ನವದೆಹಲಿ: ನೂತನ ಲೋಕಸಭೆ ಅಸ್ತಿತ್ವಕ್ಕೆ ಬಂದು ಒಂದು ವರ್ಷಗಳಾಗುತ್ತಾ ಬಂದಿದೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಪ್ರತಿಯೊಬ್ಬ ಸಂಸದರಿಗೂ ವಾರ್ಷಿಕ 5 ಕೋಟಿ ರೂಪಾಯಿಗಳನ್ನು ಬಿಡುಗಡೆಯೂ ಮಾಡಲಾಗಿದೆ. ಕೆಲವು ಸಂಸದರು ತಮಗೆ ದೊರೆದ ಹಣವನ್ನು ತಮ್ಮ ಕ್ಷೇತ್ರಗಳ ಕಾಮಗಾರಿಗೆ ವಿನಿಯೋಗಿಸಿದರೆ ಇನ್ನು ಕೆಲವರು ನಯಾಪೈಸೆಯನ್ನೂ ಖರ್ಚು ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ.
ಲೋಕಸಭೆಯ ಹಿರಿಯ ಸದಸ್ಯರುಗಳಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸೋನಿಯಾ ಗಾಂಧಿ, ಮುಲಾಯಂ ಸಿಂಗ್ ಯಾದವ್, ಉಮಾಭಾರತಿ, ರಾಮ್ಕೃಪಾಲ ಯಾದವ್ ಅವರನ್ನು ಜನ ಭರವಸೆಯಿಟ್ಟು ಆಯ್ಕೆ ಮಾಡಿದ್ದಾರೆ. ಆದರೆ ಇವರುಗಳು ಕಳೆದ 10 ತಿಂಗಳಿನಿಂದ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ನಿಧಿಯಿಂದ ಒಂದು ಪೈಸೆಯನ್ನೂ ಖರ್ಚು ಮಾಡಿಲ್ಲ.
ಕರ್ನಾಟಕದಿಂದ ಲೋಕಸಭೆಗೆ ಆರಿಸಲ್ಪಟ್ಟಿರುವ ಡಿ.ವಿ ಸದಾನಂದ ಗೌಡ, ಯಡಿಯೂರಪ್ಪ, ವೀರಪ್ಪ ಮೊಯಿಲಿ, ಅನಂತ್ ಕುಮಾರ್ ಕೂಡ ನಿಧಿ ಬಳಕೆ ಮಾಡಿಯೇ ಇಲ್ಲ. ರಾಜ್ಯದ 28 ಸಂಸದರಲ್ಲಿ 19 ಮಂದಿ ಪ್ರದೇಶಾಭಿವೃದ್ಧಿ ನಿಧಿಯನ್ನು 10 ತಿಂಗಳುಗಳಲ್ಲಿ ಬಳಕೆ ಮಾಡಿಲ್ಲ.
ಶೋಭ ಕರಂದ್ಲಾಜೆ, ಮಲ್ಲಿಕಾರ್ಜುನ ಖರ್ಗೆ ತಕ್ಕ ಮಟ್ಟಿಗೆ ತಮ್ಮ ನಿಧಿಯನ್ನು ಬಳಸಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿ ಕ್ಷೇತ್ರಕ್ಕೆ ಕೇವಲ 40 ಲಕ್ಷ ರೂಪಾಯಿಗಳನ್ನು ಮಾತ್ರ ವಿನಿಯೋಗಿಸಿದ್ದಾರೆ. ರಾಹುಲ್ ಗಾಂಧಿ ಅಮೇತಿ ಕ್ಷೇತ್ರಕ್ಕೆ ಸುಮಾರು 4.46 ಕೋಟಿಯಷ್ಟ ಹಣವನ್ನು ವಿವಿಧ ಕಾಮಗಾರಿಗಳಿಗೆ ನೀಡಿದ್ದಾರೆ.
ನಿಧಿ ಬಳಕೆ ಮಾಡಿದ ನಳಿನ್, ಪ್ರತಾಪ್
ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ನಿಧಿ ಬಳಕೆ ವಿಷಯದಲ್ಲಿ ರಾಜ್ಯದ ಉಳಿದೆಲ್ಲಾ ಸಂಸದರಿಗಿಂತ ಮುಂಚೂಣಿಯಲ್ಲಿದ್ದಾರೆ.
ನಳಿನ್ ಅವರು 2.89 ಕೋಟಿ ಹಣವನ್ನು ವಿನಿಯೋಗಿಸಿದ್ದಾರೆ, ಪ್ರತಾಪ್ ಅವರು 1.90 ಕೋಟಿಯನ್ನು ವಿನಿಯೋಗಿಸಿಕೊಂಡಿದ್ದಾರೆ.
ಈ ಬಾರಿಯ ಲೋಕಸಭೆಯಲ್ಲಿ ಸಂಸದರ ನಿಧಿಗೆಂದು ಸುಮಾರು 1582.5 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ, ಆದರೆ ಅದರಲ್ಲಿ ಖರ್ಚಾಗಿರುವುದು ಕೇವಲ 152.86 ಕೋಟಿ ರೂಪಾಯಿ ಅಂದರೆ ಬಿಡುಗಡೆಯಾದ ಹಣದ ಶೇ.10ರಷ್ಟು ಮಾತ್ರ.
ಈ ಅಂಕಿಅಂಶಗಳಿಂದ ತಮ್ಮ ಕ್ಷೇತ್ರದ ಅಭಿವೃದ್ಧಿಯ ಬಗೆಗೆ ಸಂಸದರುಗಳು ಎಷ್ಟೊಂದು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುದು ತಿಳಿದು ಬರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.