ಇಂಫಾಲ: ಮಣಿಪುರದಲ್ಲಿ ಉಲ್ಬಣಗೊಳ್ಳುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ದೆಹಲಿಯಲ್ಲಿ ಹಿರಿಯ ಅಧಿಕಾರಿಗಳ ಸಮಾಲೋಚನೆಯನ್ನು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಂಡುಕೋರರಿಂದ ಅಪಹರಿಸಲ್ಪಟ್ಟ ಆರು ಜನರ ಶವಗಳು ದೊರೆತ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿ ತೀವ್ರ ಹದಗೆಟ್ಟಿದೆ.
ಮಹಾರಾಷ್ಟ್ರದಲ್ಲಿ ಚುನಾವಣಾ ಸಮಾವೇಶಗಳನ್ನು ರದ್ದುಗೊಳಿಸಿ ಹಿಂದಿರುಗಿದ ಕೂಡಲೇ ಶಾ ಅವರು ಮಣಿಪುರ ಬಿಕ್ಕಟ್ಟಿನ ಬಗ್ಗೆ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಮಣಿಪುರದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ. ನಾಳೆ ಗೃಹ ಸಚಿವಾಲಯದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮತ್ತೊಂದು ಸಭೆಯನ್ನು ಕೂಡ ನಿಗದಿಪಡಿಸಲಾಗಿದೆ.
ಮತ್ತೊಂದೆಡೆ ಮಣಿಪುರದಲ್ಲಿ ಆಡಳಿತರೂಢ ಬಿಜೆಪಿಗೆ ಭಾರೀ ಹಿನ್ನೆಡೆಯಾಗಿದೆ. ಹಿಂಸಾಚಾರ-ಪೀಡಿತ ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ಹಿಂತೆಗೆದುಕೊಂಡಿದೆ. ಎನ್ ಬಿರೇನ್ ಸಿಂಗ್ ಸರ್ಕಾರ ಈಶಾನ್ಯ ರಾಜ್ಯದಲ್ಲಿ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಸಹಜತೆಯನ್ನು ಪುನಃಸ್ಥಾಪಿಸಲು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿಕೊಂಡಿದೆ. 60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಎನ್ಪಿಪಿ 7 ಶಾಸಕರನ್ನು ಹೊಂದಿದೆ.
ಮಣಿಪುರದಲ್ಲಿ ಕಳೆದ 18 ತಿಂಗಳಿನಿಂದ ಘರ್ಷಣೆಗಳು ಭುಗಿಲೇಳುತ್ತಲೇ ಇದೆ. ಪ್ರಧಾನವಾಗಿ ಹಿಂದೂ ಮೈಟೆಯಿ ಬಹುಸಂಖ್ಯಾತರು ಮತ್ತು ಮುಖ್ಯವಾಗಿ ಕ್ರಿಶ್ಚಿಯನ್ ಕುಕಿ ಸಮುದಾಯದ ನಡುವೆ ಜನಾಂಗೀಯ ಸಂಘರ್ಷ ತಾರಕಕ್ಕೇರಿದೆ.
ಕುಕಿ ಉಗ್ರರಿಂದ ಅಪಹರಿಸಲ್ಪಟ್ಟ 6 ಶವಗಳನ್ನು ಶುಕ್ರವಾರ ಜಿರಿಬಾಮ್ನ ನದಿಯಿಂದ ಹೊರತೆಗೆಯಲಾಗಿde. ಕುಕಿ ಬಂಡುಕೋರರು ಮತ್ತು ಮಣಿಪುರ ಪೊಲೀಸರ ನಡುವಿನ ಗುಂಡಿನ ಚಕಮಕಿಯ ನಂತರ ಜಿರಿಬಾಮ್ ಜಿಲ್ಲೆಯಲ್ಲಿ ನಾಪತ್ತೆಯಾದ ಮೈಟೆಯಿ ಸಮುದಾಯಕ್ಕೆ ಸೇರಿದ ಜನರು ಇವರೆಂದು ಮೂಲಗಳು ತಿಳಿಸಿದೆ
ಶವ ಪತ್ತೆಯ ಬಳಿಕ ಸಂಘರ್ಷ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.