ಬೆಂಗಳೂರು: ಕಳೆದ ಸಾಲಿನಲ್ಲಿ ಅಂದರೆ 2023-24ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಪರಿಶಿಷ್ಟ ಜಾತಿ- ವರ್ಗಗಳಿಗೆ ಮೊದಲು ದೋಖಾ ಮಾಡಿದೆ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಮತಬೇಟೆಯಲ್ಲಿ, ಗ್ಯಾರಂಟಿಗಳ ಆಶ್ವಾಸನೆ ಕೊಟ್ಟಿತ್ತು. ಅದನ್ನು ಈಡೇರಿಸಲು ಅವರಲ್ಲಿ ಹಣ ಇರಲಿಲ್ಲ. ಗ್ಯಾರಂಟಿಗೆ ಬೇಕಾದ ಕೊರತೆ ಹಣವನ್ನು ತುಂಬಿಸಲು ದಲಿತರಿಗೆ ಮೀಸಲಿಟ್ಟ 11,114 ಕೋಟಿ ರೂ. ಎಸ್ಸಿ ಎಸ್ಪಿ, ಟಿಎಸ್ಪಿ ಹಣವನ್ನು ತೆಗೆದು ದಲಿತರಿಗೇ ಕೊಡುವುದಾಗಿ ಹೇಳಿ ಮೋಸ ಮಾಡಿ ವಂಚಿಸಿದ್ದಾರೆ ಎಂದು ಆಕ್ಷೇಪಿಸಿದರು.
ಅದರಿಂದ ಎಸ್ಸಿ, ಎಸ್ಟಿ ಸಮುದಾಯದ ಭೂಮಿ ಖರೀದಿ, ನಿವೇಶನ ಅಥವಾ ಮನೆ ಕೊಡುವ ಕಾರ್ಯಕ್ರಮ, ವಿದ್ಯಾಭ್ಯಾಸ ಮತ್ತು ಆರೋಗ್ಯಕ್ಕೆ ಮುಂತಾದ ಅನೇಕ ವಿಚಾರಗಳಿಗೆ ಇಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ವಿನಿಯೋಗ ಮಾಡಿದ್ದರು. ಇದರ ವಿರುದ್ಧ ಹೋರಾಟ ಮಾಡಿದ್ದೆವು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ಮತ್ತೆ 14,287 ಕೋಟಿ ರೂ. ಎಸ್ಸಿ ಎಸ್ಪಿ, ಟಿಎಸ್ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಇದರಿಂದ ದಲಿತ ಸಮುದಾಯಗಳಿಗೆ ಬಹಳ ಅನ್ಯಾಯ ಆಗಿದೆ. ಹಣವನ್ನು ಗ್ಯಾರಂಟಿಗೆ ಕೊಟ್ಟು ನಮ್ಮನ್ನು ವಂಚನೆ ಮಾಡುತ್ತಿದ್ದಾರೆ. ದಲಿತರ ಹಣ ದಲಿತರಿಗೇ ಕೊಡುವ ಗ್ಯಾರಂಟಿಯನ್ನು ಯಾಕೆ ನೀವು ನೀಡಿಲ್ಲ ಎಂದು ಪ್ರಶ್ನಿಸಿದರು.
ಹಿಂದಿನ ವರ್ಷಕ್ಕಿಂತ 3 ಸಾವಿರ ಕೋಟಿ ಹಣ ಕೊಟ್ಟಿದ್ದಾಗಿ ಸಿದ್ದರಾಮಯ್ಯನವರು ಹೇಳಿದ್ದಾರೆ. ನೀವು 14,287 ಕೋಟಿಯನ್ನು ಬೇರೆ ಕಡೆ ವರ್ಗಾಯಿಸಿಲ್ಲವೇ ಎಂದು ಕೇಳಿದರು. ನಮ್ಮ ಸರಕಾರವು 74 ಕೋಟಿಯನ್ನು ಗಂಗಾ ಕಲ್ಯಾಣಕ್ಕಾಗಿ ಇಟ್ಟಿತ್ತು. ಅದನ್ನೂ ಬೇರೆಯದಕ್ಕೆ ಬಳಸಿದ್ದಾರೆ. ದಲಿತರು, ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರ ಹೆಸರು ಹೇಳಿ ಒಂದು ಕೈಯಲ್ಲಿ ಕೊಟ್ಟಂತೆ ಮಾಡಿ, ಮತ್ತೊಂದು ಕೈಯಲ್ಲಿ ವಾಪಸ್ ಕಿತ್ತುಕೊಂಡಿದ್ದಾರೆ. ಈ ರೀತಿ ಸರಕಾರ ದಲಿತರಿಗೆ ವಂಚಿಸುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರಿಗೆ ಗೌರವ ಇದ್ದರೆ, ದಲಿತರ ಬಗ್ಗೆ ಕಾಳಜಿ, ವಿಶ್ವಾಸ ಇದ್ದರೆ ಈ ಹಣವನ್ನು ಮತ್ತೆ ಎಸ್ಸಿ ಎಸ್ಪಿ, ಟಿಎಸ್ಪಿ ಖಾತೆಗೆ ಕೊಡಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ಅವರು ಅಧಿಕಾರದಿಂದ ತೊಲಗಲಿ ಎಂದು ಸಲಹೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.