
ಪುತ್ತೂರು:-ಫೆ.12 ಬೈಪಾಸ್ ರಸ್ತೆ ಇಲ್ಲಿನ ರವೀಂದ್ರ ಕಾಂಪ್ಲೆಕ್ಸ್ ನಲ್ಲಿ ಪ್ರಥಮ ಬಾರಿಗೆ ಸೈಕಾಲಜಿಸ್ಟ್ ಹಾಗೂ ಶಿಕ್ಷಣ ತಜ್ಞರಿಂದಲೇ ನಡೆಸಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಲಕ್ಷ್ಯ ಡೇ ಕೇರ್ ಸೆಂಟರ್ ಹಾಗೂ ಲಕ್ಷ್ಯ ಕೌನ್ಸಿಲಿಂಗ್ ಸೆಂಟರ್ ಲೋಕಾರ್ಪಣೆಗೊಂಡಿತು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯ ಜಿತಕಾಮನಂದಜಿ ಲಕ್ಷ್ಯ ಡೇ ಕೇರ್ ಸೆಂಟರ್ ಉದ್ಘಾಟಿಸಿ, ಲಕ್ಷ್ಯ ಡೇ ಕೇರ್ ಒಂದು ವಿನೂತನ ಹೆಜ್ಜೆಯನ್ನು ಇಡುತ್ತಿದೆ. ಮನಃ ಶಾಸ್ತ್ರದ ಹಾಗೂ ಆಧ್ಯಾತ್ಮಿಕ ಹಿನ್ನಲೆಯಲ್ಲಿ ಮಕ್ಕಳಿಗೆ ಅನೇಕ ಚಟುವಟಿಕೆಗಳನ್ನು ಜೋಡಿಸಿಕೊಂಡಿರುವುದು ಶ್ಲಾಘನೀಯ ಸಂಗತಿ. ಒಂದು ಎಳೆ ಮಗುವಿಗೆ ಕೇವಲ ಉತ್ತಮ ಆಹಾರಕ್ರಮ ಮಾತ್ರವೇ ಪರಿಣಾಮವನ್ನು ಬೀರುವುದಿಲ್ಲ. ಮಗುವಿನ ಮಿದುಳಿಗೆ ಸರಿಯಾದ ಪ್ರಮಾಣದಲ್ಲಿ ಜ್ಞಾನಾರ್ಜನೆಯಾಗಬೇಕು. ಆಗ ಮಾತ್ರವೇ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ. ಇದರೊಂದಿಗೆ ಪಾಲಕರು ಕೂಡಾ ಇತ್ತೀಚಿನ ದಿನಗಳಲ್ಲಿ ಮಾರ್ಗದರ್ಶನವನ್ನು ಪಡೆಯಬೇಕಿರುವ ಅಗತ್ಯತೆ ಕಾಣುತ್ತಿದೆ. ಗರ್ಭಾವಸ್ಥೆಯಲ್ಲೇ ಮಗುವಿಗೆ ಸಂಸ್ಕಾರವನ್ನು ಕೊಡಲು ಅವಕಾಶವಿದ್ದು ಅದನ್ನು ಪುತ್ತೂರಿನಲ್ಲೇ ಪಡೆಯಲು ಸಾಧ್ಯವಾಗುವಂತೆ ಲಕ್ಷ್ಯ ತಂಡವು ಮಾಡುತ್ತಿದೆ. ಮಗುವಿನ ಹುಟ್ಟು ಸಂಸ್ಕಾರ ಅದರ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು.
ತದನಂತರ ಕಲ್ಲಡ್ಕ ಡಾ.ಪ್ರಭಾಕರ ಭಟ್ ಇವರು ಲಕ್ಷ್ಯ ಕೌನ್ಸಿಲಿಂಗ್ ಸೆಂಟರ್ ಉದ್ಘಾಟಿಸಿ, ಮನಸ್ಸು ಒಂದಿದ್ದರೆ ಏನನ್ನು ಬೇಕಿದ್ದರೂ ಸಾಧಿಸಬಹುದು. ಮನಸ್ಸೇ ಎಲ್ಲದಕ್ಕೂ ಕಾರಣವಾಗಿರುವಾಗ ನೆಮ್ಮದಿಯ ಮನಸ್ಸಿಲ್ಲದಿದ್ದರೆ ಜೀವನದಲ್ಲಿ ಯಾವುದೂ ಇಲ್ಲವಾದಂತೆ. ಲಕ್ಷ್ಯ ತಂಡವು ಈ ಮೊದಲು ಅನೇಕ ಸಂಶೋಧನೆಯನ್ನು ಮಾಡುತ್ತಾ ಒಂದು ಬಾರಿ ನಮ್ಮ ಬಳಿಗೂ ಬಂದಿದ್ದರು. ಶ್ರೀ ದುರ್ಗಾಪರಮೇಶ್ವರ ಭಟ್ಟರಲ್ಲಿ ಶಿಕ್ಷಣದ ಬಗ್ಗೆ ವಿಶೇಷವಾದ ಚಾಕಚಕ್ಯತೆ ಇದೆ. ಶಿಕ್ಷಣ ಕ್ಷೇತ್ರದ ಹಲವಾರು ಸಂಸ್ಥೆಗಳಿಗೆ ಇದೊಂದು ಉತ್ತರವಾಗಬಲ್ಲದು. ತಮ್ಮ ತಾರುಣ್ಯಾವಸ್ಥೆಯಲ್ಲೇ ಬಹುದೊಡ್ಡ ಆಲೋಚನೆಗಳನ್ನು ಹೊಂದಿರುವ ಸಂಸ್ಥೆಯೊಂದನ್ನು ಸಮಾಜಕ್ಕೆ ನೀಡುತ್ತಿದ್ದಾರೆ. ಇದು ಅತ್ಯಂತ ಶ್ಲಾಘನೀಯ ಎಂದರು.
ಸಂಸ್ಥೆಯ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಬೆಳಗ್ಗೆ ಸರಸ್ವತಿ ಪೂಜಾ ಕಾರ್ಯವು ವೇದಮೂರ್ತಿ ಶ್ರೀ ಕೃಷ್ಣ ಉಪಾಧ್ಯಾಯ ಇವರಿಂದ ನಡೆಯಿತು. ಲಕ್ಷ್ಯ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ದುರ್ಗಾಪರಮೇಶ್ವರ ಭಟ್ ಇವರು ಸಂಪೂರ್ಣ ಕಾರ್ಯಕ್ರಮದ ನಿರ್ವಹಣೆ ನಡೆಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸನಾತನ ಸಂಸ್ಕೃತಿ ಬಲವರ್ಧನೆ ಹಿನ್ನಲೆಯಲ್ಲಿ “ಸಮಾಜ ನಿಧಿ” ಕಾಣಿಕೆಯನ್ನು ಶ್ರೀ ಸುಬ್ರಹ್ಮಣ್ಯ ಭಟ್ ಮಜ್ಜಾರಡ್ಕ ಇವರು ಡಾ. ಪ್ರಭಾಕರ ಭಟ್ ಇವರಿಗೆ ಹಸ್ತಾಂತರ ಮಾಡಿದರು. ಡೇ ಕೇರ್ ಸೆಂಟರ್ ಮುಖ್ಯ ನಿರ್ವಾಹಕಿ ಅರ್ಪಿತಾ ಎಂ, ನೇತ್ರಪ್ರಭಾ ಮೊದಲಾದ ಗಣ್ಯರು ಉಪಸ್ಥಿತರಿದ್ದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


