
ಧಾರವಾಡ: ಮಕ್ಕಳಂಥಾ ಮನವುಳ್ಳ ಸಂತರಲ್ಲಿ ಮುಗ್ಧಮನಸ್ಸಿನ ಮಕ್ಕಳು ಆಕರ್ಷಿತರಾಗಿ ಸಂತಸಪಡುವುದು ಪ್ರೇರೇಪಿತರಾಗುವುದು ಅತಿ ಸಹಜ. ಲೋಕದ್ದೆಲ್ಲಾ ಲೆಕ್ಕಾಚಾರಕ್ಕೂ ಅತಿ ಭಿನ್ನವಾಗಿದ್ದ , ಹೃದಿ ಭಕ್ತಿ ಶ್ರೀಮಂತಿಕೆಯಿಂದ ಸಮೃದ್ಧವಾದ ಚಿಣ್ಣರ ಕೂಟವೊಂದು ಧಾರವಾಡದ ಮಾಳಮಡ್ಡಿಯಲ್ಲಿರುವ ಶ್ರೀಮದ್ ಉತ್ತರಾದಿ ಮಠದ ಆವರಣದಲ್ಲಿ ಕೃಷ್ಣ ಜನ್ಮಾಷ್ಠಮಿಯ ಪರ್ವಕಾಲದಲ್ಲಿ ನೆರವೇರಿತು.
ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಸಂಸ್ಥಾನ ಶ್ರೀಮದ್ ಉತ್ತರಾದಿ ಮಠದ ಪೀಠಾಧಿಪತಿಗಳಾದ ಅನಂತ ಶ್ರೀ ಸಂಬೋಧಿತ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹೋಪದೇಶವನ್ನು ಪಡೆಯಲು “ಅಕ್ಷರ ಪ್ರಭಾವಂ” ಶೈಕ್ಷಣಿಕ ತರಬೇತಿಯಲ್ಲಿರುವ ಧಾರವಾಡ ಜಿಲ್ಲೆಯ 33 ಗ್ರಾಮಾಂತರದಿಂದ ಮಕ್ಕಳು ಮತ್ತು ಶಿಕ್ಷಕರು ಅತ್ಯಂತ ಉತ್ಸುಕತೆಯಿಂದ ಒಗ್ಗೂಡಿದ್ದರು.
ಮಹಾಸ್ವಾಮಿಗಳವರ ಚಾತುರ್ಮಾಸ್ಯ ವ್ರತಾಚರಣೆ ಕಾರ್ಯಕ್ರಮದ ಅಂಗವಾಗಿ ಶ್ರೀಕೃಷ್ಣ ಜನ್ಮಾಷ್ಟಮೀ ಮರುದಿನ, ವಿಠ್ಠಲಪಿಂಡಿ ಉತ್ಸವದಂದು ಗೋಧೂಳಿ ಸಮಯದಲ್ಲಿ ಸಮಾರಂಭ ನೆರವೇರಿಸಿದರು. ಮಕ್ಕಳು, ದೂರ-ದೂರದ ಗ್ರಾಮಗಳಿಂದ ರಂಗು ಗೋಪಿಕಾ ರಂಗ ವೇಷದಲ್ಲಿ ಸುಂದರವಾಗಿ ಶೃಂಗರಿಸಿದ್ದರು. ಮಿನುಗು ಕಣ್ಣುಗಳು, ಮುಗ್ಧ ನಗು, ವಿಠ್ಠಲ ಭಜನಾ ನಾದ, ತಾಳ ವಾದ್ಯಗಳ ಮೇಳ ಇವೆಲ್ಲವೂ ಸೇರಿ ಸುತ್ತಮುತ್ತಲಿನ ವಾತಾವರಣ ಕೃಷ್ಣಮಯವಾಗಿಸಿತ್ತು, ಶ್ರೀಮಠದ ಆವರಣ ಪುಟ್ಟ ಗೋಪಾಲರು ಕೂಡಿರುವ ಗೋಕುಲವಾಗೇ ಭಾಸವಾಗುತ್ತಿತ್ತು.

‘ಗ್ರಾಮ–ಗ್ರಾಮದಿಂದ ಬಂದ ಗೋಪಾಲ’ ಕಾರ್ಯಕ್ರಮದ ಉದ್ದೇಶ್ಯ ಮಕ್ಕಳಲ್ಲಿ ಕೃಷ್ಣಭಕ್ತಿ, ಸಂಸ್ಕಾರ, ಜ್ಞಾನನಿಷ್ಠೆ , ನಾಯಕತ್ವ, ಗೋಸೇವಾ ಸಾಮರಸ್ಯ, ಗ್ರಾಮವಿಕಾಸ ಹಾಗೂ ದೇಶಭಕ್ತಿ ಬೆಳೆಸುವುದಾಗಿತ್ತು.
ಈ ಪುಟ್ಟ ಗೋಪಾಲರ ಆಗಮನದ ಹಿಂದೆಯೂ ಒಂದು ವಿಶೇಷ ಪ್ರಾಚೀನ ಐತಿಹಾಸಿಕ ಹಿನ್ನೆಲೆಯ ಪ್ರೇರಣೆಯಿತ್ತು. ಪ್ರತಿಯೊಬ್ಬ ಮಗುವೂ ತನ್ನ ಮನೆಯಿಂದ ಶ್ರೀಕೃಷ್ಣ ಪ್ರೇಮದಲ್ಲಿ, ಕೃಷ್ಣ–ಸುಧಾಮರ ಸ್ನೇಹ-ಪ್ರೀತಿ ಸಂಕೇತವಾದ ಒಂದು ಹಿಡಿ ಅವಲಕ್ಕಿ ಮತ್ತು ತುಣುಕು ಬೆಲ್ಲವನ್ನು ಶ್ರದ್ಧೆಯಿಂದ ತಂದು, ಭಗವದ್ಸಂಕೇತವಾದ 48 ಕಮಲ, ಪುಷ್ಪ, ಫಲ ಹಾಗೂ ತುಳಸಿಯೊಂದಿಗೆ ಮಠದ ಸಂಸ್ಥಾನ, ಸುದೇವರ ನೈವೇದ್ಯಕ್ಕೆ ಶ್ರೀಕೃಷ್ಣಾರ್ಪಣ ಮಹಾಸ್ವಾಮಿಗಳಲ್ಲಿ ಮಾಡಲು ಸಂಗ್ರಹಿಸಿದ್ದರು .
ಮಕ್ಕಳಿಗಾಗಿ ಶ್ರೀಕೃಷ್ಣ ದೇವರ ಕಲಾತ್ಮಕ ಚಿತ್ರ ಬಿಡಿಸುವ ಕಲಾ ಕಾರಾಗಾರ ನಡೆಯಿತು. ನೈವೇದ್ಯವಾದ ಫಲಗಳನ್ನು ಮಕ್ಕಳು ಸ್ವೀಕರಿಸಿದರು. ನೀಲಿ ಆಗಸದ ಕೆಳಗೆ ನೀಲವರ್ಣ ಕೃಷ್ಣನ ಸಂಕೀರ್ತನೆ ಪ್ರಾರಂಭವಾಯಿತು. ಗಾಳಿ ತಂಪಿತ್ತು, ಸೂರ್ಯರಶ್ಮಿ ಹಿತವಿತ್ತು, ಮಳೆಯಿಂದ ತೊಳೆದ ಶುಭ್ರಹಾಸುಪಥ ಗಣಪತಿ ಸ್ತುತಿಯಿಂದ ನಿರ್ವಿಘ್ನವಾಗಿತ್ತು. ಪುಟ್ಟ ಪಾದಗಳು ಯಾತ್ರಿಸಿ , ಶ್ರೀಮಠದ ದೇವಾಲಯದತ್ತ ಹೊರಟಿದ್ದವು “ವಿಠ್ಠಲ!!!… ವಿಠ್ಠಲ!!!…” ಭಜನೆಗೆ ಕರ ತಟ್ಟಿದ ನೂರಾರು ಸಂಖ್ಯೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಉಕ್ಕಿದ ಹರಿ ಹರಿ ಭಕ್ತಿ ನದಿಯಂತೆ ಲಹರಿಸಿದರು. ಸಾರ್ವಜನಿಕರೂ, ಸನ್ಮಾನ್ಯ ರಕ್ಷಾಪಡೆ ಪೊಲೀಸ್ ಸಿಬ್ಬಂದಿಗಳೂ ಸಹ ಕೈಮುಗಿದು, ಕೊರಳುಗೂಡಿಸಿ, ಕೈತಟ್ಟಿ, ನಾಮಪ್ರಭುವಿಗೆ ಶರಣಾದರು. ಆ ಪುಟ್ಟರ ಭಜನಾ ತಂಡ ಪಂಡರಾಪುರದ ಅನುಭವವನ್ನು ಮೂಡಿಸಿತು.
ಮಕ್ಕಳನ್ನು ಅತ್ಯಂತ ಆತ್ಮೀಯವಾಗಿ ವಾದ್ಯದೊಂದಿಗೆ ಸುಸ್ವಾಗತಿಸಿದರು. ಕೃಷ್ಣಲೀಲೆ ಚರ್ಚಿಸಿ ಎಲ್ಲಾ ಮಕ್ಕಳ ಗೋ ಸೇವೆಯನ್ನು ಪ್ರಶಂಸಿಸಿ ಕಾರ್ಯಕ್ರಮದ ನಿರ್ವಹಣೆಯಾಯಿತು.
ಸ್ವಾಮಿಗಳವರ ಆಗಮನ ಉತ್ಸಾಹವನ್ನು ಮೂಡಿಸಿತು. ಈ ಸಂದರ್ಭದಲ್ಲಿ ಅಕ್ಷರ ಪ್ರಭಾವಂ ಪರ ಮಹಾಸ್ವಾಮಿಗಳವರಿಗೆ ಕೃತಜ್ಞತಾಪೂರ್ವಕ ಅನಂತ ನಮಸ್ಕಾರಗಳನ್ನು ಅರ್ಪಿಸಿದರು, ಮಹಾಸ್ವಾಮಿಗಳವರು ಮಕ್ಕಳು ಹಾಗೂ ‘ಅಕ್ಷರ ಪ್ರಭಾವಂ’ ತಂಡದ ಎಲ್ಲಾ ಶಿಕ್ಷಕರನ್ನು ಆಶೀರ್ವಚನದ ಮೂಲಕ ತುಂಬು ಹೃದಯದಿಂದ ಹರಸಿದರು.
ಮಕ್ಕಳಿಗೆ ಸಂದೇಶದಲ್ಲಿ ಹೇಳಿದರು-ನೀವೆಲ್ಲರೂ ಕೃಷ್ಣನ ಹಾಗೆ ಸಿಂಗರಿಸಿಕೊಂಡು ಬಂದಿದ್ದೀರಿ. ನಿಮ್ಮ ವೇಷದ ಜೊತೆಗೆ ಆಲೋಚನೆಯೂ ಪರಿವರ್ತನೆಯಾಗಲಿ. ಯಾರ ಜೊತೆಯೂ ಜಗಳವಾಡಬೇಡಿ. ಸದಾ ಸ್ನೇಹದಿಂದ ವರ್ತಿಸಿ. ಕೃಷ್ಣನ ಬಾಲಲೀಲೆಗಳನ್ನು ನೆನಪಿಸಿಕೊಳ್ಳಿ , ಕೃಷ್ಣ ತನ್ನ ಮಿತ್ರರೊಂದಿಗೆ ಹಂಚಿಕೊಂಡು ತಿನ್ನುವುದಲ್ಲದೇ , ಪ್ರಾಣಿ–ಪಕ್ಷಿಗಳಲ್ಲಿಯೂ ಮೈತ್ರಿ ಕರುಣಾಭಾವದಿಂದ ವರ್ತಿಸುತ್ತಿದ್ದನು, ಪರೋಪಕಾರದ ಭಾವ ಬೆಳೆಸಿಕೊಳ್ಳಿ. ನಮ್ಮ ಕೃಷ್ಣ ಕಳ್ಳನಲ್ಲಾ !!! ಎಲ್ಲಾ ಮನೆಯೂ ತನ್ನದೇ ಎಂದುಕೊಂಡಿದ್ದಾ ,ಅದೇ ರೀತಿ, ನಮ್ಮ ಹಳ್ಳಿಗಳೂ ಒಂದೇ ಕುಟುಂಬದಂತೆ ಒಗ್ಗೂಡಿ ಬದುಕಿ, ಮಕ್ಕಳನ್ನು ಬೆಳೆಸಿದರೆ ,ಎಲ್ಲಾ ಸಮಸ್ಯೆಗಳ ಪರಿಹಾರ ಸುಲಭ; ಅಭಿವೃದ್ಧಿ ಸಾಧ್ಯ! ಎಂಬ ಆಶಾವಾದ ಮೂಡಿಸಿದರು. ರಾಮ ರಾಮ ಭಜನೆ ಪ್ರಬೋಧಿಸಿದರು.
ಮಕ್ಕಳ ಮೇಲಿನ ವಾತ್ಸಲ್ಯದಿಂದ ಪ್ರತಿಯೊಬ್ಬ ಮಗುವಿಗೂ ತಮ್ಮ ಕೈಯಾರೆ ತಾವೇ ಸಿಹಿಲಡ್ಡುಗೆಯನ್ನು ನೀಡಿ ಆಶೀರ್ವದಿಸಿದ ಮಹಾಸ್ವಾಮಿಗಳವರು, ಮಕ್ಕಳ ಆರೋಗ್ಯಕ್ಕಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಸಂದೇಶದೊಂದಿಗೆ, ತುಂಬಿಸಿದ ಸ್ಟೀಲ್ ಎರಡು ಖಾನೆಯ ಊಟದ ಡಬ್ಬಿಗಳನ್ನು ತಮ್ಮ ಉಡುಗೊರೆಯಾಗಿ ನೀಡಿದರು. ಭಕ್ತರಿಗೆ ಅನ್ನ ಪ್ರಸಾದವೊದಗಿತು .
ಕಾರ್ಯಕ್ರಮದ ಅತ್ಯಂತ ಹೃದಯಸ್ಪರ್ಶಿ ಕ್ಷಣವೆಂದರೆ, ಧಾರವಾಡ ಜಿಲ್ಲೆಯ ಸಹಸ್ರಾರು ಗ್ರಾಮೀಣ ಮನೆಗಳಿಗೆ – ಶ್ರೀ ಸೀತಾ ದೇವೀ ಸಮೇತ ಶ್ರೀ ದಿಗ್ವಿಜಯ ಮೂಲ ರಾಮದೇವರ ದಿವ್ಯ ಅನುಗ್ರಹ ತಲುಪಬೇಕು ಎಂಬ ಸದುದ್ದೇಶ್ಯದಿಂದ, ಮಹಾಸ್ವಾಮಿಗಳವರು ಹಳ್ಳಿ–ಹಳ್ಳಿಗಾಗಿ ಮಕ್ಕಳಿಗೆ ಮಂತ್ರಾಕ್ಷತೆಯನ್ನು 10,000ಕ್ಕೂ ಹೆಚ್ಚು ಮನೆಗಳ ಮುಟ್ಟುವಂತೆ ದಯಪಾಲಿಸಿದರು. ಹೀಗೆ ಮಕ್ಕಳ ಒಂದು ಹಿಡಿ ಅವಲಕ್ಕಿ ಅರ್ಪಣೆ -ಮುತ್ತು ರತ್ನಗಳಿಗಿಂತ ಅತ್ಯಮೂಲ್ಯ ಅಕ್ಷಯ ವೇದ ಮಂತ್ರಿತ ಮಂತ್ರಾಕ್ಷತೆ, ಗ್ರಾಮ ಗ್ರಾಮಗಳಿಗೆ ಪ್ರಸಾದ ,ರಾಮರಕ್ಷಾ ರೂಪದಲ್ಲಿ ಮರು ಪಡೆದುಕೊಳ್ಳುವ ಸೌಭಾಗ್ಯ ಒದಗಿಬಂದಿತು .
ಮುಸ್ಸಂಜೆಯಲ್ಲಿ ಗೋಕುಲದ ನೃತ್ಯ ಕಲಿತು ನಲಿದಾಡಿದ, ಗ್ರಾಮಗಳಿಂದ ಬಂದ ಪುಟ್ಟ ಗೋಪಾಲರು ನಕ್ಕು, ನಲಿದು, ಹಾಡಿ, ಕುಣಿದು, ಭಜಿಸಿ, ರಾಮ ರಾಮ ನಾಲಿಗೆಯಲ್ಲಿ, ಭಕ್ತಿ ಸಿಹಿ ಕರದಲ್ಲಿ, ಆಶೀರ್ವಾದ ಶಿರ ಹೃದಯಗಳಲ್ಲಿ ಪಡೆದು, ತಮ್ಮ ಗ್ರಾಮಗಳಿಗೆ ಮರಳಿ ಸ್ಪೂರ್ತಿಯನ್ನು ಹಂಚಹೊರಟರು.
ಮಹಾಸ್ವಾಮಿಗಳ ಪರಿಣಾಮಕಾರಿ ಮಾತನ್ನು ಕೇಳಿದ ಮಕ್ಕಳು, ತಾವು ಪಡೆದ ಪ್ರಸಾದವನ್ನು ಮನೆಯಲ್ಲಿ ಹಂಚಿ ಸ್ವೀಕಾರ ಮಾಡಿದರು. ವಸುದೈವ ಕುಟುಂಬಕಂ ಕೇಳಿದ್ದೆವು, ಇವತ್ತು ಮಹಾಸ್ವಾಮಿಗಳ ಅನುಗ್ರಹದಿಂದ ಅನುಭಸಿದೆವು ಎಂದು ಶಿಕ್ಷಕರು ಭಕ್ತಿಭಾವುಕರಾದರು.
ರಾಮ ರಾಮ ಜಪ ತಾವೂ ಮಾಡಿ, ಮನೆ ಮನೆಯಲ್ಲಿ ರಾಮ ರಾಮ ನಾಮ ಎಲ್ಲರಲ್ಲಿ ಮೂಡಿಸಿಯೇ, ಮಂತ್ರಾಕ್ಷತೆ ರಾಮನಾಮೋತ್ಸವ ಆಚರಿಸಿ ಗ್ರಾಮ-ಗ್ರಾಮದಲ್ಲಿ ರಾಮರಕ್ಷಾ ಪಸರಿಸಿದರೀ ಚಿಣ್ಣರು .
ಚಾತುರ್ಮಾಸ್ಯದಿಂದ ಏಳುವ ಸಂದರ್ಭ ಬಂದರೂ ಧಾರವಾಡಜಿಲ್ಲೆ ಮಂದಿಮನದಿಂದ ಮಾತ್ರ ,ಒಟ್ಟು ಏಳ ಬಿಡರೀ ಸಂತರನ್ನು !
ನಮ್ಮ ಹಳ್ಳಿಗೆ ನಮಗೆ ಇಷ್ಟು ಸ್ಫೂರ್ತಿ ಪ್ರೀತಿ ಕೊಟ್ಟ ಸ್ವಾಮಿಗಳವರು ಯಾವಾಗ ಬರುತ್ತಾರೆ ಎಂದು ಶುದ್ಧ ಮನಸ್ಕ ಅಪೇಕ್ಷೆಯಿಂದ ,ಎದುರುಕಂಡು ಕಾಯುತ್ತಿದ್ದಾರೀ ,ಅರಳು ಕಣ್ಣಿನ ಧಾರವಾಡದ ಹೆಮ್ಮೆಯ ಹೊಮ್ಮಣ್ಣಿನ ಮಕ್ಕಳು!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



