ನವದೆಹಲಿ: ಕಾಶ್ಮೀರದಲ್ಲಿ ಭಯೋತ್ಪಾದನೆ ಪ್ರಚೋದಿಸುವುದನ್ನು ನಿಲ್ಲಿಸಿ, ಕಾಶ್ಮೀರ ಬಿಟ್ಟು ತೊಲಗಿ ಎಂದು ಪಾಕಿಸ್ಥಾನಕ್ಕೆ ಭಾರತವು ಎಚ್ಚರಿಕೆ ನೀಡಿದೆ.
ಜಮ್ಮು ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬುರ್ಹಾನ್ ವಾನಿ ಹತ್ಯೆ ವಿರೋಧಿಸಿ ಪಾಕಿಸ್ಥಾನವು ಜುಲೈ 20 ರಂದು ಕಪ್ಪು ದಿನವನ್ನಾಗಿ ಆಚರಿಸಿದ್ದಕ್ಕೆ ಭಾರತವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದು ಪಾಕಿಸ್ಥಾನವು ಕಾಶ್ಮೀರದಲ್ಲಿ ಉಗ್ರರನ್ನು ಬೆಂಬಲಿಸುತ್ತಿರುವುದಕ್ಕೆ ಸಾಕ್ಷಿ. ಭಾರತದ ಆಂತರಿಕ ವಿಷಯದಲ್ಲಿ ತಲೆ ಹಾಕುವ ಮುನ್ನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಕಾಶ್ಮೀರವನ್ನು ಬಿಟ್ಟು ತೊಲಗಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಎಚ್ಚರಿಸಿದೆ.
ಕಪ್ಪು ದಿನ ಆಚರಣೆಯಂದು ಹಲವು ಜಿಲ್ಲೆಗಳಲ್ಲಿ ಪ್ರತಿಭಟನಾಕಾರರು ಕಪ್ಪು ಪಟ್ಟಿಯನ್ನು ಕೈಗೆ ಕಟ್ಟಿಕೊಂಡು ಕಪ್ಪು ದಿನವನ್ನು ಆಚರಿಸಿದ್ದಾರೆ. ಉಗ್ರನೊಬ್ಬನನ್ನು ಹತ್ಯೆ ಮಾಡಿದ್ದಕ್ಕಾಗಿ ಕಪ್ಪು ದಿನ ಆಚರಿಸುವಂತಹ ಪರಿಸ್ಥಿತಿ ಪಾಕಿಸ್ಥಾನದಿಂದಲೇ ಆಗಿದೆ. ಪಾಕ್ ಪ್ರಚೋದನೆಯಿಂದಾಗಿ ಅಲ್ಲಿನ ಜನರು ಉಗ್ರವಾದದತ್ತ ಸೆಳೆಯಲ್ಪಡುತ್ತಿದ್ದಾರೆ. ಪಾಕಿಸ್ಥಾನ ಭಯೋತ್ಪಾದನೆಯನ್ನು ಪ್ರಚೋದಿಸುವುದನ್ನು ನಿಲ್ಲಿಸಬೇಕು. ವಿಶ್ವಸಂಸ್ಥೆಯಿಂದಲೇ ಉಗ್ರರು ಎಂದು ಘೋಷಿಸಲ್ಪಟ್ಟಿದ್ದ ಭಯೋತ್ಪಾದಕರು ವಾನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ಪ್ರತಿಭಟನೆಯನ್ನು ನಡೆಸಲು ಕುಮ್ಮಕ್ಕು ನೀಡುತ್ತಿದ್ದಾರೆ. ಈ ಹಿಂದೆ ಕೂಡಾ ಇವರು ಅಲ್ಖೈದಾ ಮುಖಂಡ ಒಸಾಮಾ ಬಿನ್ ಲಾಡೆನ್ ಮತ್ತು ತಾಲಿಬಾನ್ ಮುಖಂಡ ಅಖ್ತರ್ ಮನ್ಸೂರ್ ಹತ್ಯೆಯನ್ನೂ ವಿರೋಧಿಸಿ ಪ್ರತಿಭಟನೆ ನಡೆಸಿ ಅಶಾಂತಿ ನಿರ್ಮಿಸಿದ್ದರು. ಇವೆಲ್ಲಕ್ಕೂ ಕುಮ್ಮಕ್ಕು ನೀಡುತ್ತಿರುವುದು ಪಾಕಿಸ್ಥಾನ. ಕಣಿವೆ ರಾಜ್ಯದಲ್ಲಿ ಉಗ್ರವಾದವನ್ನು ಹರಡಿ ಅಶಾಂತಿ ಸೃಷ್ಟಿಸುತ್ತಿದೆ ಎಂದು ಭಾರತ ಕಟುವಾಗಿ ಆಕ್ಷೇಪಿಸಿದೆ.
ಕಣಿವೆ ರಾಜ್ಯದಲ್ಲಿ ಇಷ್ಟು ದಿನಗಳಿಂದ ಇದ್ದ ಕರ್ಫ್ಯೂವನ್ನು ತೆರವುಗೊಳಿಸಲಾಗಿದ್ದು, ಶಾಲೆಗಳು, ಪತ್ರಿಕೆಗಳು ಪುನರಾರಂಭಗೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.