ಬೆಂಗಳೂರು: ಬಿಜೆಪಿ ಸಂವಿಧಾನ ಬದಲಾವಣೆ ಮಾಡಲಿದೆ ಎಂದು ಚುನಾವಣೆ ವೇಳೆ ಸುಳ್ಳು ಪ್ರಚಾರ ಮಾಡಲಾಗಿತ್ತು. ಸ್ವಾರ್ಥಕ್ಕಾಗಿ ಸಂವಿಧಾನವನ್ನು ಬದಲಿಸಿದ, ಸಂವಿಧಾನದ ಹತ್ಯೆ ಮಾಡಿ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷವು ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿತ್ತು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದರು. ಪ್ರಜಾಪ್ರಭುತ್ವ ಆತಂಕದಲ್ಲಿದೆ ಎಂದು ಸುಳ್ಳು ಮಾಹಿತಿ ಕೊಡಲಾಗಿತ್ತು ಎಂದು ಆಕ್ಷೇಪಿಸಿದರು.
ಅರಮನೆ ಮೈದಾನದ ಗೇಟ್ ನಂ.3, ವೈಟ್ ಪೆಟಲ್ಸ್ನಲ್ಲಿ ಇಂದು ಏರ್ಪಡಿಸಿದ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿಯಲ್ಲಿ ಸಮಾರೋಪ ಭಾಷಣ ಮಾಡಿದರು. ಜನರಲ್ಲಿ ಗೊಂದಲ ಉಂಟು ಮಾಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು ಎಂದು ಟೀಕಿಸಿದರು. 1975ರಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನಗಳು, ಮೀಸಾದಡಿ ನಮ್ಮ ನೇತಾರರು, ಕಾರ್ಯಕರ್ತರನ್ನು ಬಂಧಿಸಲಾಗಿತ್ತು ಎಂದು ನೆನಪಿಸಿದರು. ಇದು ಪ್ರಜಾಸತ್ತೆ ಮತ್ತು ಸಂವಿಧಾನದ ಹತ್ಯೆ ಎಂದು ತಿಳಿಸಿದರು.
ಬೆಂಗಳೂರಿನ ಜೈಲಿನಲ್ಲಿ ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ, ಜಾರ್ಜ್ ಫರ್ನಾಂಡಿಸ್ ಮೊದಲಾದವರು ಇದ್ದರು ಎಂದು ವಿವರಿಸಿದರು. ತುರ್ತು ಪರಿಸ್ಥಿತಿಯ ವಿರುದ್ಧ ಭಾರತೀಯ ಜನಸಂಘ ಹೋರಾಡಿ ಪ್ರಜಾಸತ್ತೆಯನ್ನು ಉಳಿಸುವ ಕೆಲಸ ಮಾಡಿದೆ ಎಂದು ಮಾಹಿತಿ ನೀಡಿದರು. ಸಂವಿಧಾನವನ್ನು ಉಳಿಸುವ ಕೆಲಸವೂ ಆಗಿತ್ತು ಎಂದರು. ಪ್ರಜಾತಂತ್ರವು 4 ಸ್ಥಂಭಗಳ ಮೇಲೆ ನಿಂತಿದೆ. ಇವೆಲ್ಲವುಗಳ ಬಗ್ಗೆ ಸಂವಿಧಾನದಲ್ಲಿ ಬರೆಯಲಾಗಿದೆ. ಸಂವಿಧಾನವನ್ನು ಕಡೆಗಣಿಸಿ ಹಲವಾರು ತಿದ್ದುಪಡಿ ಮಾಡಲಾಗಿತ್ತು ಎಂದು ತಿಳಿಸಿದರು. ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಮಾಡಲಾಗಿತ್ತು ಎಂದು ಹೇಳಿದರು.
ಇಂದಿನ ಯುವಜನರಿಗೆ ತುರ್ತು ಪರಿಸ್ಥಿತಿಯ ಕುರಿತು ಮಾಹಿತಿ ಇಲ್ಲ. ನಾನು ಎಸ್ಸೆಸ್ಸೆಲ್ಸಿ ಓದುತ್ತಿದ್ದೆ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡುತ್ತಿದ್ದೆ. ಇದರಿಂದ ಕಡಿಮೆ ಅಂಕ ಬಂತು. ಆದ್ದರಿಂದ ನನಗೆ ಎಂಜಿನಿಯರಿಂಗ್ ಕೋರ್ಸ್ ಮಾಡಲಾಗಲಿಲ್ಲ. ಆಗ ನನ್ನ ಕುಟುಂಬದವರು ಆ ಕುರಿತು ಕೋಪಗೊಂಡಿದ್ದರು. ಆದರೆ, ಇದೀಗ ನನಗೆ ಪುರಸ್ಕಾರ ಲಭಿಸಿದೆ. 7 ಡಿಲಿಟ್, 7 ವಿಶ್ವ ಪುರಸ್ಕಾರಗಳು ನನಗೆ ಲಭಿಸಿದೆ ಎಂದು ನೆನಪಿಸಿಕೊಂಡರು.
ಇತಿಹಾಸ ಮರೆಯದೆ ಪ್ರಜಾಪ್ರಭುತ್ವವನ್ನು ದೃಢಪಡಿಸಬೇಕು. ಸಂವಿಧಾನದ ಹತ್ಯೆ ಮಾಡಿದವರು ಯಾರು ಎಂದು ಯುನಜನರಿಗೆ ತಿಳಿಸಬೇಕಿದೆ ಎಂದು ಹೇಳಿದರು. ಸಂವಿಧಾನ, ಪ್ರಜಾಪ್ರಭುತ್ವವನ್ನು ರಕ್ಷಿಸಲು ಬಿಜೆಪಿ ಸದಾ ಬದ್ಧ ಎಂದು ಜನರಿಗೆ ತಿಳಿಸಬೇಕು ಎಂದು ತಿಳಿಸಿದರು.
ನಮ್ಮದು ಕುಟುಂಬಾಧಾರಿತ ಪಕ್ಷವಲ್ಲ. ನೆಹರೂ ಅವರಿಂದ ಆರಂಭಿಸಿ ರಾಹುಲ್ ಗಾಂಧಿವರೆಗೆ ಕಾಂಗ್ರೆಸ್ ಪಕ್ಷವು ಕುಟುಂಬ ಆಧರಿತ ಪಕ್ಷವಾಗಿ ಕೆಲಸ ಮಾಡಿದೆ. ಬಡತನ ನಿರ್ಮೂಲನ (ಗರೀಬಿ ಹಠಾವೋ) ಘೋಷಣೆ ಮಾಡಿದ ಕಾಂಗ್ರೆಸ್ ಪಕ್ಷದ ಮುಖಂಡರು ಮಾತ್ರವಲ್ಲದೆ ಚೇಲಾಗಳ ಬಡತನ ದೂರವಾಗಿದೆ ಎಂದು ವ್ಯಂಗ್ಯವಾಗಿ ನುಡಿದರು. ಬಿಜೆಪಿ ವಿಚಾರಧಾರೆ, ಸಂಘಟನೆ ಕುರಿತು ಅವರು ವಿವರಿಸಿದರು.
ಸ್ವಾಮಿ ವಿವೇಕಾನಂದರು ಷಿಕಾಗೋದಲ್ಲಿ ಮಾಡಿದ ಭಾಷಣವನ್ನೂ ಅವರು ಉಲ್ಲೇಖಿಸಿದರು. ಮುಂದೆ ಹಿಂದುಸ್ತಾನದ ಜನರ ಶತಮಾನ ಬರಲಿದೆ ಎಂದು ಅವರು ಹೇಳಿದ್ದನ್ನು ನೆನಪಿಸಿದರು. 10 ಕೋಟಿಗೂ ಹೆಚ್ಚು ಗ್ಯಾಸ್ ಸಿಲಿಂಡರ್ ಸಂಪರ್ಕ ನೀಡಿದ್ದನ್ನು ತಿಳಿಸಿದರು. ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುವ ಪಕ್ಷ ಎಂದು ಟೀಕಿಸಿದರು. ಚೆನ್ನೈ- ಬೆಂಗಳೂರು ಹೈವೇ ಕಾಮಗಾರಿ ಶೀಘ್ರವೇ ಮುಗಿಯಲಿದೆ ಎಂದು ತಿಳಿಸಿದರು.
ಜಾತಿವಾದದ ಪಕ್ಷ ನಮ್ಮದಲ್ಲ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಚಿಂತನೆ ನಮ್ಮದು. ಜನರ ನಡುವೆ ತಾರತಮ್ಯ ಮಾಡಿದ ಪಕ್ಷ ನಮ್ಮದಲ್ಲ ಎಂದು ಅವರು ವಿವರಿಸಿದರು. ಸಂಸತ್ತಿನಲ್ಲಿ ಹಿಂದೂ ಶಬ್ದವನ್ನು ಟೀಕಿಸಿದ್ದು ದೌರ್ಭಾಗ್ಯಕರ ಎಂದು ನುಡಿದರು.
ಕೃಷಿ, ಕೈಗಾರಿಕೆ, ಸೇವಾ ಕ್ಷೇತ್ರಗಳನ್ನು ನಾವು ಬಲಪಡಿಸಬೇಕಿದೆ. ಸ್ವದೇಶಿ, ಸ್ವಾವಲಂಬನೆ ಮೂಲಕ ಅಭಿವೃದ್ಧಿ ಕಡೆ ನಾವು ಗಮನ ಕೊಡುತ್ತಿದ್ದೇವೆ. ಇದೇ ಬಿಜೆಪಿಯ ಅಜೆಂಡ ಎಂದು ತಿಳಿಸಿದರು. ಸಮಸ್ಯೆಗಳನ್ನು ಸವಾಲನ್ನಾಗಿ ಪರಿವರ್ತನೆ ಮಾಡಿಕೊಂಡು ಮುನ್ನಡೆಯೋಣ ಎಂದು ಮನವಿ ಮಾಡಿದರು.
ಹಿಂದುಸ್ತಾನವನ್ನು ವಿಶ್ವ ಗುರು ಮಾಡುವ ಸಂಕಲ್ಪ ನಮ್ಮದು. ನಿಮ್ಮಂಥ ದೇವದುರ್ಲಭ ಕಾರ್ಯಕರ್ತರು ನಮ್ಮ ಜೊತೆಗಿರುವುದು ನಮ್ಮ ಸೌಭಾಗ್ಯ. ಸಂಸದ ಮಾಜಿ ಆಗಬಹುದು. ಆದರೆ, ಕಾರ್ಯಕರ್ತ ಯಾವತ್ತೂ ಮಾಜಿ ಆಗುವುದಿಲ್ಲ ಎಂದು ತಿಳಿಸಿದರು. ಅಧಿಕಾರ ಬರುತ್ತದೆ; ಹೋಗುತ್ತದೆ. ಆ ಕುರಿತು ಚಿಂತೆ ಮಾಡಬೇಡಿ. ಸೂರ್ಯೋದಯ, ಸೂರ್ಯಾಸ್ತಮಾನ ಆಗುತ್ತಿರುತ್ತದೆ. ಭಾರತವನ್ನು ವಿಶ್ವಗುರು ಮಾಡುವ ಸಂಕಲ್ಪದೊಂದಿಗೆ ಮುನ್ನಡೆಯೋಣ ಎಂದು ಕಿವಿಮಾತು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅಧ್ಯಕ್ಷೀಯ ನುಡಿಗಳನ್ನು ಆಡಿದರು. ಯಾವತ್ತೇ ವಿಧಾನಸಭಾ ಚುನಾವಣೆ ನಡೆದರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಮುಂದಿನ ದಿನಗಳು ಬಿಜೆಪಿಯ ದಿನಗಳು ಎಂದು ವಿಶ್ವಾಸದಿಂದ ನುಡಿದರು.
ನರೇಂದ್ರ ಮೋದಿಜೀ ಅವರ ನೇತೃತ್ವದ ಎನ್ಡಿಎ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಬಗ್ಗೆ ಸಂತಸ ಸೂಚಿಸಿದರು. ಕಾಂಗ್ರೆಸ್ ಪಕ್ಷ, ಇಂಡಿ ಒಕ್ಕೂಟಗಳು ಸತತವಾಗಿ ಮೂರನೇ ಬಾರಿ ಸೋಲನ್ನು ಅನುಭವಿಸಿ ಮತ್ತೆ ವಿಪಕ್ಷ ಸ್ಥಾನದಲ್ಲಿವೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಒಂದೇ ಒಂದು ವರ್ಷದಲ್ಲಿ ತನ್ನ ಜನಪ್ರಿಯತೆಯನ್ನು ಕಳಕೊಂಡಿದೆ ಎಂದು ವಿವರಿಸಿದರು.
ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿಗೆ 130ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಮಗೆ ಲೀಡ್ ಕೊಟ್ಟಿದ್ದಾರೆ ಎಂದು ತಿಳಿಸಿದರು. ಭಿಕ್ಷುಕನ ತಟ್ಟೆಗೆ ಶಬ್ದ ಬರುವಂತೆ ನಾಣ್ಯ ಹಾಕಿ ಶಬ್ದ ಬರದಂತೆ ನೋಟನ್ನು ಕಸಿಯುವ ಕೆಲಸವನ್ನು ಕಾಂಗ್ರೆಸ್ ರಾಜ್ಯ ಸರಕಾರ ಮಾಡುತ್ತಿದೆ ಎಂದು ಅವರು ಟೀಕಿಸಿದರು. ಒಂದು ಕೈಯಲ್ಲಿ ಹಣ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿಯುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಹಿಂದಿನಂತೆ ನಗರ ಸೀಮಿತ, ಮುಂದುವರೆದ ಜನಾಂಗದ ಪಕ್ಷವಾಗಿ ಉಳಿದಿಲ್ಲ. ಸಿದ್ದರಾಮಯ್ಯನವರ ಸವಾಲು ಸ್ವೀಕರಿಸಿದ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತಂದಿದ್ದಾರೆ ಎಂದು ನೆನಪಿಸಿದರು. ಕ್ಲಿಷ್ಟಕರ ಸನ್ನಿವೇಶದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರ ಶ್ರಮ, ಹೋರಾಟ ಅಭಿನಂದನಾರ್ಹ ಎಂದು ತಿಳಿಸಿದರು.
11ರಂದು ರಾಜ್ಯ ಪದಾಧಿಕಾರಿಗಳ ಸಭೆ ನಡೆಸಲಿದ್ದೇನೆ. ಪಕ್ಷ ಸಂಘಟನೆ, ದುಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟ ಕುರಿತು ಚರ್ಚೆ ಮಾಡುತ್ತೇವೆ ಎಂದು ವಿಜಯೇಂದ್ರ ಅವರು ತಿಳಿಸಿದರು. 20ರೊಳಗೆ ಜಿಲ್ಲಾ ಕಾರ್ಯಕಾರಿಣಿ ಮುಗಿಸಲು ಸೂಚಿಸಿದರು. ದುಷ್ಟ, ಭ್ರಷ್ಟ, ಜನವಿರೋಧಿ ಸರಕಾರದ ವಿರುದ್ಧ ಹೋರಾಟ ನಿರಂತರ ಎಂದು ತಿಳಿಸಿದರು.
ಮುಂದಿನ ದಿನಗಳು ಹೋರಾಟದ ದಿನಗಳು. ಹೋರಾಟದಲ್ಲಿ, ಚುನಾವಣೆಗಳಲ್ಲಿ ಜನಪ್ರತಿನಿಧಿಗಳು ಕಾರ್ಯಕರ್ತರ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಬೇಕೆಂದು ತಿಳಿಸಿದರು. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಕಾರ್ಯಕರ್ತರ ಚುನಾವಣೆ ಎಂದರಲ್ಲದೆ, ಕಡ್ಡಾಯವಾಗಿ ಪ್ರಧಾನಿಯವರ ಮನ್ ಕೀ ಬಾತ್ ಸಂದೇಶ ಆಲಿಸಲು ವಿನಂತಿಸಿದರು.
ಕಾಂಗ್ರೆಸ್ಸಿನ ದಬ್ಬಾಳಿಕೆ, ಪೊಳ್ಳು ಭರವಸೆ, ನಮ್ಮ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಕೇಸು ಹಾಕಿದ್ದರೂ ಅವರಿಗೆ ಎರಡಂಕೆಯ ಸಂಸದರನ್ನು ಗೆಲ್ಲಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದು ವಿಶ್ಲೇಷಿಸಿದರು. ಜನವಿರೋಧಿ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಲು ಹೋರಾಟ ಮಾಡಲಿದ್ದೇವೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಕಾರ್ಪೊರೇಷನ್ ಚುನಾವಣೆಯಲ್ಲಿ ಅಧಿಕಾರ ಪಡೆಯಲು ಶ್ರಮಿಸುವಂತೆ ಮನವಿ ಮಾಡಿದರು.
ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಂಸದರು, ಕೇಂದ್ರ ಸಚಿವರು, ಪ್ರಮುಖರು ಇದ್ದರು.
ಕೋರ್ ಕಮಿಟಿ ಸದಸ್ಯರು, ಪಕ್ಷದ ಪದಾಧಿಕಾರಿಗಳು ಮತ್ತು ಅಪೇಕ್ಷಿತರು ಉಪಸ್ಥಿತರಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಕಾರ್ಯಕ್ರಮ ನಿರೂಪಿಸಿದರು. ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಅವರು ಸ್ವಾಗತಿಸಿದರು. ಜಗದೀಶ್ ಹಿರೇಮನಿ ಅವರು ವೈಯಕ್ತಿಕ ಗೀತೆ ಪ್ರಸ್ತುತ ಪಡಿಸಿದರು. ಅಂಬಿಕಾ ಹುಲಿನಾಯ್ಕರ್ ಅವರು ವಂದಿಸಿದರು. ಬಳಿಕ ರಾಷ್ಟ್ರಗೀತೆ ಹಾಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.