ಮಾಲೆ: ಮಾಲ್ಡೀವ್ಸ್ಗೆ ತೆರಳಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರನ್ನು ಇಂದು ಮಾಲೆಯಲ್ಲಿ ಭೇಟಿ ಮಾಡಿದರು ಮತ್ತು ಉಭಯ ದೇಶಗಳು ಮತ್ತು ಪ್ರದೇಶದ ಜನರ ಅನುಕೂಲಕ್ಕಾಗಿ ಭಾರತ-ಮಾಲ್ಡೀವ್ಸ್ ಬಾಂಧವ್ಯವನ್ನು ಗಾಢಗೊಳಿಸುವ ಭಾರತದ ಬದ್ಧತೆಯನ್ನು ಪುನರುಚ್ಛರಿಸಿದರು.
ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್ನಲ್ಲಿ ಚೀನಾ ಪರವಾದ ನಿಲುವು ಹೊಂದಿರುವ ಮೊಹಮ್ಮದ್ ಮುಯಿಝು ಅವರ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಭಾರತ-ಮಾಲ್ಡೀವ್ಸ್ ನಡುವಣ ದ್ವಿಪಕ್ಷೀಯ ಸಂಬಂಧ ಹಳಿಸಿದೆ. ಇದನ್ನು ಸರಿ ದಾರಿಗೆ ತರುವ ನಿಟ್ಟಿನಲ್ಲಿ ಜೈಶಂಕರ್ ಅವರ ಮೂರು ದಿನಗಳ ಅಧಿಕೃತ ಭೇಟಿ ಮಹತ್ವದ್ದೆನಿಸಿದೆ. ಮುಯಿಝು ಅವರು ಅಧಿಕಾರ ವಹಿಸಿಕೊಂಡ ನಂತರ ಭಾರತದಿಂದ ಆ ರಾಷ್ಟ್ರಕ್ಕ ಇದು ಮೊದಲ ಉನ್ನತ ಮಟ್ಟದ ಪ್ರವಾಸವೂ ಆಗಿದೆ.
“ಅಧ್ಯಕ್ಷ ಡಾ ಮೊಹಮ್ಮದ್ ಮುಯಿಝು ಅವರನ್ನು ಭೇಟಿ ಮಾಡಿರುವುದು ವಿಶೇಷವಾಗಿದೆ. ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭಾಶಯಗಳನ್ನು ತಿಳಿಸಿದರು. ನಮ್ಮ ಜನರು ಮತ್ತು ಪ್ರದೇಶದ ಅನುಕೂಲಕ್ಕಾಗಿ ಭಾರತ-ಮಾಲ್ಡೀವ್ಸ್ ಸಂಬಂಧಗಳನ್ನು ಗಾಢವಾಗಿಸಲು ಬದ್ಧರಾಗಿದ್ದೇವೆ” ಎಂದು ಜೈಶಂಕರ್ ಅವರು ಮಯಿಝು ಸಭೆಯ ಬಳಿಕ ಛಾಯಾಚಿತ್ರ ಸಮೇತ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಧ್ಯಕ್ಷ ಮುಯಿಝು ಅವರು ಜೂನ್ನಲ್ಲಿ ಭಾರತಕ್ಕೆ ಭೇಟಿ ನೀಡಿದ ತಿಂಗಳುಗಳ ಬಳಿಕ ಜೈಶಂಕರ್ ಅವರ ಮಾಲ್ಡೀವ್ಸ್ ಪ್ರವಾಸ ನಡೆಸಿದ್ದಾರೆ.
ಮಾಲ್ಡೀವ್ಸ್ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಪ್ರಮುಖ ಕಡಲ ನೆರೆಯ ರಾಷ್ಟ್ರಗಳಲ್ಲಿ ಒಂದಾಗಿದೆ ಮತ್ತು ರಕ್ಷಣಾ ಮತ್ತು ಭದ್ರತೆಯ ಕ್ಷೇತ್ರಗಳನ್ನು ಒಳಗೊಂಡಂತೆ ಒಟ್ಟಾರೆ ದ್ವಿಪಕ್ಷೀಯ ಸಂಬಂಧಗಳು ಮಾಲೀವ್ಸ್ನ ಹಿಂದಿನ ಸರ್ಕಾರದ ಅಡಿಯಲ್ಲಿ ವೃದ್ಧಿ ಕಂಡಿದ್ದವು.
ಸಂಬಂಧಿತ ವೀಡಿಯೊ: ದ್ವಿಪಕ್ಷೀಯ ಸಹಕಾರ (WION) ಕುರಿತು ಚರ್ಚಿಸಲು ಎಸ್ ಜೈಶಂಕರ್ ಮಾಲ್ಡೀವಿಯನ್ ಕೌಂಟರ್ಪಾರ್ಟ್ ಅನ್ನು ಭೇಟಿ ಮಾಡಿದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.