
ನವದೆಹಲಿ: ಇಂದು ‘ಮೇಕ್ ಇನ್ ಇಂಡಿಯಾ’ (Make in India) ಉಪಕ್ರಮಕ್ಕೆ 12 ವರ್ಷಗಳು ತುಂಬಿವೆ. ಉತ್ಪಾದನೆ, ವಿನ್ಯಾಸ ಮತ್ತು ನಾವೀನ್ಯತೆಯ ಜಾಗತಿಕ ಕೇಂದ್ರವಾಗುವ ಮಹತ್ವಾಕಾಂಕ್ಷೆಯೊಂದಿಗೆ 2014ರ ಇದೇ ದಿನದಂದು ಈ ಉಪಕ್ರಮವನ್ನು ಪ್ರಾರಂಭಿಸಲಾಯಿತು. ವಿವಿಧ ಕೈಗಾರಿಕೆಗಳಲ್ಲಿ ಉತ್ಪಾದನೆ, ಹೂಡಿಕೆ ಮತ್ತು ಸಾಮರ್ಥ್ಯಗಳನ್ನು ವಿಸ್ತರಿಸುವ ಮೂಲಕ ಈ ಉಪಕ್ರಮವು ಭಾರತದ ಉತ್ಪಾದನಾ ವಲಯದ ಚಿತ್ರಣವನ್ನೇ ಬದಲಾಯಿಸಿದೆ.
ವ್ಯಾಪಾರಗಳು ಮತ್ತು ಹೂಡಿಕೆದಾರರಿಗೆ ಭಾರತದ ಉತ್ಪಾದನಾ ಪಯಣದಲ್ಲಿ ಪಾಲ್ಗೊಳ್ಳಲು ‘ಮೇಕ್ ಇನ್ ಇಂಡಿಯಾ’ ಹೊಸ ಅವಕಾಶಗಳನ್ನು ಕಲ್ಪಿಸಿದೆ. , ‘ಮೇಕ್ ಇನ್ ಇಂಡಿಯಾ 2.0’ ಅಡಿಯಲ್ಲಿ ಈ ಉಪಕ್ರಮವನ್ನು ವಿಸ್ತರಿಸಲಾಗಿದೆ. ಪ್ರಸ್ತುತ ಈ ಉಪಕ್ರಮವು 27 ವಲಯಗಳ ಮೇಲೆ ಗಮನಹರಿಸುತ್ತಿದ್ದು, ಇದರಲ್ಲಿ 15 ಉತ್ಪಾದನಾ ವಲಯಗಳು ಮತ್ತು 12 ಸೇವಾ ವಲಯಗಳು ಸೇರಿವೆ.
ಹೂಡಿಕೆಗೆ ಅನುಕೂಲ ಕಲ್ಪಿಸುವುದು, ನಾವೀನ್ಯತೆಯನ್ನು ಉತ್ತೇಜಿಸುವುದು ಮತ್ತು ವಿಶ್ವದರ್ಜೆಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದರ ಮೇಲೆ ಈ ಉಪಕ್ರಮವು ಗಮನಹರಿಸಿದೆ. ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ (Minimum Government, Maximum Governance) ತತ್ವದಡಿ, ಇದು ಪ್ರಕ್ರಿಯೆಗಳು ಮತ್ತು ನೀತಿಗಳನ್ನು ಆಧುನೀಕರಿಸುವ ಪ್ರಯತ್ನವನ್ನೂ ಮಾಡಿದೆ. ಈ ಉಪಕ್ರಮದ ಅಡಿಯಲ್ಲಿ, ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು ಸುಮಾರು ಏಳು ಪಟ್ಟು ಹೆಚ್ಚಾಗಿದೆ; ಅಂದರೆ 2014-15ರಲ್ಲಿ 1.9 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದ ಉತ್ಪಾದನೆಯು 2025-26ರ ವೇಳೆಗೆ 13 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕವಾಗಿದೆ. ಇದೇ ಅವಧಿಯಲ್ಲಿ ಮೊಬೈಲ್ ಫೋನ್ ಉತ್ಪಾದನೆಯು ಸುಮಾರು 33 ಪಟ್ಟು ಹೆಚ್ಚಾಗಿದ್ದು, 18 ಸಾವಿರ ಕೋಟಿ ರೂಪಾಯಿಗಳಿಂದ 6.27 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ಈ ಅವಧಿಯಲ್ಲಿ, ಭಾರತೀಯ ರೈಲ್ವೆಯು 2014-24ರ ನಡುವೆ ಸುಮಾರು 55 ಸಾವಿರ ಕೋಚ್‌ಗಳನ್ನು (ರೈಲು ಬೋಗಿಗಳನ್ನು) ತಯಾರಿಸಿದೆ. ಸರಾಸರಿ ವಾರ್ಷಿಕ ರೈಲ್ವೆ ಕೋಚ್ ಉತ್ಪಾದನೆಯು 2004-14ರ ಅವಧಿಯಲ್ಲಿ 3,300ಕ್ಕಿಂತ ಕಡಿಮೆ ಇದ್ದದ್ದು, 2014-24ರ ಅವಧಿಯಲ್ಲಿ 5,000ಕ್ಕೂ ಅಧಿಕಕ್ಕೆ ಏರಿಕೆಯಾಗಿದೆ. 2025-26ರಲ್ಲಿ 6,600ಕ್ಕೂ ಹೆಚ್ಚು ಲಿಂಕ್ ಹಾಫ್‌ಮನ್ ಬುಷ್ (LHB) ಕೋಚ್‌ಗಳನ್ನು ತಯಾರಿಸಲಾಗಿದೆ.
ಇದಲ್ಲದೆ, ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಅಡಿಯಲ್ಲಿ, ದೇಶದ ಸ್ವದೇಶಿ ರಕ್ಷಣಾ ಉತ್ಪಾದನೆಯು 2014-15ರಲ್ಲಿ 46,429 ಕೋಟಿ ರೂಪಾಯಿಗಳಷ್ಟಿದ್ದದ್ದು, 2025-26ರ ಆರ್ಥಿಕ ವರ್ಷದಲ್ಲಿ ದಾಖಲೆಯ 1.78 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ; ಇದರೊಂದಿಗೆ ಉತ್ಪಾದನೆಯು 2014-15ರ ಮಟ್ಟಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾದಂತಾಗಿದೆ. ಈ ಉಪಕ್ರಮವು ಈಗ ಕೇವಲ ಹೆಚ್ಚಿನ ಸರಕುಗಳ ಉತ್ಪಾದನೆಯನ್ನು ಮೀರಿ, ಅವುಗಳನ್ನು ಭಾರತದಲ್ಲಿಯೇ ತಯಾರಿಸಲು ಅಗತ್ಯವಾದ ಕೌಶಲ, ತಂತ್ರಜ್ಞಾನ ಮತ್ತು ಸಾಮರ್ಥ್ಯವನ್ನು ಬೆಳೆಸುವತ್ತ ಗಮನಹರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



