ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾಗಿದ್ದ ಕೃ.ಸೂರ್ಯನಾರಾಯಣ ರಾವ್ ಅವರು ವಿಧಿವಶರಾಗಿದ್ದಾರೆ.
ಸೂರೂಜಿ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಸಂಘದ ಹಿರಿಯ ಪ್ರಚಾರಕರಾದ ಕೃ. ಸೂರ್ಯನಾರಾಯಣ ರಾವ್ ಅವರು ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ 11.11 ರ ಸಮಯಕ್ಕೆ ಇಹಲೋಕ ತ್ಯಜಿಸಿದರು. ಇವರು ಕೆಲವು ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
93 ವರ್ಷದವರಾಗಿದ್ದ ಕೃ. ಸೂರ್ಯನಾರಾಯಣರಾವ್ ಅವರು ಕಳೆದ 70 ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಪ್ರಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಅಂತಿಮ ದರ್ಶನವು ಬೆಂಗಳೂರಿನ ಕೇಶವ ಕೃಪಾದಲ್ಲಿ ಶನಿವಾರ ಬೆಳಗ್ಗೆ 8.30 ರ ನಂತರ ಇರಲಿದೆ. ನವೆಂಬರ್ 19 ರಂದು ಚಾಮರಾಜಪೇಟೆಯ ಅಂತ್ಯಸಂಸ್ಕಾರ ಮೈದಾನದಲ್ಲಿ ಸಂಜೆ 6.30 ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಕೃಷ್ಣಪ್ಪ ಮತ್ತು ಸುಂದರಮ್ಮ ಇವರ ಹಿರಿಯ ಮಗನಾಗಿ ಆಗಸ್ಟ್ 20, 1923 ರಂದು ಜನಿಸಿದ ಇವರು 1942 ರಲ್ಲಿ ಗಣಿತಶಾಸ್ತ್ರದಲ್ಲಿ ಬಿಎಸ್ಸಿ ಪದವಿ ವ್ಯಾಸಂಗದ ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದರು. ವಿದ್ಯಾರ್ಥಿ ಇರುವಾಗಲೇ ಇವರಿಗೆ ಸಂಘದ ಒಲವು ಹೆಚ್ಚಿತ್ತು. 1946 ರಲ್ಲಿ ಪ್ರಚಾರಕರಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. ಕಳೆದ 70 ವರ್ಷಗಳಿಂದ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದು, ಸಂಘದ ಜ್ಯೇಷ್ಠ ಪ್ರಚಾರಕ ಹಾಗೂ ಸುರೂಜಿ ಎಂದೇ ಜನಪ್ರಿಯರಾದರು.
ಯಾದವ್ರಾವ್ ಜೋಶಿ ಅವರ ಮಾರ್ಗದರ್ಶನದಲ್ಲಿ ಕರ್ನಾಟಕದ ಮೊದಲ 3 ಪ್ರಚಾರಕರಾದ ಹೊ. ವೆ. ಶೇಷಾದ್ರಿ, ಚಂಪಕ್ನಾಥ್ ಅವರೊಂದಿಗೆ ಕೃ. ಸೂರ್ಯನಾರಾಯಣ ರಾವ್ ಅವರೂ ಒಬ್ಬರು.
ಕೃ. ಸೂರ್ಯನಾರಾಯಣ ರಾವ್ ಅವರ ಸಹೋದರರಾದ ಕೃ. ನರಹರಿ ಅವರೂ ಸಂಘದ ಹಿರಿಯ ಕಾರ್ಯಕರ್ತರು. ಸಹೋದರಿ ಕೃ. ರುಕ್ಮಿಣಿ ಅವರು ರಾಷ್ಟ್ರ ಸೇವಿಕಾ ಸಮಿತಿಯ ಹಿರಿಯ ನಿರ್ವಾಹಕಿಯಾಗಿದ್ದಾರೆ. ಇನ್ನುಳಿದ 3 ತಮ್ಮಂದಿರಾದ ಕೃ. ಅನಂತು, ಕೃ. ಗೋಪಿನಾಥ್, ಕೃ. ಶಿವು ಇವರು ಈ ಮೊದಲೇ ವಿಧಿವಶರಾಗಿದ್ದಾರೆ.
ಕೃ. ಸೂರ್ಯನಾರಾಯಣರಾವ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
Senior RSS Pracharak Shri K Suryanarayana Rao devoted his life to serving our Motherland. Saddened by his demise. May his soul rest in peace
— Narendra Modi (@narendramodi) November 19, 2016
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರು, ಕಾರ್ಯಕರ್ತರು ಸೇರಿದಂತೆ ಹಿತೈಷಿಗಳು ಕೃ. ಸೂರ್ಯನಾರಾಯಣರಾವ್ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.