ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿಭಾಯಿಸದ ಕಾರಣ ಭಾರತದಲ್ಲಿ ಅಧಿಕಾರದಲ್ಲಿರುವ ಸರ್ಕಾರವು 2024 ರಲ್ಲಿ ಚುನಾವಣೆಯಲ್ಲಿ ಸೋತಿದೆ ಎಂಬ ತನ್ನ ಸಿಇಒ ಮಾರ್ಕ್ ಜುಕರ್ಬರ್ಗ್ ಹೇಳಿಕೆಗೆ ಮೆಟಾ ಇಂಡಿಯಾ ಕ್ಷಮೆಯಾಚಿಸಿದೆ. ಹೇಳಿಕೆಗೆ ಸಂಬಂಧಿಸಿದಂತೆ ಭಾರೀ ಗದ್ದಲ ಏರ್ಪಟ್ಟ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದ ದೈತ್ಯ ಮೆಟಾದ ಭಾರತದ ಪ್ರತಿನಿಧಿ ಕ್ಷಮೆಯಾಚನೆ ಮಾಡಿಸಿದೆ. ಅಲ್ಲದೇ, ಹೇಳಿಕೆಯನ್ನು “ಅಚಾತುರ್ಯದ ದೋಷ” ಎಂದು ಕರೆದಿದೆ.
ಜಗತ್ತಿನಾದ್ಯಂತ 2024 ರ ಚುನಾವಣೆಗಳ ಕುರಿತು ಹೇಳಿಕೆ ನೀಡಿದ ಸಂದರ್ಭದಲ್ಲಿ ಮಾರ್ಕ್ ಜುಕರ್ಬರ್ಗ್ ಭಾರತದಲ್ಲಿ ಅಧಿಕಾರದಲ್ಲಿದ್ದ ಸರ್ಕಾರ ಸೋತಿದೆ ಎಂಬಂತಹ ಹೇಳಿಕೆ ನೀಡಿದ್ದರು. ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಜುಕರ್ಬರ್ಗ್ ಅವರು ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ವಾಸ್ತವಾಂಶದ ಬಗ್ಗೆ ಪರಿಶೀಲನೆ ನಡೆಸಬೇಕು ಎಂದಿದ್ದರು.
ಮೆಟಾ ಇಂಡಿಯಾದ ಉಪಾಧ್ಯಕ್ಷ (ಸಾರ್ವಜನಿಕ ನೀತಿ) ಶಿವನಾಥ್ ತುಕ್ರಾಲ್ ಸಾಮಾಜಿಕ ಮಾಧ್ಯಮದಲ್ಲಿ ಎಕ್ಸ್ನಲ್ಲಿ ಪ್ರತಿಕ್ರಿಯಿಸಿ, 2024ರ ಚುನಾವಣೆಗಳಿಗೆ ಸಂಬಂಧಿಸಿದಂತೆ ಜುಕರ್ಬರ್ಗ್ ಅವರು ಅವಲೋಕನ ಹಲವಾರು ದೇಶಗಳಿಗೆ ನಿಜವಾಗಿದೆ, ಆದರೆ ಭಾರತಕ್ಕೆ ಅಲ್ಲ. ಈ ದೋಷಕ್ಕಾಗಿ ಮೆಟಾ ಕ್ಷಮೆಯಾಚಿಸುತ್ತಿದೆ ಎಂದು ಹೇಳಿದ್ದಾರೆ.
ಭಾರತವು ಮೆಟಾಗೆ ನಂಬಲಾಗದಷ್ಟು ಪ್ರಮುಖ ದೇಶವಾಗಿ ಉಳಿದಿದೆ ಮತ್ತು ಅದರ ನವೀನ ಭವಿಷ್ಯದ ಹೃದಯಭಾಗದಲ್ಲಿರಲು ಅದು ಎದುರು ನೋಡುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸೋಮವಾರ, ‘X’ ನಲ್ಲಿ ಸಚಿವ ಅಶ್ವಿನ್ ವೈಷ್ಣವ್ ಪೋಸ್ಟ್ ಮಾಡಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿ ಭಾರತವು 2024 ರ ಚುನಾವಣೆಯನ್ನು 640 ಮಿಲಿಯನ್ ಮತದಾರರೊಂದಿಗೆ ಆಯೋಜನೆಗೊಳಿಸಿದೆ. ಜನರು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೇಲೆ ತಮ್ಮ ನಂಬಿಕೆಯನ್ನು ದೃಢಪಡಿಸಿ ಮತ್ತೊಮ್ಮೆ ಅವರನ್ನು ಅಧಿಕಾರಕ್ಕೆ ತಂದಿದ್ದಾರೆ. 2024ರ ಚುನಾವಣೆಯಲ್ಲಿ ಜಗತ್ತಿನ ಹಲವು ಸರ್ಕಾರಗಳು ಕೋವಿಡ್ಗೆ ಸಂಬಂಧಿಸಿದಂತೆ ಸೋಲು ಕಂಡಿವೆ ಎಂಬ ಜುಕರ್ಬರ್ಗ್ ಹೇಳಿಕೆ ಭಾರತದ ವಿಷಯಕ್ಕೆ ನಿಜವಲ್ಲ. ನಮ್ಮ ಸರ್ಕಾರ ಕೋವಿಡ್ ಸಂದರ್ಭದಲ್ಲಿ 200 ಮಿಲಿಯನ್ ಜನರಿಗೆ ಉಚಿತ ಪಡಿತರ, 2.2 ಬಿಲಿಯನ್ ಉಚಿತ ಲಸಿಕೆ, ಜಗತ್ತಿನ ಹಲವು ದೇಶಗಳಿಗೆ ನೆರವು ನೀಡಿದೆ. ಭಾರತ ಈಗ ಜಗತ್ತಿನ ಅತ್ಯಂತ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಮೂರನೇ ಬಾರಿಗೆ ಎಂಡಿಎ ಸರಕಾರದ ವಿಷಯ ನಮ್ಮ ಸಾಧನೆಗೆ ಸಾಕ್ಷಿಯಾಗಿದೆ ಎಂದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.