ಹೈದರಾಬಾದ್: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ತಮ್ಮ ಮಿತ್ರ ಪಕ್ಷ ತೆಲುಗು ದೇಶಂ ಪಕ್ಷದ ಗೃಹ ಸಚಿವೆ ಅನಿತಾ ಅವರ ಅಸಮರ್ಥತೆಯನ್ನು ಸಾರ್ವಜನಿಕವಾಗಿ ಟೀಕಿಸಿದ್ದಾರೆ. ಯಾವುದೇ ಸುಧಾರಣೆಯಾಗದಿದ್ದರೆ, ಗೃಹ ಇಲಾಖೆಯನ್ನೂ ನಾನೇ ವಹಿಸಿಕೊಳ್ಳುತ್ತೇನೆ ಎಂದು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್ ಅವರ ಈ ಎಚ್ಚರಿಕೆ ಬಂದಿದೆ.
ಭಾನುವಾರ ಮೂರು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯದ ನಡೆದ ಬಗ್ಗೆ ಕಲ್ಯಾಣ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, “ಆಂಧ್ರಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆ ಗಮನಾರ್ಹವಾಗಿ ಹದಗೆಟ್ಟಿದೆ ಮತ್ತು ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಹೇಗೆ ನಿರ್ವಹಿಸುತ್ತಿದ್ದಾರೆ ಎಂಬುದನ್ನು ನಾವು ನೋಡಿ ಕಲಿಯಬೇಕು” ಎಂದು ಎಂದು ಹೇಳಿದ್ದಾರೆ.
“ನಾನು ಗೃಹ ಸಚಿವೆ ಅನಿತಾ ಅವರಿಗೂ ಹೇಳುತ್ತಿದ್ದೇನೆ. ನೀವು ಗೃಹ ಸಚಿವರು, ನಾನು ಪಂಚಾಯತ್ ರಾಜ್ ಸಚಿವ, ಅರಣ್ಯ ಮತ್ತು ಪರಿಸರ ಸಚಿವ. ನಿಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿ ಅಥವಾ ಗೃಹ ಇಲಾಖೆಯನ್ನು ಸಹ ನಾನೇ ವಹಿಸಿಕೊಳ್ಳಬೇಕಾಗುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.
“ನೀವು ಯೋಗಿ ಆದಿತ್ಯನಾಥ್ ಅವರಂತೆ ಇರಬೇಕು. ರಾಜಕೀಯ ನಾಯಕರು, ಶಾಸಕರು ಇಲ್ಲಿ ಮತ ಕೇಳಲು ಬಂದವರಲ್ಲ, ನಿಮಗೂ ಜವಾಬ್ದಾರಿಗಳಿವೆ, ಎಲ್ಲರೂ ಯೋಚಿಸಬೇಕು. ನಾನು ಗೃಹ ಇಲಾಖೆಯನ್ನು ಕೇಳಲು ಅಥವಾ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದೇನಿಲ್ಲ. ನಾವು ಯೋಗಿ ಆದಿತ್ಯನಾಥ್ ಅವರಂತೆ ಇರಬೇಕು, ನೀವು ಬದಲಾಗುತ್ತೀರಾ ಅಥವಾ ಇಲ್ಲವೇ ಎಂದು ನಿರ್ಧರಿಸಿ” ಎಂದಿದ್ದಾರೆ.
ಪವನ್ ಕಲ್ಯಾಣ್ ಎಚ್ಚರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸಂಪುಟದ ಹಿರಿಯ ಸಚಿವ ಪಿ ನಾರಾಯಣ್ ಅವರು, ಉಪಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್ ಅವರು ತಪ್ಪುಗಳನ್ನು ಎತ್ತಿ ತೋರಿಸಲು ಮತ್ತು ಮಂತ್ರಿಗಳನ್ನು ಸರಿದಾರಿಗೆ ತರುವ ಹಕ್ಕು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಜನಸೇನಾ ಮುಖ್ಯಸ್ಥರು ಇತ್ತೀಚೆಗೆ ಸನಾತನ ಧರ್ಮವನ್ನು ರಕ್ಷಿಸುವ ಉದ್ದೇಶದಿಂದ ತಮ್ಮ ಪಕ್ಷದೊಳಗೆ ‘ನರಸಿಂಹ ವಾರಾಹಿ ಬ್ರಿಗೇಡ್’ ರಚನೆಯನ್ನು ಘೋಷಿಸಿದ್ದರು.
“ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ, ಆದರೆ ನಾನು ನನ್ನ ನಂಬಿಕೆಯಲ್ಲಿ ದೃಢವಾಗಿ ನಿಲ್ಲುತ್ತೇನೆ, ಸಾಮಾಜಿಕ ಜಾಲತಾಣಗಳಲ್ಲಿ ಸನಾತನ ಧರ್ಮವನ್ನು ಟೀಕಿಸುವವರು ಅಥವಾ ಅದರ ಬಗ್ಗೆ ಅಗೌರವದಿಂದ ಮಾತನಾಡುವವರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಅವರು ಎಚ್ಚರಿಕೆ ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.