ಅಣ್ಣ-ತಂಗಿಯರನ್ನು ಸಹೋದರತೆಯ ಸೂತ್ರದಲ್ಲಿ ಬೆಸೆದ ರಾಖಿ ಹಬ್ಬ – ವಿಶ್ವಕ್ಕೆ ಸ್ನೇಹದ ಸಂದೇಶ ಸಾರಿದ ನ್ಯಾಷನಲ್ ಕಾಲೇಜು ಮೈದಾನ
ಬೆಂಗಳೂರು: ಅಲ್ಲಿ ಅಸೂಯೆ ಬದಲು ಸ್ನೇಹ ಮನೆಮಾಡಿತ್ತು. ಅಹಂ ಬದಲು ವಿನಮ್ರತೆ ಮೇಳೈಸಿತ್ತು. ದ್ವೇಷಿಸುವ ಬದಲು ಪ್ರೀತಿಸುವ ಸಾವಿರಾರು ಹೃದಯಗಳು ಒಂದೆಡೆ ಸೇರಿದ್ದವು. ಹೀಗೆ ಸಾವಿರಾರು ಮನಸ್ಸುಗಳನ್ನು ಒಂದೆಡೆ ಸೇರಿದ್ದು, ಒಂದಾಗಿಸಿದ್ದು ಸ್ನೇಹದ ಸೂತ್ರವಾಗಿರುವ, ಸಹೋದರತೆಯ ಶ್ರೋತವಾಗಿರುವ ರಾಖಿ ಹಬ್ಬ.
ಹೌದು, ಶ್ರಾವಣ ಹುಣ್ಣಿಮೆಯ ಪವಿತ್ರ ದಿನವಾದ ಗುರುವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನ ಅಭೂತಪೂರ್ವ ಸ್ನೇಹಪರ್ವಕ್ಕೆ, ಅಣ್ಣ-ತಂಗಿಯರ ಸಹೋದರತೆಗೆ ಸಾಕ್ಷಿಯಾಯಿತು. ಪರಮಪೂಜ್ಯ ದಿಗಂಬರ ಸಂತ ಶ್ರೇಷ್ಠ ಅಂತರ್ಮನ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜರ ನೇತೃತ್ವದಲ್ಲಿ ರಾಖಿ ಹಬ್ಬ ವಿಶ್ವದಾಖಲೆ ಸೇರಿತು.
ಮುನಿಶ್ರೀ 108 ಪಿಯೂಷ ಸಾಗರಜೀ ಮಹಾರಾಜ್ ಅವರ ಮಾರ್ಗದರ್ಶನಲ್ಲಿ ಒಡಹುಟ್ಟಿದ ನೂರಾರು ಅಣ್ಣ-ತಂಗಿಯರು ಪರಸ್ಪರ ರಾಖಿ ಕಟ್ಟುವ ಮೂಲಕ ಸಹೋದರತೆಯ ಸಂದೇಶ ಸಾರಿದರು.
ಅಣ್ಣ-ತಂಗಿಯರ ಸಹೋದರತೆ ಸಾರುವ ರಾಖಿ ಹಬ್ಬದ ಪ್ರಯುಕ್ತ ತ್ಯಾಗಿ ಸೇವಾ ಸಮಿತಿ ಟ್ರಸ್ಟ್ ಈ ವಿಶೇಷ ರಾಖಿ ಹಬ್ಬವನ್ನು ಆಯೋಜಿಸಿತ್ತು. ಈ ಅಭೂತಪೂರ್ವ ಕಾರ್ಯಕ್ರಮವನ್ನು ವಿಶ್ವದಾಖಲೆಗೆ ಸೇರಿಸಲೆಂದೇ ಅಧಿಕಾರಿಗಳ ತಂಡ ಬೆಂಗಳೂರಿಗೆ ಆಗಮಿಸಿತ್ತು. ರಕ್ಷಾಬಂಧನದ ಮೊದಲ ಸುತ್ತಿನಲ್ಲಿ 500 ಕ್ಕೂ ಹೆಚ್ಚು ಯುವತಿಯರು ಏಕಕಾಲಕ್ಕೆ ತಮ್ಮ ಒಡಹುಟ್ಟಿದ ಅಣ್ಣಂದಿರಿಗೆ ರಾಖಿ ಕಟ್ಟಿ ದಾಖಲೆ ಬರೆದರೆ, 2ನೇ ಸುತ್ತಿನಲ್ಲಿ 500 ಕ್ಕೂ ಹೆಚ್ಚು ಅಣ್ಣಂದಿರು ತಮ್ಮ ಒಡಹುಟ್ಟಿದ ಪ್ರೀತಿಯ ತಂಗಿಯರಿಗೆ ರಕ್ಷೆ ಕಟ್ಟಿ ಸಹೋದರತೆಯ ಸಂದೇಶ ಸಾರಿದರು. 3ನೇ ಸುತ್ತಿನಲ್ಲಿ 400 ಕ್ಕೂ ಹೆಚ್ಚು ಸಹೋದರಿಯರು ತಮ್ಮ ಸಹೋದರಿಯರಿಗೆ ರಕ್ಷೆ ಕಟ್ಟಿದರು. ಜೈನಬಂಧುಗಳು, ಸಾರ್ವಜನಿಕರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಮಂದಿಗೆ ಈ ಪವಿತ್ರ ದಿನಕ್ಕೆ ಸಾಕ್ಷಿಯಾದರು. ಪರಸ್ಪರ ರಾಖಿ ಧರಿಸಿ ಸ್ನೇಹ ಭಾವದಲ್ಲಿ ತೇಲಿದರು.
ಧರ್ಮಧ್ವಜಾರೋಹಣದೊಂದಿಗೆ ವಿಶ್ವದಾಖಲೆಯ ರಕ್ಷಾಬಂಧನ:
ಕಾರ್ಯಕ್ರಮಕ್ಕೂ ಮುನ್ನ ಅಂತರ್ಮನ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜ್, ಮುನಿಶ್ರೀ 108 ಪಿಯೂಷ ಸಾಗರಜೀ ಮಹಾರಾಜ್, ಕ್ಷುಲ್ಲಕ 105 ಶ್ರೀ ಪರ್ವಸಾಗರ್ಜೀ ಮಹಾರಾಜ್ ಅವರಿಂದ ‘ಅಹಿಂಸಾ ಸಂಸ್ಕಾರ ಪಾದಯಾತ್ರೆ’ ನಡೆಯಿತು. ವಿವಿಪುರಂನ ಮಹಾವೀರ ಧರ್ಮಶಾಲಾದಿಂದ ಆರಂಭಗೊಂಡ ಈ ಪವಿತ್ರಯಾತ್ರೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮುಕ್ತಾಯಗೊಂಡಿತು. ನಂತರ ಜೈನ ಮನಿಶ್ರೀಗಳಿಂದ ಧರ್ಮಧ್ವಜಾರೋಹಣ ನಡೆಯಿತು. ಈ ಮೂಲಕ ವಿಶ್ವದಾಖಲೆಯ ‘ಅಂತರ್ಮನ ರಕ್ಷಾಬಂಧನ ಮಹೋತ್ಸವ’ಕ್ಕೆ ಚಾಲನೆ ದೊರೆಯಿತು.
ಇದೇ ವೇಳೆ, ಅಂತರ್ಮನ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜ್ಜೀ ಅವರಿಗೆ ಜೈನ ಬಂಧುಗಳು ಚಿನ್ನ ಮತ್ತ ಬೆಳ್ಳಿಯ ಎಳೆಗಳಿಂದ ಮಾಡಿದ ರಾಖಿಯನ್ನು ಕಟ್ಟಿ ಆಶೀರ್ವಾದ ಪಡೆದರು. ಬಳಿಕ ರಕ್ಷಾಬಂಧನದ ಮಹತ್ವದ ಬಗ್ಗೆ ಮಾತನಾಡಿದಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜ್ಜೀ, ವಿವಿಧತೆಯಲ್ಲಿ ಏಕತೆ ನಮ್ಮ ವಿಶೇಷತೆ. ಪರಸ್ಪರರು ವ್ಯಕ್ತಿ ಗೌರವ ನೀಡುವ ಮೂಲಕ ಸಹೋದರರಂತೆ ಬಾಳಬೇಕು. ಅಸೂಯೆ ಬದಲು ಸ್ನೇಹ, ಅಹಂ ಬದಲು ವಿನಮ್ರತೆ, ನಮ್ಮ ಹೃದಯದಲ್ಲಿ ಮನೆಮಾಡಲಿ ಎಂದು ಹಾರೈಸಿದರು.
ಈ ಬೃಹತ್ ವಿಶೇಷ ರಕ್ಷಾಬಂಧನ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.