ವಿಶ್ವಸಂಸ್ಥೆ : ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಕಾಶ್ಮೀರವನ್ನು ನಿಮ್ಮದಾಗಿಸಿಕೊಳ್ಳುವ ಕನಸನ್ನು ಎಂದಿಗೂ ಕಾಣಬೇಡಿ, ಅದನ್ನು ಬಿಟ್ಟುಬಿಡಿ. ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಯುವ ದುಃಸ್ಸಾಹಸಕ್ಕೆ ಎಂದಿಗೂ ಕೈ ಹಾಕಬೇಡಿ ಎಂಬ ಖಡಕ್ ನುಡಿಗಳನ್ನು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 71 ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು.
ಸುಮಾರು 19 ನಿಮಿಷಳ ಕಾಲ ಭಾಷಣ ಮಾಡಿದ ಸುಷ್ಮಾ ಸ್ವರಾಜ್ ಎಲ್ಲರ ನಿರೀಕ್ಷೆಯಂತೆ ಪಾಕಿಸ್ಥಾನವನ್ನು ತರಾಟೆಗೆ ತೆಗೆದುಕೊಂಡರು.
ಭಯೋತ್ಪಾದನೆ ಇಂದು ವಿಶ್ವಕ್ಕೇ ಒದಗಿರುವ ಸಂಕಷ್ಟವಾಗಿದ್ದು, ನಮ್ಮ ನೆರೆ ರಾಷ್ಟ್ರವೊಂದು ನೇರವಾಗಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಭಯೋತ್ಪಾದಕರಿಗೆ ಹಣಕಾಸಿನ ನೆರವು ಒದಗಿಸಿ, ಉತ್ತಮ ಸೌಲಭ್ಯಗಳನ್ನು ನೀಡಿ ಅವರನ್ನು ಪೋಷಿಸುತ್ತಿದೆ.
ನಾವು ಪಾಕಿಸ್ಥಾನದೊಂದಿಗೆ ಮಿತ್ರತ್ವವನ್ನು ಹೊಂದಲು ಬಹಳಷ್ಟು ಬಾರಿ ಪ್ರಯತ್ನಿಸಿದ್ದೇವೆ. ಆದರೆ ಅದು ಪದೇ ಪದೇ ನಮ್ಮ ಸಹನೆಯನ್ನು ಪರೀಕ್ಷಿಸಿದೆ. ಮಿತ್ರತ್ವ ಬಯಸಿದ ನಮಗೆ ಸಿಕ್ಕಿದ್ದು, ಪಠಾಣ್ ಕೋಟ್ ದಾಳಿ ಮತ್ತು ಉರಿ ಸೇನಾ ಕಛೇರಿ ಮೇಲಿನ ದಾಳಿ. ಪದೇ ಪದೇ ಗಡಿಯೊಳಗೆ ನುಸುಳಲು ಯತ್ನಿಸುತ್ತಿದೆ.
ಪಾಕಿಸ್ಥಾನಕ್ಕೆ ನಾನೊಂದು ಸಲಹೆ ನೀಡಲು ಬಯಸುತ್ತೇನೆ, ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ಅದನ್ನು ನಿಮ್ಮದಾಗಿಸಿಕೊಳ್ಳುವ ಕನಸನ್ನು ಎಂದಿಗೂ ಕಾಣಬೇಡಿ. ಕಾಶ್ಮೀರದಲ್ಲಿ ಎಷ್ಟೇ ಅರಾಜಕತೆ ಹರಡಿಸಿ ಶಾಂತಿ ಕದಡುವ ಪ್ರಯತ್ನ ಮಾಡಿದರೂ, ನಾವು ಶಾಂತಿ ಸುವ್ಯವಸ್ಥೆ ಕಾಪಾಡುತ್ತೇವೆ. ಕಾಶ್ಮೀರದ ಜನರ ಸುರಕ್ಷತೆ ನಮ್ಮ ಕರ್ತವ್ಯ. ಕಾಶ್ಮೀರದ ಬಗೆಗಿನ ಕನಸನ್ನು ಬಿಟ್ಟುಬಿಡಿ ಎಂದಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದಾರೆಂದು ಎಲ್ಲರ ಮೇಲೆ ಪಾಕಿಸ್ಥಾನ ಆರೋಪ ಮಾಡುತ್ತಿದೆ, ತಮ್ಮನ್ನು ತಾವು ನೋಡಿಕೊಳ್ಳಲಿ ಆಗ ಸತ್ಯದ ಅರಿವು ಆಗುತ್ತದೆ. ಬಲೂಚಿಸ್ಥಾನದಲ್ಲಿರುವ ಪರಿಸ್ಥಿತಿಯನ್ನು ನೋಡಿದರೆ ಸಾಕು, ಇಡೀ ವಿಶ್ವವೇ ಇಂದು ಬಲೂಚ್ ಕಡೆ ತಿರುಗಿ ನೋಡುವಂತಾಗಿದೆ.
ಭಯೋತ್ಪಾದನೆಯ ವಿರುದ್ಧ ಎಲ್ಲರೂ ಒಟ್ಟಾಗಿ ನಿಲ್ಲಬೇಕಿದೆ. ಯಾರು ಸಾಥ್ ನೀಡುವುದಿಲ್ಲವೋ ಅಂತಹವರನ್ನು ಪ್ರತ್ಯೇಕಿಸಿಡಬೇಕು ಎಂಬ ಕಡಕ್ ಮಾತುಗಳನ್ನು ಆಡುವ ಮೂಲಕ ವಿಶ್ವದ ಪ್ರಮುಖ ರಾಷ್ಟ್ರಗಳ ನಾಯಕರ ಸಮ್ಮುಖದಲ್ಲಿ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದರು.
ಬೇಟಿ ಬಚಾವೋ ಬೇಟಿ ಪಡಾವೋ, ಮೇಕ್ ಇನ್ ಇಂಡಿಯಾ, ಜನ್ಧನ್, ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ ಯೋಜನೆಗಳು ಯಾವ ರೀತಿಯಲ್ಲಿ ವಿಶ್ವಸಂಸ್ಥೆಯ ಆಶಯಗಳಿಗೆ ಪೂರಕವಾಗುವಂತೆ ಕಾರ್ಯ ನಿರ್ವಹಿಸುತ್ತಿವೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿದರು. ವಿಶ್ವದ ಪ್ರಮುಖ ಸಮಸ್ಯೆಗಳಾಗಿರುವ ಲಿಂಗತಾರತಮ್ಯ, ಬಡತನ, ಇತ್ಯಾದಿ ಕೊರತೆಗಳ ವಿರುದ್ಧ ಭಾರತದ ಪರಿಣಾಮಕಾರಿ ಹೋರಾಟದ ಬಗ್ಗೆಯೂ ವಿವರಿಸಿದರು.
ಪಾಕ್ಗೆ ಖಡಕ್ ಸಂದೇಶ ನೀಡಿರುವ ಸುಷ್ಮಾ ಸ್ವರಾಜ್ ಅವರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.