ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಬಂಗಬಂಧು ಸ್ಮಾರಕ ವಸ್ತುಸಂಗ್ರಹಾಲಯವನ್ನು ನಿನ್ನೆ ರಾತ್ರಿ ಕಾನೂನು ಜಾರಿ ಅಧಿಕಾರಿಗಳ ಉಪಸ್ಥಿತಿಯ ನಡುವೆಯೇ ಉದ್ರಿಕ್ತ ಜನಸಮೂಹವು ಬುಲ್ಡೋಜರ್ಗಳನ್ನು ಬಳಸಿ ಕೆಡವಿ ಹಾಕಿದೆ. ಧನ್ಮೊಂಡಿ 32 ಎಂಬ ವಸ್ತುಸಂಗ್ರಹಾಲಯವು ಬಾಂಗ್ಲಾದೇಶದ ಸ್ಥಾಪಕ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರ ವೈಯಕ್ತಿಕ ನಿವಾಸವಾಗಿತ್ತು.
ಪ್ರತಿಭಟನಾಕಾರರು ಮೊದಲು ರಾತ್ರಿ 8:30 ರ ಸುಮಾರಿಗೆ ವಸ್ತುಸಂಗ್ರಹಾಲಯವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು. ಸುಮಾರು ಒಂದು ಗಂಟೆಗಳ ಕಾಲ ಈ ವಿಧ್ವಂಸಕತೆ ಮುಂದುವರೆಯಿತು ಮತ್ತು ರಾತ್ರಿ 11:10 ರ ಸುಮಾರಿಗೆ ಜನಸಮೂಹವು ಈ ಸ್ಥಳಕ್ಕೆ ಒಂದು ಬುಲ್ಡೋಜರ್ ತಂದು ಕಟ್ಟಡವನ್ನು ಕೆಡವಿ ಹಾಕಿತು.
ವರದಿಗಳ ಪ್ರಕಾರ, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಪಕ್ಷದ ನಿಷೇಧಿತ ವಿದ್ಯಾರ್ಥಿ ವಿಭಾಗವಾದ ಛತ್ರ ಲೀಗ್ಗೆ ರಾತ್ರಿ 9 ಗಂಟೆಗೆ ವರ್ಚುವಲ್ ಭಾಷಣ ಮಾಡಿದ್ದಾರೆ. ಇದರಿಂದ ಕುಪಿತಗೊಂಡು ಉದ್ರಿಕ್ತರು ಧನ್ಮೊಂಡಿ 32 ಕಡೆಗೆ ಬುಲ್ಡೋಜರ್ ಮೆರವಣಿಗೆ ನಡೆಸಿದ್ದಾರೆ ಮತ್ತು ಸ್ಮಾರಕವನ್ನು ಧ್ವಂಸ ಮಾಡಿದ್ದಾರೆ. ಇದಕ್ಕೂ ಮೊದಲು, ಢಾಕಾ ಮೆಟ್ರೋಪಾಲಿಟನ್ ಪೊಲೀಸ್ ಜಂಟಿ ಆಯುಕ್ತರಾದ ಅಪರಾಧ ವಿಭಾಗದ ಎಂಡಿ ಫಾರೂಕ್ ಹೊಸೈನ್ ಅವರು ಮುಜೀಬ್ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಸುತ್ತಮುತ್ತ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದರು ಆದರೆ ಮೆರವಣಿಗೆಯ ಮೂಲಕ ವಸ್ತುಸಂಗ್ರಹಾಲಯಕ್ಕೆ ಉದ್ರಿಕ್ತರು ತೆರಳುತ್ತಿದ್ದಾಗ ಪೊಲೀಸರು ಯಾವುದೇ ಅಡ್ಡಿಯುಂಟು ಮಾಡಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಢಾಕಾದಲ್ಲಿರುವ ಹಸೀನಾ ಅವರ ದಿವಂಗತ ಪತಿ ಡಾ. ಎಂ.ಎ. ವಾಜೀದ್ ಮಿಯಾ ಅವರ ನಿವಾಸವಾದ ಸುಧಾ ಸದನ್ ಕೂಡ ಬೆಂಕಿಗೆ ಆಹುತಿ ಆಗಿದೆ. ರಾಜಧಾನಿಯಲ್ಲಿ ನಡೆದ ಈ ವಿಧ್ವಂಸಕತೆ ಇತರ ಜಿಲ್ಲೆಗಳಿಗೂ ಪಸರಿಸಿದೆ. ಖುಲ್ನಾದಲ್ಲಿ, ಹಸೀನಾ ಅವರ ಐದು ಸೋದರಸಂಬಂಧಿಗಳ ಮನೆಯಾಗಿರುವ ಶೇಖ್ ಬಾರಿಯನ್ನು ಕೆಡವಲಾಗಿದೆ. ಇದಲ್ಲದೆ, ರಾಜ್ಶಾಹಿ, ಕುಶ್ಟಿಯಾ ಮತ್ತು ಸಿಲ್ಹೆಟ್ ಸೇರಿದಂತೆ ಜಿಲ್ಲೆಗಳಲ್ಲಿ ಅವಾಮಿ ಲೀಗ್ ನಾಯಕರ ಮನೆಗಳು ಮತ್ತು ಶೇಖ್ ಕುಟುಂಬಕ್ಕೆ ಸಂಬಂಧಿಸಿದ ಕಟ್ಟಡಗಳನ್ನು ಕೆಡವಲಾಗಿದೆ ಎಂದು ವರದಿಯಾಗಿದೆ.
1971 ರಲ್ಲಿ ವಿಮೋಚನಾ ಯುದ್ಧಕ್ಕೆ ಕಾರಣವಾದ ಅಸಹಕಾರ ಚಳವಳಿಯ ಕೇಂದ್ರವಾಗಿ ಮುಜೀಬ್ ನಿವಾಸವು ಮಾರ್ಪಟ್ಟಿತ್ತು. ಆಗಸ್ಟ್ 15, 1975 ರಂದು, ಮುಜೀಬ್ ಮತ್ತು ಅವರ ಕುಟುಂಬದ ಹಲವರನ್ನು ಈ ಮನೆಯಲ್ಲಿ ಹತ್ಯೆ ಮಾಡಲಾಯಿತು. ಹಸೀನಾ ಅವರ ಅಧಿಕಾರಾವಧಿಯಲ್ಲಿ, ಈ ಮನೆಯನ್ನು ನಂತರ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು, ಮುಜೀಬ್ ಕುಟುಂಬದ ಪರಂಪರೆ ಮತ್ತು ಕಲಾಕೃತಿಗಳನ್ನು ಇಲ್ಲಿ ಸಂರಕ್ಷಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.