ಬೆಂಗಳೂರು: ಶನಿವಾರದಿಂದ ರಾಜ್ಯಾದ್ಯಂತ ಜಾತಿ ಸಮೀಕ್ಷೆ ನಡೆಯಲಿದೆ. ಸಮೀಕ್ಷೆ ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಂಪೂರ್ಣ ಸಜ್ಜಾಗಿದೆ. ಬರೋಬ್ಬರಿ 80 ವರ್ಷಗಳ ನಂತರ ಸಮಾಜದ ಪ್ರತಿ ಕುಟುಂಬದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಸಲುವಾಗಿ ಸಮೀಕ್ಷೆ ನಡೆಸಲಾಗುತ್ತಿದೆ.
ಎ.30 ರವರೆಗೆ ಸಮೀಕ್ಷೆ ನಡೆಯಲಿದ್ದು, ಇದಕ್ಕಾಗಿ ಸುಮಾರು 1.33 ಲಕ್ಷ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ 178 ತಾಲೂಕುಗಳಲ್ಲಿ ಏಕಕಾಲಕ್ಕೆ ಸಮೀಕ್ಷೆ ನಡೆಯಲಿದೆ. ರಜೆ ದಿನವೂ ಇದು ಮುಂದುವರೆಯಲಿದೆ.
ಪ್ರತಿ ದಿನ 8 ರಿಂದ 10 ಮನೆ ಗಣತಿ ಮಾಡುವಂತೆ ಪ್ರತಿಯೊಬ್ಬ ಗಣತಿದಾರರಿಗೆ ಸೂಚಿಸಲಾಗಿದೆ. ಪ್ರತಿ ಧರ್ಮ, ಜಾತಿ, ಉಪ ಜಾತಿಗೆ ಪ್ರತ್ಯೇಕ ಕೋಡ್ ಸಂಖ್ಯೆ ನೀಡಲಾಗಿದ್ದು, ಸಮೀಕ್ಷೆ ನಡೆಸುವವರು, ಮನೆಯ ಮುಖ್ಯಸ್ಥರು ನೀಡುವ ಮಾಹಿತಿ ಆಧರಿಸಿ ಎಲ್ಲ ಕಾಲಂಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು.
ಯಾವುದಾದರೂ ಕಾಲಂ ಖಾಲಿ ಬಿಡುವುದಾದರೆ, ಮನೆಯ ಮುಖ್ಯಸ್ಥರಿಂದ ಮಾಹಿತಿ ನೀಡುವುದಿಲ್ಲ ಎಂದು ಬರೆಸಿಕೊಂಡು ಬರಬೇಕು. ಸಮೀಕ್ಷೆಯ ಪ್ರತಿಯಲ್ಲಿ ನಿರ್ದಿಷ್ಟ ಜಾತಿ ಅಥವಾ ಉಪಜಾತಿ ನಮೂದಿಸಿದ್ದಿಲ್ಲದಿದ್ದರೆ, ಪ್ರತ್ಯೇಕವಾಗಿ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆಗಳ ಆಯುಕ್ತರ ಮೇಲ್ವಿಚಾರಣೆ ನಡೆಯಲಿದೆ.
ಈ ಸಮೀಕ್ಷೆಯಲ್ಲಿ ರಾಜ್ಯದ ಒಟ್ಟು 6.50 ಕೋಟಿ ಜನರ ಸಾಮಾಜಿಕ ಹಾಗೂ ಶೈಕ್ಷಣಿಕ ಮಾಹಿತಿ ಸಂಗ್ರಹಿಸಲಾಗುತ್ತದೆ. ರಾಜ್ಯದಲ್ಲಿ ಒಟ್ಟು 1.31 ಕೋಟಿ ಕುಟುಂಬಗಳಿದ್ದು, 176 ತಾಲೂಕುಗಳು, 352 ನಗರ ಪ್ರದೇಶಗಳು ಹಾಗೂ 198 ಬಿಬಿಎಂಪಿ ವಾರ್ಡ್ ಗಳಲ್ಲಿ ಸಮೀಕ್ಷೆ ಕಾರ್ಯ ನಡೆಯಲಿದೆ.
ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಅರಿಯಲು 80 ವರ್ಷಗಳ ಬಳಿಕ ಇಂತಹ ಸಮೀಕ್ಷೆ ನಡೆಸಲಾಗುತ್ತಿದ್ದು, ಗಣತಿದಾರರಿಗೆ ನಿಖರ ಮಾಹಿತಿಯನ್ನು ನೀಡುವ ಮೂಲಕ ಜನರು ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸರ್ಕಾರ ಮನವಿ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.