
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದ ರೈತರ ಬಗ್ಗೆ ನೈಜ ಕಾಳಜಿಯಿಂದ ಕೆಲಸ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ರೈತರಿಗೆ ಸಹಕಾರಿ ಆಗುವಂಥ ಕಾರ್ಯಕ್ರಮಗಳನ್ನು ನೀಡುವಲ್ಲಿ ಸಿದ್ದರಾಮಯ್ಯರ ನೇತೃತ್ವದ ಸರಕಾರ ವಿಫಲವಾಗಿದೆ. ಅತಿವೃಷ್ಟಿ ಸಂದರ್ಭದಲ್ಲೂ ಕೃಷಿ ಸಚಿವರು, ಕಂದಾಯ ಸಚಿವರು, ಇಲಾಖೆಯ ಕಾರ್ಯದರ್ಶಿಗಳು ಯಾವುದೇ ಜಿಲ್ಲೆಗೆ ತೆರಳಿಲ್ಲ; ಅಲ್ಲಿನ ರೈತರ ಪರಿಸ್ಥಿತಿಯನ್ನು ಅಧ್ಯಯನ ಮಾಡುವ ಪ್ರಯತ್ನವನ್ನೂ ಮಾಡಿಲ್ಲ ಎಂದು ಟೀಕಿಸಿದರು.
ನೆರೆಯ ಮಹಾರಾಷ್ಟ್ರ ಸರಕಾರವು ರೈತರಿಗೆ ಪರಿಹಾರ ಘೋಷಿಸಿ, ನೀಡಿದ್ದರೂ ನಮ್ಮ ರಾಜ್ಯದಲ್ಲಿ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರವು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಸಂಕಷ್ಟದಲ್ಲಿರುವ ರೈತರಿಗೆ ಬಿಡಿಗಾಸನ್ನೂ ನೀಡಲು ಇವರಿಗೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ತಹಸೀಲ್ದಾರರ ಕಚೇರಿಗೆ ಹತ್ತಾರು ಬಾರಿ ಸುತ್ತಾಡಿದರೂ ಕೆಲಸ ಆಗದೇ ಮಂಡ್ಯದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಿನ್ನೆ ನಡೆದಿದೆ. ಮತ್ತೊಂದೆಡೆ ಕಬ್ಬು ಬೆಳೆಗಾರರು ಕಳೆದ ಐದಾರು ದಿನಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆ, ಬಿಜಾಪುರ ಭಾಗದ ಬೆಳೆಗಾರರು ರಾಜ್ಯ ಸರಕಾರದ ಗಮನ ಸೆಳೆಯುವ ಕೆಲಸ ಮಾಡಿದರೂ, ಪರಿಹಾರ ಕೊಟ್ಟಿಲ್ಲ; ಯಾವುದೇ ಸಚಿವರು ಬೆಳೆಗಾರರನ್ನು ಭೇಟಿ ಮಾಡುವ ಪ್ರಯತ್ನ ಮಾಡಿರಲಿಲ್ಲ ಎಂದು ದೂರಿದರು.
ನಾನು ಮೊನ್ನೆ ಹೋರಾಟ, ಪ್ರತಿಭಟನೆಯಲ್ಲಿ, ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿದ್ದೇನೆ. ನನ್ನ ಜನ್ಮದಿನವನ್ನು ಅಲ್ಲಿನ ಕಬ್ಬು ಬೆಳೆಗಾರರ ಜೊತೆ ಆಚರಿಸಿ ಬಂದಿದ್ದೇನೆ. ನಿನ್ನೆ ಹೋರಾಟದ ಬಿಸಿ ತಟ್ಟಿದ್ದರಿಂದ ಸಚಿವ ಎಚ್.ಕೆ.ಪಾಟೀಲರು ಅಲ್ಲಿಗೆ ಬಂದಿದ್ದಾರೆ. ಆದರೆ, ರೈತರ ಕೋರಿಕೆ ಈಡೇರಿಸಿಲ್ಲ; ಆ ನಿಟ್ಟಿನಲ್ಲಿ ಪ್ರಯತ್ನವನ್ನೂ ಮಾಡಿಲ್ಲ ಎಂದು ಟೀಕಿಸಿದರು.
ಪಾಟೀಲರು ನೀಡಿದ ಹೇಳಿಕೆಯನ್ನು ಬೆಂಗಳೂರಿನ ಎ.ಸಿ. ಕೊಠಡಿಯಲ್ಲಿ ಕುಳಿತೇ ಕೊಡಬಹುದಾಗಿತ್ತು. ಹೋರಾಟದ ಸ್ಥಳದಲ್ಲಿ ಬಂದು ಹೇಳುವ ಅವಶ್ಯಕತೆ ಇರಲಿಲ್ಲ ಎಂದು ಆಕ್ಷೇಪಿಸಿದರು. ಅಲ್ಲಿ ಬಂದಾಗ ಕಬ್ಬು ಬೆಳೆಗಾರರ ಪರಿಸ್ಥಿತಿ ಅರ್ಥ ಮಾಡಿಕೊಂಡು ಪರಿಹಾರ ಕಲ್ಪಿಸಬೇಕಿತ್ತು ಎಂದರು.
ಈಗಲೂ ಕಾಲ ಮಿಂಚಿಲ್ಲ; ಕೇಂದ್ರ ಸರಕಾರವನ್ನು ದೂರುವುದನ್ನು ಬದಿಗಿಡಿ; ಕೇಂದ್ರದ ಬಗೆಗಿನ ಮುಖ್ಯಮಂತ್ರಿಗಳ, ಸಕ್ಕರೆ ಸಚಿವರ ಹೇಳಿಕೆ ಅರ್ಧ ಸತ್ಯ ಮಾತ್ರ ಎಂದು ತಿಳಿಸಿದರು. ರಾಜ್ಯ ಸರಕಾರ ಮನಸ್ಸು ಮಾಡಿದರೆ, ಸಕ್ಕರೆ ಕಾರ್ಖಾನೆ ಮಾಲೀಕರನ್ನು ಕೂರಿಸಿಕೊಂಡು ಕಬ್ಬು ಬೆಳೆಗಾರರಿಗೆ ನ್ಯಾಯ ಕೊಡಲು ಸಾಧ್ಯವಿದೆ ಎಂದು ತಿಳಿಸಿದರು.
2014ರಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಯಡಿಯೂರಪ್ಪ ಅವರು ಸದನದ ಒಳಗೆ ಮತ್ತು ಹೊರಗಡೆ ಹೋರಾಟ ಮಾಡಿದ್ದರಿಂದ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರವು ಹೆಚ್ಚು ದರ ನಿಗದಿ ಪಡಿಸಿತ್ತು ಎಂದು ವಿವರಿಸಿದರು. ಇಷ್ಟೆಲ್ಲ ಉದಾಹರಣೆಗಳಿದ್ದರೂ ಸಿಎಂ ಕುರ್ಚಿಗೆ ಪೈಪೋಟಿ ನಡೆದಿದೆ; ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳೇ ಸ್ಥಳಕ್ಕೆ ತೆರಳಿ ಸಮಸ್ಯೆ ಪರಿಹರಿಸಬೇಕಿತ್ತು ಎಂದು ತಿಳಿಸಿದರು.
ಕಾಂಗ್ರೆಸ್ ಸರಕಾರವು ರೈತರಿಗೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ರೈತವಿರೋಧಿ ನಡವಳಿಕೆ ತೋರುತ್ತಿದ್ದು, ಇದು ಅಕ್ಷಮ್ಯ ಅಪರಾಧ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ತಾತ್ಸಾರ ಮಾಡದೇ, ಕಬ್ಬು ಬೆಳೆಗಾರರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



