ನವದೆಹಲಿ: ಹರಿಯಾಣದಲ್ಲಿ ಸತ್ಯ, ಅಭಿವೃದ್ಧಿ ಮತ್ತು ಉತ್ತಮ ಆಡಳಿತಕ್ಕೆ ಜಯ ಸಿಕ್ಕಿದೆ. ಅಭಿವೃದ್ಧಿ ವಿಚಾರದಲ್ಲಿ ಹರಿಯಾಣದ ಜನರು ಬಿಜೆಪಿಗೆ ಹ್ಯಾಟ್ರಿಕ್ ಗೆಲುವು ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹರಿಯಾಣದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಐತಿಹಾಸಿಕ ಜಯ ದೊರೆತ ನಂತರ, ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಬಿಜೆಪಿ ಜಗತ್ತಿನ ಅತಿ ದೊಡ್ಡ ಪಕ್ಷ ಮಾತ್ರವಲ್ಲ, ಬಹುತೇಕ ಜನರ ಹೃದಯದಲ್ಲೂ ನೆಲೆಸಿದೆ ಎಂದರು. ಹರಿಯಾಣದಲ್ಲಿ ಇಲ್ಲಿಯವರೆಗೆ 13 ಚುನಾವಣೆಗಳು ನಡೆದಿವೆ ಮತ್ತು ಈ ಪೈಕಿ 10 ಚುನಾವಣೆಗಳಲ್ಲಿ ಹರಿಯಾಣದ ಜನರು ಪ್ರತಿ ಐದು ವರ್ಷಗಳಿಗೊಮ್ಮೆ ಸರ್ಕಾರವನ್ನು ಬದಲಾಯಿಸಿದ್ದಾರೆ. ಆದರೆ, ಐದು ವರ್ಷಗಳ ಎರಡು ಅವಧಿ ಪೂರೈಸಿದ ಸರ್ಕಾರಕ್ಕೆ ರಾಜ್ಯದಲ್ಲಿ ಮತ್ತೆ ಅವಕಾಶ ಸಿಕ್ಕಿದ್ದು ಇದೇ ಮೊದಲು. ಬಿಜೆಪಿ ಸರ್ಕಾರವು ರಾಷ್ಟ್ರಕ್ಕೆ ಮೊದಲ ಸ್ಥಾನವನ್ನು ನೀಡುತ್ತದೆ ಮತ್ತು ಬಡವರ ಸೇವೆಗೆ ಬದ್ಧವಾಗಿದೆ ಎಂದು ಅವರು ಹೇಳಿದರು. ಕೇಂದ್ರವಾಗಲಿ ಅಥವಾ ಹರಿಯಾಣ ಸರಕಾರವಾಗಲಿ ಈ ಹತ್ತು ವರ್ಷಗಳಲ್ಲಿ ಒಂದೇ ಒಂದು ಭ್ರಷ್ಟಾಚಾರದ ಕಳಂಕವನ್ನು ಹೊತ್ತುಕೊಂಡಿಲ್ಲ ಎಂದಿದ್ದಾರೆ.
ದಶಕಗಳ ಕಾಯುವಿಕೆಯ ನಂತರ ಅಂತಿಮವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯುತ ವಿಧಾನಸಭೆ ಚುನಾವಣೆ ನಡೆಯಿತು ಎಂದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ ಪಕ್ಷಗಳ ಪೈಕಿ ಬಿಜೆಪಿ ಮತ ಹಂಚಿಕೆಯ ದೃಷ್ಟಿಯಿಂದ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 370 ನೇ ವಿಧಿಯನ್ನು ರದ್ದುಗೊಳಿಸಿದರೆ ಕಾಶ್ಮೀರ ಉರಿಯುತ್ತದೆ ಎಂದು ಕೆಲವರು ಹೇಳುತ್ತಿದ್ದರು, ಆದರೆ ಕಾಶ್ಮೀರವು ಸುಂದರವಾಗಿ ಅರಳುತ್ತಿದೆ ಎಂದು ಪ್ರಧಾನಿ ಹೇಳಿದರು.
ವಿಕಸಿತ ಭಾರತದ ನಾಲ್ಕು ಆಧಾರ ಸ್ತಂಭಗಳು ರೈತರು, ಯುವಕರು, ಮಹಿಳೆಯರು ಮತ್ತು ಬಡವರು. ಜಮ್ಮು ಮತ್ತು ಕಾಶ್ಮೀರದಲ್ಲಾಗಲಿ ಅಥವಾ ಹರಿಯಾಣದಲ್ಲಾಗಲಿ, ದೇಶವನ್ನು ಅಭಿವೃದ್ಧಿಪಡಿಸಲು ತಮ್ಮ ಸರ್ಕಾರ ಯಾವಾಗಲೂ ಈ ನಾಲ್ಕು ಸ್ತಂಭಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ಜನಾದೇಶವು ಭಾರತವನ್ನು ವಿಶ್ವದ ಕೌಶಲ್ಯ ರಾಜಧಾನಿಯನ್ನಾಗಿ ಮಾಡುವ ಸಂಕಲ್ಪವನ್ನು ಬಲಪಡಿಸಿದೆ ಮತ್ತು ಭಾರತವನ್ನು ಹೆಚ್ಚು ಸುರಕ್ಷಿತಗೊಳಿಸಲು ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೊಸ ಧೈರ್ಯವನ್ನು ನೀಡುತ್ತದೆ. ಮುಂದಿನ ಐದು ವರ್ಷಗಳಲ್ಲಿ ಇಡೀ ದೇಶವು ಇನ್ನಷ್ಟು ವೇಗದ ಅಭಿವೃದ್ಧಿಗೆ ಸಾಕ್ಷಿಯಾಗಲಿದೆ ಎಂದು ಭರವಸೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.