ನವದೆಹಲಿ: ದೇಶದ ಸ್ವಚ್ಛ ಜಿಲ್ಲೆಗಳ ಸ್ವಚ್ಛ ಸರ್ವೇಕ್ಷಣೆ ಪಟ್ಟಿ ಬಿಡುಗಡೆಯಾಗಿದ್ದು, ಟಾಪ್ 10 ರಲ್ಲಿ ಉಡುಪಿ ಸ್ಥಾನ ಪಡೆದಿದೆ.
ದೇಶದ 600 ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಆಯ್ಕೆ ಮಾಡಿದ 75 ಸ್ವಚ್ಛ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸ್ವಚ್ಛ ಜಿಲ್ಲೆ ಮತ್ತು ಕಡಿಮೆ ಸ್ವಚ್ಛ ಜಿಲ್ಲೆಗಳ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಟಾಪ್ 10ರ ಲ್ಲಿ ಕರ್ನಾಟಕದ ಉಡುಪಿ 9ನೇ ಸ್ಥಾನ ಪಡೆದಿದ್ದು, 75ರಲ್ಲಿ ಗದಗವಿದೆ.
ಕೇಂದ್ರ ಸರ್ಕಾರದ ಭಾರತೀಯ ಗುಣಮಟ್ಟ ಪರಿಷತ್ ನಡೆಸಿದ ಸಮೀಕ್ಷೆಯಲ್ಲಿ ಬಯಲು ಪ್ರದೇಶ ಮತ್ತು ಗುಡ್ಡಗಾಡು ಪ್ರದೇಶ ಎಂದು ಎರಡು ಭಾಗಗಳಲ್ಲಿ ಪ್ರತ್ಯೇಕಿಸಿ ಸ್ವಚ್ಛತೆಯ ಸಮೀಕ್ಷೆ ನಡೆಸಲಾಗಿತ್ತು. ಶೌಚಾಲಯಗಳು, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ಮನೆ ಆವರಣದಲ್ಲಿ ನಿಂತ ತ್ಯಾಜ್ಯ ನೀರಿನ ಸಂಸ್ಕರಣೆ ಈ ಎಲ್ಲಾ ವಿಷಯಗಳ ಆಧಾರದ ಮೇಲೆ ಸಮೀಕ್ಷೆ ನಡೆಸಿದ ವರದಿಯನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಬಿಡುಗಡೆ ಮಾಡಿದರು.
ಟಾಪ್ 10 ರ ಪಟ್ಟಿಯಲ್ಲಿ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆ ಮೊದಲನೇ ಸ್ಥಾನ, 2 ನೇ ಸ್ಥಾನದಲ್ಲಿ ಸತಾರಾ, 3 ನೇ ಸ್ಥಾನದಲ್ಲಿ ಕೊಲ್ಹಾಪುರ, 4 ರಲ್ಲಿ ರತ್ನಗಿರಿ, 5 ರಲ್ಲಿ ಥಾಣೆ, 6 ರಲ್ಲಿ ನಾದಿಯಾ(ಪಶ್ಚಿಮ ಬಂಗಾಳ), 7 ರಲ್ಲಿ ಮಿಡ್ನಾಪುರ ಪೂರ್ವ, 8 ರಲ್ಲಿ ಪಶ್ಚಿಮ ಬಂಗಾಳದ ಹೂಗ್ಲಿ , 9 ರಲ್ಲಿ ಕರ್ನಾಟಕದ ಉಡುಪಿ, 10 ರಲ್ಲಿ ರಾಜಸ್ಥಾನದ ಚುರು ಜಿಲ್ಲೆಗಳಿವೆ.
ಗುಡುಗಾಡು ಜಿಲ್ಲೆಗಳಲ್ಲಿ ಹಿಮಾಚಲ ಪ್ರದೇಶದ ಮಂಡಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಈಶಾನ್ಯ ಮತ್ತು ಹಿಮಾಲಯ ತಪ್ಪಲಿನ ಕೆಲ ಜಿಲ್ಲೆಗಳು ಸ್ಥಾನ ಪಡೆದುಕೊಂಡಿವೆ.
ಬಯಲು ಪ್ರದೇಶದ ಜಿಲ್ಲೆಗಳ ವಿಭಾಗದಲ್ಲಿ ಕಡಿಮೆ ಸ್ವಚ್ಛತೆ ಇರುವ ಜಿಲ್ಲೆಗಳ ಪೈಕಿ ರಾಜಸ್ಥಾನದ ಬಿಕಾನೇರ್ ಪ್ರಥಮ ಸ್ಥಾನ ಪಡೆದಿದದ್ದರೆ, ಕರ್ನಾಟಕದ ಗದಗ ಕೊನೇ ಸ್ಥಾನದಲ್ಲಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡಿರುವ ರಾಜ್ಯಗಳ ಪೈಕಿ ಸಿಕ್ಕಿಂ ಪ್ರಥಮ ಸ್ಥಾನದಲ್ಲಿದ್ದು, ಹಿಮಾಚಲ ಪ್ರದೇಶ, ಕೇರಳ, ಹರಿಯಾಣಗಳು ನಂತರದ ಸ್ಥಾನದಲ್ಲಿದೆ. ಸ್ವಚ್ಛ ರಾಜ್ಯಗಳ ಪೈಕಿ ಕರ್ನಾಟಕಕ್ಕೆ 19 ನೇ ಸ್ಥಾನ ದೊರೆತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.