ಕಾಕೋರಿ : ಸ್ವಾತಂತ್ರ್ಯ ಚಳುವಳಿಯ ಹೀರೋಗಳಿಗೆ ಗೌರವ ಸಲ್ಲಿಸುವ ಯೋಜನೆಯನ್ನು ಬಿಜೆಪಿ ರೂಪಿಸಿರುವ ಹಿನ್ನಲೆಯಲ್ಲಿ ಶನಿವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಉತ್ತರ ಪ್ರದೇಶದ ಕಾಕೋರಿಗೆ ತೆರಳಿದರು.
ಕಾಕೋರಿ ಸ್ವಾತಂತ್ರ್ಯ ಸೇನಾನಿ ಚಂದ್ರಶೇಖರ್ ಆಜಾದ್, ರಾಮ್ಪ್ರಸಾದ್ ಬಿಸ್ಮಿಲ್ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭ ಧೈರ್ಯಯುತವಾಗಿ ರೈಲು ದರೋಡೆ ಮಾಡಿದ ಸ್ಥಳವಾಗಿದೆ.
ಹಿಂದುಸ್ಥಾನ್ ಸೋಷ್ಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ ಎಂಬ ಕ್ರಾಂತಿಕಾರಿ ಸಂಘಟನೆ ಈ ದರೋಡೆಯ ಯೋಜನೆ ರೂಪಿಸಿದ್ದು, ಸಶಸ್ತ್ರ ಹೋರಾಟದ ಮೂಲಕ ಬ್ರಿಟಿಷರನ್ನು ಭಾರತದಿಂದ ನಿರ್ನಾಮ ಮಾಡುವುದು ಇದರ ಮುಖ್ಯ ಉದ್ದೇಶವಾಗಿತ್ತು. ರಾಮ್ಪ್ರಸಾದ್ ಬಿಸ್ಮಿಲ್ ಹಾಗೂ ಆಶ್ಫಾಕುಲ್ಲಾ ಖಾನ್ ಈ ಯೋಜನೆಯ ಪ್ರಮುಖ ರೂವಾರಿಯಾಗಿದ್ದರು. ಶಸ್ತ್ರಾಸ್ತ್ರ ಖರೀದಿಗೆ ಸಂಘಟನೆಯ ಕೈಯಲ್ಲಿ ಹಣವಿರಲಿಲ್ಲ. ಇತರ ಸಂಘಟನೆಗಳು ಬ್ರಿಟಿಷ್ ಸರ್ಕಾರದ ಭಯದಿಂದ ಸಹಾಯ ಮಾಡಲು ನಿರಾಕರಿಸಿದ ಕಾರಣ ಅವರು ರೈಲಿನಿಂದ ಬ್ರಿಟಿಷ್ ಸರ್ಕಾರದ ಹಣ ದೋಚಲು ನಿರ್ಧರಿಸಿದ್ದರು.
ಇಲ್ಲಿ ಸ್ವಾತಂತ್ರ್ಯ ಸೇನಾನಿಗಳ ಹೆಸರಿನಲ್ಲಿ ದೇಗುಲವೊಂದನ್ನು ನಿರ್ಮಿಸಲಾಗಿದ್ದು, ಇಂದು ಅಲ್ಲಿಗೆ ಅಮಿತ್ ಶಾ ಭೇಟಿ ನೀಡಿದರು. ಬಳಿಕ ಅವರು ಶಹೀದ್ ಸ್ಮಾರಕ್ ಕಾಕೋರಿ ಶಾಲೆಯಲ್ಲಿ ಆಜಾದಿ 70 – ಯಾದ್ ಕರೋ ಕುರ್ಬಾನಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಈ ವೇಳೆ ಅವರು ಎಸ್ಪಿ, ಬಿಎಸ್ಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಪಕ್ಷಗಳು ಅಧಿಕಾರಕ್ಕೆ ಬಂದರೆ ಒಂದು ಸಮುದಾಯದ ಪರವಾಗಿ ಮಾತ್ರ ಕಾರ್ಯ ಮಾಡುತ್ತವೆ. ಬಿಜೆಪಿಯಿಂದ ಮಾತ್ರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಾಡಲು ಸಾಧ್ಯ ಎಂದರು.
ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ಹೆಚ್ಚಿನ ಅಭಿವೃದ್ಧಿಯಾಗಿಲ್ಲ. ಒಂದು ಕುಟುಂಬವೇ 60 ವರ್ಷ ದೇಶ ಆಳಿದ್ದು ದುರಾದೃಷ್ಟಕರ. ಉತ್ತರ ಪ್ರದೇಶದ ಅಭಿವೃದ್ಧಿಯಾಗದ ಹೊರತೂ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.
ಅಮಿತ್ ಶಾ ಅವರಂತೆಯೇ ಇನ್ನೂ ಹಲವಾರು ಬಿಜೆಪಿ ಸಚಿವರುಗಳು ಸ್ವಾತಂತ್ರ್ಯ ಚಳುವಳಿಯ ಮಹತ್ತರ ಸ್ಥಳಗಳಿಗೆ ಭೇಟಿ ಕೊಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.