ಕಾವೂರು: ಇಂದು ಭಾರತ ಇಡೀ ವಿಶ್ವದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮುಂಚೂಣಿಯಲ್ಲಿದೆ. ಜಗತ್ತು ಭಾರತದ ಸ್ನೇಹವನ್ನು ಬಯಸುತ್ತಾ, ಇಲ್ಲಿನ ಸಂಸ್ಕೃತಿಯನ್ನು ಗೌರವಿಸುತ್ತಿರುವ ಸಂದರ್ಭದಲ್ಲಿ ಭಾರತೀಯರಾದ ನಾವು ಸಂಕುಚಿತ ಮನೋಭಾವದಿಂದ ಹೊರಬಂದು ಸಾಮರಸ್ಯದ ಕಡೆಗೆ ತೆರೆದುಕೊಳ್ಳುವ ಅವಶ್ಯಕತೆ ತುಂಬಾ ಇದೆ ಎಂದು, ಸಾಮಾಜಿಕ ಕಾರ್ಯಕರ್ತರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಮರಸ್ಯ ಟೋಳಿ ಸದಸ್ಯರು ಆಗಿರುವ ಶ್ರೀ ಸುರೇಶ್ ಪರ್ಕಳ ಅವರು ಅಭಿಪ್ರಾಯ ಪಟ್ಟರು.
ಜೂನ್ 25ಕ್ಕೆ ನಡೆದ ಕಾವೂರು ನಗರದ ‘ಮಂಥನ’ ಘಟಕದ ಆರನೇ ಆವೃತ್ತಿಯ ಕಾರ್ಯಕ್ರಮದ ವಕ್ತಾರರಾಗಿ ಆಗಮಿಸಿದ್ದ ಶ್ರೀ ಸುರೇಶ್ ಅವರು ತಮ್ಮ ವಿಚಾರ ಮಂಡಿಸುತ್ತಾ, ನಮ್ಮ ಪರಂಪರೆಯಲ್ಲಿ ಗಂಗಾ ನದಿಗೆ ವಿಶೇಷವಾದ ಸ್ಥಾನ ಇದ್ದು ಗಂಗೆ ಪವಿತ್ರಾತಿ ಪವಿತ್ರ ಜಲ ಎನಿಸಿಕೊಂಡಿದ್ದರೂ ಸಹ ಅದು ಮಾನವ ಕುಲದ ಅತಿರೇಕದ ವರ್ತನೆಯಿಂದ ರೋಗ ರುಜಿನ ತರುವ ಮಲಿನ ನೀರಾಗಿದೆ. ಆದರೂ ಉಗಮಸ್ಥಾನದ ಗಂಗೆ ಇಂದಿಗೂ ಪವಿತ್ರವಾಗಿಯೇ ಇದೆ. ಅದೇ ರೀತಿ ಮೂಲ ಹಿಂದುತ್ವದಲ್ಲಿ ಯಾವುದೇ ರೀತಿಯ ಹುಳುಕು ಇರದಿದ್ದರೂ ಸಹ ಮನುಷ್ಯನ ಸ್ವಾರ್ಥಕ್ಕೋ ಅಥವಾ ರಾಜಕೀಯ ಪೀತೂರಿಯಿಂದಲೋ ಜಾತಿಯ ಆಧಾರದದಲ್ಲಿ ಅಸ್ಪ್ರಶ್ಯತೆಯಂತ ಕೀಳು ಪದ್ದತಿಗಳು ಹಿಂದುತ್ವದ ಜೊತೆ ಥಳಕು ಹಾಕಿಕೊಂಡಿದೆ.
ಕೆಲವು ಸಾಹಿತಿಗಳು, ಬುದ್ದಿಜೀವಿಗಳು ಇದೇ ಕಾರಣಕ್ಕೆ ತಮಗೆ ಹಿಂದುತ್ವ ಬೇಕಿಲ್ಲ ಎನ್ನುವ ವಿಘಟಕ ಧೋರಣೆಯನ್ನು ಪ್ರಚಾರಪಡಿಸಿ ಸಮಾಜದಲ್ಲಿ ಜಾತಿಯ ಕಂದಕ ಇನ್ನಷ್ಟು ಜಟಿಲವಾಗುತ್ತಿರುವ ಕಾಲಘಟ್ಟದಲ್ಲಿ, ಹುಟ್ಟಿದ ಜಾತಿ ಯಾವುದೇ ಆಗಿದ್ದರೂ, ಸಮಾಜದ ನೊಂದ ಮನಸ್ಸುಗಳನ್ನು ಸಂತೈಸಿ ಅವರನ್ನು ಮುಖ್ಯವಾಹಿನಿಗೆ ತರಲು ಜೀವನವನ್ನೇ ಮುಡಿಪಾಗಿಟ್ಟ ಶ್ರೀ ನಾರಾಯಣ ಗುರುಗಳು, ಡಾ. ಬಿ.ಆರ್.ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಹೀಗೆ ಅನೇಕ ಮಹನೀಯರು ನಮಗೆ ಸ್ಪೂರ್ತಿಯಾಗಿದ್ದಾರೆ ಎಂದು ಸುರೇಶ್ ಅವರು ಹೇಳಿದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಯಾವುದೇ ಜಾತಿ ಭೇದವಿಲ್ಲದೆ ಮುಕ್ತವಾಗಿ ಕುಡಿಯಲು ನೀರು, ಆರಾಧನೆಗಾಗಿ ದೇವಸ್ಥಾನ ಪ್ರವೇಶ ಮತ್ತು ಮರಣಾ ನಂತರ ಸ್ಮಶಾನದ ವ್ಯವಸ್ಥೆ ಸಿಗುವವರೆಗೂ ಮೀಸಲಾತಿಯ ಅವಶ್ಯಕತೆ ಇದೆ. ‘ಜಾತಿ ಪದ್ಧತಿ’ ಬಹಳ ಸೂಕ್ಷ್ಮ ವಿಚಾರವಾಗಿದ್ದು, ದೊಡ್ಡ ಹೋರಾಟಗಳಿಂದ ಅಥವಾ ಪೌರುಷದಿಂದ ಆಗಬಹುದಾದ ಬದಲಾವಣೆ ಅಲ್ಲ. ನೂರಾರು ವರ್ಷಗಳಿಂದ ನಮ್ಮ ಸಮಾಜದಲ್ಲಿ ಬೇರುಬಿಟ್ಟ ಇಂಥಹ ಆಚರಣೆಯನ್ನು ತೊಲಗಿಸಲು ಮೊದಲು ನಮ್ಮ ಮನಸ್ಸುಗಳನ್ನು ಬದಲಾಯಿಸಿಕೊಂಡು ಯಾವುದೇ ರೀತಿಯ ಪ್ರಚಾರವಿಲ್ಲದೇ ಸಮಾಜದಲ್ಲಿ ಗುಪ್ತಗಾಮಿನಿಯಂತೆ ಕೆಲಸ ಮಾಡುವ ಅಗತ್ಯವಿದೆ ಎಂದರು.
ಕಾವೂರಿನ ಸೊಸೈಟಿ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾನ್ಯ ಸಂಘಚಾಲಕ್ ಆಗಿರುವ ಶ್ರೀ ಬಿ.ಕೆ.ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರೋಹಿತ್ ‘ಶ್ರೀರಾಮ ಜಯಂ’ ಎನ್ನುವ ಪುಸ್ತಕ ಪರಿಚಯ ಮಾಡಿದರು. ವಕೀಲರಾದ ಶ್ರೀ ಸೂರಜ್ ಸ್ವಾಗತಿಸಿದರೆ, ಶ್ರೀಮತಿ ಸುಮಿತಾ ಹರೀಶ್ ನೀರೂಪಿಸಿದರು. ಶ್ರೀಮತಿ ನೀತಾ ಹರೀಶ್ ವಂದನಾರ್ಪಣೆ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.