟಬಾಲ್, ಜಿಮ್ನಾಸ್ಟಿಕ್, ಹಾಕಿ ಹ್ಯಾಂಡಬಾಲ್, ಟೈಕ್ವಾಂಡೊ, ವೇಟ್ಲಿಪ್ಟಿಂಗ್ ಕ್ರೀಡಾತಂತಗಳು ಕ್ರೀಡಾಪಟುಗಳು ಭಾಗವಹಿಸಿದ್ದರು.
ಆರಂಭದಲ್ಲಿ ಮಲ್ಲಿಕಾರ್ಜುನ ಮನಸೂರ ಹಾಗೂ ಬಸವರಾಜ ರಾಜಗುರು ಸಂಗೀತ ಶಾಲೆಯ ವಿದ್ಯಾರ್ಥಿಗಳು ನಾಡಗೀತೆಯನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ಜನಪದ ಜಾತ್ರೆಯಲ್ಲಿ ಪಾಲ್ಗೊಂಡ 500 ಕಲಾವಿದರು ನಾಡಿನ ಸಂಸ್ಕೃತಿ ಪರಂಪರೆಯನ್ನು, ಜಾನಪದ ವೈಭವವನ್ನು ಆಕರ್ಷಕವಾಗಿ ಪ್ರದರ್ಶಿಸಿ ನೆರೆದ ಸಮೂಹವನ್ನು ಮುದಗೊಳಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.