ಕೋಲ್ಕತ್ತಾ : ನೇತಾಜಿ ಸುಭಾಷ್ಚಂದ್ರ ಬೋಸ್ ಅವರು ಆಂಗ್ಲ ಸರ್ಕಾರದಿಂದ ಗೃಹಬಂಧನಕ್ಕೆ ಒಳಗಾಗುವ ಸಂದರ್ಭದಲ್ಲಿ ತಮ್ಮ ಪೂರ್ವಜರ ಮನೆಯಿಂದ ತಪ್ಪಿಸಿಕೊಳ್ಳಲು ನೆರವಾಗಿದ್ದ ಕಾರು ಇದೀಗ ಮರುಹುಟ್ಟು ಪಡೆದು ಅನಾವರಣಕ್ಕೆ ಸಿದ್ಧವಾಗಿದೆ.
ನಾಲ್ಕು ಬಾಗಿಲುಳ್ಳ ಜರ್ಮನ್ ವಾಂಡರರ್ ಸೆಡಾನ್ ಕಾರನ್ನು ಪೂರ್ವಸ್ಥಿತಿಗೆ ತರಲಾಗಿದೆ. ಜರ್ಮನಿಯ ಆಟೊಮೊಬೈಲ್ ತಯಾರಕ ಸಂಸ್ಥೆ ಆಡಿಗೆ ಈ ಕಾರ್ಯವನ್ನು ನೇತಾಜಿ ಸಂಶೋಧನ ಬ್ಯುರೊ ವಹಿಸಿತ್ತು. 2016 ರ ಜುಲೈನಲ್ಲಿಯೇ ತಜ್ಞರ ತಂಡ ಕಾರ್ಯ ಆರಂಭಿಸಿತ್ತು. ಕಾರಿನ ಹಳೆಯ ಭಾಗಗಳನ್ನು ಬದಲಿಸುವ, ಬಣ್ಣ ಹಚ್ಚುವ ಹಾಗೂ ಅದರ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ತಂತ್ರಜ್ಞರು ಕೆಲಸ ಮಾಡಿದ್ದು, ಬಹುತೇಕ ಕಾರ್ಯ ಪೂರ್ಣಗೊಂಡಿದೆ ಎನ್ನಲಾಗಿದೆ.
ಇದೇ 2017 ರ ಜ.18 ರಂದು ಕಲ್ಕತ್ತಾದ ನೇತಾಜಿ ಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ಪುನರ್ಜನ್ಮಿಸಿದ ಐತಿಹಾಸಿಕ ಕಾರನ್ನು ಅನಾವರಣಗೊಳಿಸಲಿದ್ದು, ಅಪರೂಪದ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ಬಿಎಲ್ಎ 7169 ಸಂಖ್ಯೆ ಈ ಕಾರಿನಲ್ಲಿ ನೇತಾಜಿ ಅವರನ್ನು ಅವರ ಸಹೋದರ ಶರತ್ಚಂದ್ರ ಬೋಸ್ ಅವರ ಮಗ ಶಿಶಿರ ಕುಮಾರ್ ಬೋಸ್ ಅವರು 1941 ರ ಜನವರಿಯಲ್ಲಿ ಕೊಲ್ಕತ್ತಾದಿಂದ ಜಾರ್ಖಂಡ್ನ ಗೊಮೊಹ್ಗೆ ಕರೆದುಕೊಂಡು ಹೋಗಿದ್ದರು. 1971 ರಲ್ಲಿ ಶಿಶಿರ್ ಬೋಸ್ ಅವರೇ ಚಲನಚಿತ್ರ ವಿಭಾಗದ ಸಾಕ್ಷ್ಯಚಿತ್ರಕ್ಕಾಗಿ ಆ ಕಾರನ್ನು ಕೊನೆಯ ಬಾರಿ ಬಳಸಿದ್ದರು.
ಭಾರತದ ಸ್ವಾತಂತ್ರ್ಯಕ್ಕಾಗಿ ಸೈನ್ಯವನ್ನೇ ಕಟ್ಟಿದ ಗಟ್ಟಿಗ ನೇತಾಜಿ ಸುಭಾಷ್ಚಂದ್ರ ಬೋಸ್ ಅವರು ಬಳಸಿದ ಕಾರು ನವಪೀಳಿಗೆಯ ರಾಷ್ಟ್ರಜಾಗೃತಿಗೆ ಪ್ರೇರಕ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.