ಬೆಂಗಳೂರು: ರಾಜ್ಯ ಸಚಿವಸಂಪುಟದ ಸಭೆ ಇದೇ 4ರಂದು ನಡೆಯಲಿದೆ. ಆ ಸಂದರ್ಭದಲ್ಲಿ ನಾಗಮೋಹನ್ದಾಸ್ ಅವರ ವರದಿ ಅಥವಾ ಮಾಧುಸ್ವಾಮಿಯವರ ನೇತೃತ್ವದ ವರದಿಯನ್ನು ಒಪ್ಪಿ ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಅವರು ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲೆಮಾರಿ ಗುಂಪುಗಳಿಗೆ ಅನ್ಯಾಯವಾಗಿದೆ. ಬೆಂಗಳೂರು ಸೇರಿ ನಾಳೆ ಇಡೀ ರಾಜ್ಯದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಗಮನ ಸೆಳೆದರು. ಸಮಾನರು- ಅಸಮಾನರನ್ನು ಒಂದೇ ಪ್ರವರ್ಗದಲ್ಲಿ ತರಬಾರದೆಂಬ ಸುಪ್ರೀಂ ಕೋರ್ಟಿನ ಸೂಚನೆಯನ್ನು ಕೂಡ ಪಾಲಿಸಿಲ್ಲ; ನಾಗಮೋಹನ್ದಾಸ್ ಅವರ ವರದಿಯನ್ನೂ ಪರಿಗಣಿಸಿಲ್ಲ. ಇಲ್ಲಿ ರಾಜಕೀಯ ತೇಪೆ ಹಚ್ಚುವ ವರ್ಗೀಕರಣ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜಕೀಯ ಇಚ್ಛಾಶಕ್ತಿ, ರಾಜಕೀಯ ಲಾಭಕ್ಕಾಗಿ ವರ್ಗೀಕರಣ ಮಾಡಿದ್ದಾರೆ. ಇದನ್ನು ಒಪ್ಪಲಾಗದು ಎಂದು ತಿಳಿಸಿದರು. ಸರಕಾರವು ಬಹಳ ತರಾತುರಿಯಲ್ಲಿ ನೇಮಕಾತಿ ಪ್ರಾರಂಭ ಮಾಡಿದೆ. ಕೆಪಿಎಸ್ಸಿಗೂ ನಿರ್ದೇಶನ ನೀಡಿದ್ದು, ನೇಮಕಾತಿ ಪ್ರಕ್ರಿಯೆಗಳು ಈ ಗೊಂದಲದ ನಡುವೆ ಪ್ರಾರಂಭವಾಗಿದೆ ಎಂದರು. ನೇಮಕಾತಿ ಪ್ರಕ್ರಿಯೆಯನ್ನು ನಿಲ್ಲಿಸಬೇಕು; ಉದ್ಯೋಗ, ಶಿಕ್ಷಣ, ಅನುದಾನಕ್ಕೂ ಈ ಆದೇಶ ಅನ್ವಯ ಆಗುವಂತೆ ಮಾರ್ಪಾಡು ಮಾಡಬೇಕೆಂದು ಒತ್ತಾಯಿಸಿದರು.
ಸಿದ್ದರಾಮಯ್ಯನವರ ಸರಕಾರವು ಸರ್ವ ಪಕ್ಷಗಳ ಚುನಾಯಿತ ಜನಪ್ರತಿನಿಧಿಗಳ ವಿಶೇಷ ಸಭೆ ಕರೆಯಬೇಕು. ಈ ಸಭೆಗೆ ಮೀಸಲಾತಿಯ ಜ್ಞಾನ ಇರುವವರು, ನಿವೃತ್ತ ಅಧಿಕಾರಿಗಳನ್ನೂ ಕರೆಯಬೇಕು. ಅಲ್ಲಿ ತೀರ್ಮಾನಿಸಿದರೆ ಎಲ್ಲರಿಗೂ ಒಪ್ಪಿಗೆ ಆಗಲಿದೆ ಎಂದು ಸಲಹೆ ನೀಡಿದರು.
ಹಿಂದೆ ಬಸವರಾಜ ಬೊಮ್ಮಾಯಿಯವರ ನೇತೃತ್ವದ ನಮ್ಮ ಪಕ್ಷದ ಸರಕಾರ ಇದ್ದಾಗ, ಮಾಧುಸ್ವಾಮಿಯವರ ನೇತೃತ್ವದ ವರದಿಯು ಹೆಚ್ಚುಕಡಿಮೆ ಎಲ್ಲ ಜನಾಂಗದವರು ಒಪ್ಪಿಗೆ ಆಗುವಂಥ ವರದಿಯಾಗಿತ್ತು. ಮಾದಿಗ- 6, ಛಲವಾದಿ- ಶೇ5.5, ಲಂಬಾಣಿ, ಬೋವಿ, ಕೊರಮ- ಕೊರಚ ಶೇ 4.5, ಅಲೆಮಾರಿಗಳಿಗೆ ಶೇ 1 ಸೇರಿಸಿದ್ದರು. ಅದು ಸರಿಯಿಲ್ಲವೆಂದು 150 ಕೋಟಿ ಖರ್ಚು ಮಾಡಿ ನಾಗಮೋಹನ್ದಾಸ್ ಅವರ ವರದಿ ತಯಾರು ಮಾಡಿಸಿ, ನಾಗಮೋಹನ್ದಾಸ್ ಅವರಿಗೂ ಅವಮಾನ ಮಾಡಿದ್ದಾರೆ. 150 ಕೋಟಿ ಸರಕಾರಿ ಬೊಕ್ಕಸಕ್ಕೆ ಹಾನಿ ಮಾಡುವ ಕೆಟ್ಟ ಕೆಲಸವನ್ನು ಸಿದ್ದರಾಮಯ್ಯನವರ ಸರಕಾರ ಮಾಡಿದೆ ಎಂದು ಗೋವಿಂದ ಕಾರಜೋಳ ಅವರು ಆರೋಪಿಸಿದರು.
ಸಚಿವಸಂಪುಟದ ಸಭೆಗೆ ಹಿಂದಿನ ದಿನ ಗೃಹ ಸಚಿವ ಡಾ.ಪರಮೇಶ್ವರ್ ಅವರ ಮನೆಯಲ್ಲಿ ಇಡೀ ರಾತ್ರಿ ಸಭೆ ಮಾಡಿ ಈ ಖಾಜಿ ನ್ಯಾಯ ಮಾಡಿದರು. ಡಾ. ಪರಮೇಶ್ವರ್, ಶಿವರಾಜ ತಂಗಡಗಿ, ಮಹದೇವಪ್ಪ ಅವರು ತೃಪ್ತಿ ಪಟ್ಟಿದ್ದಾರೆಂದು ಸಚಿವ ಸಂಪುಟದ ನಿರ್ಧಾರವನ್ನು ಮಾಧ್ಯಮಗಳಿಗೆ ತಿಳಿಸುವಾಗ ಎಚ್.ಕೆ.ಪಾಟೀಲರು ಹೇಳಿದ್ದಾರೆ ಎಂದು ತಿಳಿಸಿದರು. ಕ್ಯಾಬಿನೆಟ್ನ ಈ ನಿರ್ಧಾರವನ್ನು ನಾವು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಳೆದ 35 ವರ್ಷಗಳಿಂದ ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾಗಬೇಕು; ಎಸ್ಸಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಮೀಸಲಾತಿ ಸೌಲಭ್ಯ ಕೊಡಬೇಕು ಎಂಬ ಬೇಡಿಕೆ ಮುಂದಿಟ್ಟು ಹೋರಾಟ ಮಾಡಿದ್ದೆವು. ಇದರ ಪ್ರತಿಫಲ ಮತ್ತು ಆಗಸ್ಟ್ 1, 2024 ರಂದು ಸುಪ್ರಿಂ ಕೋರ್ಟ್ ಸಂವಿಧಾನ ಪೀಠದ ತೀರ್ಪಿಗೆ ಮಸಿ ಬಳಿಯುವ ಕೆಲಸವನ್ನು ಸಿದ್ದರಾಮಯ್ಯನವರ ಸರಕಾರ ಮಾಡಿದೆ ಎಂದು ಆಕ್ಷೇಪಿಸಿದರು.
ಸಚಿವ ಸಂಪುಟದ ವಿಶೇóಷ ಸಭೆಯಲ್ಲಿ ಸಚಿವರ ರಾಜಕೀಯ ಒತ್ತಡಕ್ಕೆ ಮಣಿದು ಸಿದ್ದರಾಮಯ್ಯನವರು ನಾಗಮೋಹನ್ದಾಸ್ ಅವರ ವರದಿಯನ್ನು ಗಾಳಿಗೆ ತೂರಿದರು; 3 ಗುಂಪುಗಳನ್ನಾಗಿ ವಿಂಗಡಿಸಿ ಎ ಗುಂಪಿಗೆ ಶೇ 6, ಬಿ- ಶೇ 6, ಸಿ ಗುಂಪಿಗೆ ಶೇ 5 ನೀಡಿದರು. ನಾಗಮೋಹನ್ದಾಸ್ ಅವರು 5 ಗುಂಪುಗಳನ್ನು ಮಾಡಿದ್ದರು. ಅದರಲ್ಲಿ ಮಾದಿಗರಿಗೆ ಶೇ 6, ಛಲವಾದಿ- 5, ಲಂಬಾಣಿ, ಬೋವಿ, ಕೊರಮ- ಕೊರಚ ಶೇ 4, ಅಲೆಮಾರಿಗಳಿಗೆ ಶೇ 1, ಎಕೆಎಡಿಗಳಿಗೆ ಶೇ 1 ಹಂಚಿಕೆ ಮಾಡಿದ್ದರು. ಅವರ ವರದಿಯು ಸಂವಿಧಾನಿಕ ಪೀಠದ ಆದೇಶಕ್ಕೆ ಅನುಗುಣವಾಗಿತ್ತು ಎಂದರು. ಅದು ಅತ್ಯಂತ ವೈಜ್ಞಾನಿಕ ಮಾತ್ರವಲ್ಲದೇ ಸಾಮಾಜಿಕ ಹಿನ್ನೆಲೆಯನ್ನು ಒಳಗೊಂಡಿತ್ತು ಎಂದು ವಿವರಿಸಿದರು.
ಕೇಂದ್ರ ಮಾಜಿ ಸಚಿವ ಎ. ನಾರಾಯಣಸ್ವಾಮಿ ಅವರು ಮಾತನಾಡಿ, ಒಳ ಮೀಸಲಾತಿ ಜಾರಿ ಮಾಡಿದ್ದಾರೆ. ಇದರ ಕುರಿತ ಹೇಳಿಕೆ ದಿಕ್ಕು ದೆಸೆ ಇಲ್ಲದ್ದು ಮತ್ತು ಅರ್ಥಹೀನ ಎಂದು ಟೀಕಿಸಿದರು. ಮಾದಿಗ ಸಮುದಾಯದ ಮೂರೂವರೆ ದಶಕಗಳ ಹೋರಾಟಕ್ಕೆ ನ್ಯಾಯ ಸಿಗಲಿದೆ ಎಂದು ಅಂದುಕೊಳ್ಳಲಾಗಿತ್ತು. ಆದರೆ, ಮಾದಿಗರ ಕನಸು, ಹೋರಾಟಕ್ಕೆ ಮಂಕುಬೂದಿ ಎರಚಲಾಗಿದೆ ಎಂದು ಆಕ್ಷೇಪಿಸಿದರು.
ನ್ಯಾ.ನಾಗಮೋಹನ್ದಾಸ್ ಅವರ ವರದಿಯನ್ನು ದಿಕ್ಕು ತಪ್ಪಿಸಿದ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯನವರು ಎಂದು ಆರೋಪವನ್ನು ಮುಂದಿಟ್ಟರು. ನಾಗಮೋಹನ್ದಾಸ್ ಅವರ ವರದಿಯ 5 ಗುಂಪುಗಳನ್ನು ಧಿಕ್ಕರಿಸಿದ್ದಾರೆ.
ಹಿಂದುಳಿಯುವಿಕೆಯನ್ನೂ ಧಿಕ್ಕರಿಸಿದ್ದಾರೆ; ಅಲೆಮಾರಿಗಳನ್ನು ಸ್ಪರ್ಶ ಜನಾಂಗದ ಜೊತೆ ಸೇರಿಸಿ ಅಲೆಮಾರಿಗಳಿಗೆ ದ್ರೋಹ ಮಾಡಿದ್ದೀರಿ ಎಂದು ದೂರಿದರು. ಅರ್ಥಹೀನವಾಗಿ ಒಳ ಮೀಸಲಾತಿ ಜಾರಿ ಆಗಿದೆ. ಸುಪ್ರೀಂ ಕೋರ್ಟ್, ನಾಗಮೋಹನ್ದಾಸ್ ಆಶಯಗಳನ್ನು ನೀವು ಪಾಲನೆ ಮಾಡಿದ್ದೀರಾ ಮುಖ್ಯಮಂತ್ರಿಗಳೇ ಎಂದು ಕೇಳಿದರು.
ಮಾದಿಗರ ಹೋರಾಟಕ್ಕೆ ಮಂಕುಬೂದಿ ಎರಚಿ ದಿಕ್ಕು ತಪ್ಪಿಸಬೇಡಿ. ಈ ಸಚಿವಸಂಪುಟದಲ್ಲಿ ನ್ಯಾಯ ಒದಗಿಸಿ ಎಂದು ಆಗ್ರಹಿಸಿದರು. ನಮ್ಮ ಬೇಡಿಕೆ ಈಡೇರದೇ ಇದ್ದರೆ ಮತ್ತೊಮ್ಮೆ ಮಾದಿಗರ ಚಳವಳಿ ಆರಂಭ ಆಗಲಿದೆ ಎಂದು ಎಚ್ಚರಿಸಿದರು. ಇನ್ನೊಂದು ದೊಡ್ಡ ಚಳವಳಿ ಮಾಡಿ ನಿಮಗೆ ಬುದ್ಧಿ ಕಲಿಸುತ್ತೇವೆ ಎಂದು ನುಡಿದರು.
ಕೇಂದ್ರ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ವಕ್ತಾರ ಹೆಚ್. ವೆಂಕಟೇಶ್ ದೊಡ್ಡೇರಿ, ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಅನಿಲ್ ಕುಮಾರ್ ಹಾಗೂ ಲಕ್ಷ್ಮೀನಾರಾಯಣ ಅವರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.