ಬೆಂಗಳೂರು : ಕಾವೇರಿ ವಿವಾದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಪತ್ರವೊಂದನ್ನು ಬರೆದು, ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಪ್ರಧಾನಿಯವರು ಮಧ್ಯ ಪ್ರವೇಶಿಸಿ ವಿವಾದವನ್ನು ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವ ಕುರಿತು ಕರ್ನಾಟಕದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈತನ್ಮಧ್ಯೆ ಜಯಲಲಿತಾ ಇನ್ನಷ್ಟು ನೀರು ಬಿಡಬೇಕೆಂದು ಕೋರಿ ರಾತ್ರೋರಾತ್ರಿ ಮೇಲುಸ್ತುವಾರಿ ಸಮಿತಿಗೆ ಬೇಡಿಕೆ ಇಟ್ಟಿದ್ದಾರೆ.
ಇನ್ನೊಂದೆಡೆ ಮೆಟ್ಟೂರು ಡ್ಯಾಂನಲ್ಲಿ ಸಾಕಷ್ಟು ನೀರಿದ್ದರೂ ತಮಿಳುನಾಡು ಸರ್ಕಾರ ಬೇಕಂತಲೇ ಕರ್ನಾಟಕದಿಂದ ಕಾವೇರಿ ನೀರು ಬಿಡುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಮೋರಿ ಹೋಗಿತ್ತು ಎಂದು ಹೇಳಲಾಗುತ್ತಿದೆ.
ಸಿಎಂ ಸಿದ್ದರಾಮಯ್ಯ ಅವರು ಎಲ್ಲಾ ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದು, ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರದ ಸಾರಾಂಶ ಇಂತಿದೆ ;
‘ತಮಿಳುನಾಡಿನಲ್ಲಿ ನಾರ್ಥ್ ಈಸ್ಟ್ ಮಾನ್ಸೂನ್ ಮಳೆಯಾಗಿದ್ದು ಮೆಟ್ಟೂರು ಡ್ಯಾಂನಲ್ಲಿ ಸಾಕಷ್ಟು ನೀರಿದೆ. ಹೀಗಿದ್ದರೂ ತಮಿಳುನಾಡು ಸರ್ಕಾರ ದುರುದ್ದೇಶದಿಂದ ಕಾವೇರಿ ನೀರಿಗಾಗಿ ಬೇಡಿಕೆ ಇಟ್ಟು, ಸತ್ಯವನ್ನು ನ್ಯಾಯಾಲಯದಲ್ಲಿ ಮುಚ್ಚಿಟ್ಟಿದೆ. ಈಗಾಗಲೇ ತಮಿಳುನಾಡು ಸರ್ಕಾರ ಸಾಂಬಾ ಬೆಳೆಗೆ ಬೇಕಾದಷ್ಟು ನೀರನ್ನು ಡ್ಯಾಂಗಳಲ್ಲಿ ಸಂಗ್ರಹಿಸಿಟ್ಟುಕೊಂಡಿದೆ. ಆದರೂ ಕಾವೇರಿ ನೀರು ಬಿಡುವಂತೆ ಆಗ್ರಹಿಸಿ ಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್ ಕೂಡಾ ನೀರು ಬಿಡುವಂತೆ ಆದೇಶಿಸಿತ್ತು.
ಈ ಕುರಿತು ನಡೆದ ಸರ್ವ ಪಕ್ಷ ಸಭೆಯಲ್ಲಿ ಬಿಜೆಪಿ ನಾಯಕರು ಕೂಡಾ ಸುಪ್ರೀಂ ಕೋರ್ಟ್ ಆದೇಶ ಪಾಲಿಸದೆ ತಮಿಳುನಾಡಿಗೆ ನೀರು ಬಿಡಬಾರದು ಎಂದು ಒತ್ತಾಯಿಸಿದ್ದರು. ಆದರೆ ರಾಜ್ಯದ ಸಾಂವಿಧಾನಿಕ ಪ್ರತಿನಿಧಿಯಾಗಿ ನಾನು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವ ಸಲುವಾಗಿ ತಮಿಳುನಾಡಿಗೆ ನೀರು ಬಿಡಲು ಒಪ್ಪಿಗೆ ಸೂಚಿಸಿದೆ. ಆದರೆ ಇದೀಗ ಎಲ್ಲೆಡೆ ಅಶಾಂತಿಯ ವಾತಾವರಣ ಉಂಟಾಗಿದೆ.
ರಾಜ್ಯದಲ್ಲಿ ತಲೆದೋರಿರುವ ಅಶಾಂತಿ ಹೀಗೆ ಮುಂದುವರೆದರೆ ಇದು ರಾಜ್ಯದ ಆರ್ಥಿಕತೆಗೆ ತೊಂದರೆ ಉಂಟಾಗುತ್ತದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ದೇಶಕ್ಕೇ ಅತಿ ಹೆಚ್ಚು ಆದಾಯ ತಂದುಕೊಡುತ್ತಿದ್ದ ಐಟಿ ಕ್ಷೇತ್ರಕ್ಕೆ ಇದರಿಂದ ತೊಂದರೆಯಾಗಿದೆ. ಬಂದ್, ಪ್ರತಿಭಟನೆಗಳು ಐಟಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ.
ಕರ್ನಾಟಕದಲ್ಲಿ ಕುಡಿಯುವ ನೀರಿಗೂ ಹಾಹಾಕಾರವಿದೆ. ಈಗಿರುವ ನೀರಿನ ಪ್ರಮಾಣ ರೈತರ ಮೊದಲ ಬೆಳೆಗೇ ಸಾಲದಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಬಿಟ್ಟರೆ ಕಾವೇರಿ ಜಲಾನಯನ ಪ್ರದೇಶದ ರೈತರು ಬೆಳೆಯುವ ಬೆಳೆಗಳಿಗೆ ನೀರು ಇರುವುದಿಲ್ಲ. ಅಷ್ಟೇ ಅಲ್ಲದೆ ಬೆಂಗಳೂರಿನ ಜನರಿಗೆ ಕುಡಿಯಲೂ ಸಹ ನೀರಿರುವುದಿಲ್ಲ.
ಈ ಹಿನ್ನಲೆಯಲ್ಲಿ ತಮ್ಮಲ್ಲಿ ಮನವಿ ಮಾಡುವುದೇನೆಂದರೆ ಕೂಡಲೇ ತಮಿಳುನಾಡು, ಕೇರಳ, ಪಾಂಡಿಚೇರಿ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ತಾವು ನೇತೃತ್ವ ವಹಿಸಿ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಈ ಹಿಂದೆ ಇಂತಹದೇ ಸನ್ನಿವೇಶ ಎದುರಾಗಿದ್ದಾಗ ಅಂದಿನ ಪ್ರಧಾನಿಗಳ ನೇತೃತ್ವದಲ್ಲಿ ಎಲ್ಲರಿಗೂ ಸಮಾಧಾನವಾಗುವಂತೆ ಸಮಸ್ಯೆಯನ್ನು ಬಗೆಹರಿಸಲಾಗಿತ್ತು. ನೀವು ಕೂಡಾ ಈಗ ಸಮಸ್ಯೆಯನ್ನು ಬಗೆಹರಿಸಿ ಎಂದು ಕೋರುತ್ತೇನೆ’ .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.