ನವದೆಹಲಿ: ಗಂಗಾ ಶುದ್ಧೀಕರಣ ಯೋಜನೆಗೆ ಸಂಬಂಧಿಸಿದಂತೆ ಪ್ರಸ್ತುತ ಪ್ರಗತಿ ಕುರಿತು ವರದಿ ಸಲ್ಲಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.
ಮುಖ್ಯ ನ್ಯಾ. ಜೆ.ಎಸ್.ಖೇಹರ್ ಮತ್ತು ಡಿ.ವೈ.ಚಂದ್ರಚೂಡ ಅವರ ದ್ವಿಸದಸ್ಯ ಪೀಠ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರಿಗೆ ಈ ಕುರಿತು ಸೂಚಿಸಿದ್ದು, ಜ.24 ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.
ನ್ಯಾಯಾಲಯದ ಮೊದಲಿನ ನಿರ್ದೇಶನದಂತೆ 2015 ರಲ್ಲಿ ಅಫಿಡವಿಟ್ (ಪ್ರಮಾಣ ಪತ್ರ) ಸಲ್ಲಿಸಲಾಗಿದೆ ಎಂದು ರಂಜಿತ್ ಕುಮಾರ್ ಹೇಳಿದಾಗ, ನಾವೀಗ 2017 ರಲ್ಲಿದ್ದೇವೆ. ನೀವು ಹೊಸ ಅಫಿಡವಿಟ್ ಸಲ್ಲಿಸಿ. ಮುಂದಿನ ತಾರೀಖಿನೊಳಗೆ ಪ್ರಸ್ತುತ ವರದಿ ಸಲ್ಲಿಸಿ. ವರದಿಯು 2016 ರ ಡಿ.31 ರವರೆಗಿನ ಸ್ಥಿತಿಗತಿಯನ್ನು ಹೊಂದಿರತಕ್ಕದು ಎಂದು ಪೀಠ ಹೇಳಿದೆ.
ಗಂಗಾ ನದಿ ಹರಿಯುವ ಉತ್ತರಾಖಂಡ್, ಉತ್ತರ ಪ್ರದೇಶ, ಬಿಹಾರ್, ಜಾರ್ಖಂಡ್ ಮತ್ತು ಪ.ಬಂಗಾಲಗಳಲ್ಲಿ ಹಂತ ಹಂತವಾಗಿ ಶುದ್ಧೀಕರಣ ಯೋಜನೆ ಅನುಷ್ಠಾನಗೊಳಿಸುವ ಯೋಚನೆ ಸರ್ಕಾರದ್ದು.
ಈ ಹಿಂದೆ ಸರ್ಕಾರದ ನೀಲನಕ್ಷೆಯನ್ನು ಪರಿಶೀಲಿಸಿದ್ದ ಸುಪ್ರೀಂ ತೃಪ್ತಿಯನ್ನು ವ್ಯಕ್ತಪಡಿಸಿತ್ತಾದರೂ, ಇಂಥ ಮಹಾತ್ವಾಕಾಂಕ್ಷೆಯ ಯೋಜನೆ ಅನುಷ್ಠಾನಕ್ಕೆ ಹಾಕಿಕೊಂಡ ಉಪಾಯಗಳೇನು ಎಂದು ಪ್ರತಿಕ್ರಿಯಿಸಿತ್ತು.
ಗಂಗಾ ನದಿ ತೀರದಲ್ಲಿ ಒಟ್ಟು 118 ಪಟ್ಟಣಗಳಿದ್ದು, ಘನ ಹಾಗೂ ಜಲ ತ್ಯಾಜ್ಯ ನಿರ್ವಹಣಾ ಘಟಕ ಸೇರಿದಂತೆ ನೈರ್ಮಲೀಕರಣಕ್ಕೆ ಸಂಬಂಧಿಸಿದ ಕಾರ್ಯ ಪೂರ್ಣಗೊಳಿಸುವುದು ಮೊದಲ ಗುರಿ. ಅದನ್ನು ಸಾಧಿಸಲು ಸಮಯಾವಕಾಶಕ್ಕಾಗಿ ಕೇಂದ್ರ ಕೋರ್ಟ್ಗೆ ಮನವಿ ಸಲ್ಲಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.