ಬೆಂಗಳೂರು: ಪೆಟ್ರೋಲ್ ಬೆಲೆ ಲೀಟರ್ಗೆ 3 ರೂ, ಡೀಸೆಲ್ ಬೆಲೆ 3.5 ರೂ ಹೆಚ್ಚಳದ ಅವಿವೇಕದ ಮತ್ತು ಜನವಿರೋಧಿ ನಿರ್ಧಾರವನ್ನು ಕಾಂಗ್ರೆಸ್ ಸರಕಾರ ಕೈಗೊಂಡಿದೆ. ಏರಿಸಿದ ದರ ಹಿಂಪಡೆಯುವವರೆಗೆ ಬಿಜೆಪಿ ಹೋರಾಟ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಪ್ರಕಟಿಸಿದರು.
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಸಿದ ಸರಕಾರದ ಕ್ರಮವನ್ನು ಖಂಡಿಸಿ ತಮ್ಮ ನೇತೃತ್ವದಲ್ಲಿ ಇಂದು ಸ್ವಾತಂತ್ರ್ಯ ಉದ್ಯಾನವನದ ಬಳಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. ನಾವು ವಿಪಕ್ಷವಾಗಿ ಜನರ ಪರವಾಗಿ ಧ್ವನಿ ಎತ್ತಬೇಕಿದೆ. ರಾಜ್ಯದ ರೈತರು, ಬಡವರು, ಜನಸಾಮಾನ್ಯರಿಗೆ ನ್ಯಾಯ ಕೊಡಿಸುವ ಕೆಲಸವನ್ನು ನಾವು- ನೀವೆಲ್ಲರೂ ಸೇರಿ ಮಾಡಬೇಕಿದೆ ಎಂದು ತಿಳಿಸಿದರು. ಜನವಿರೋಧಿ ಸರಕಾರ ಮತ್ತು ಜನವಿರೋಧಿ ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಹೋರಾಟ ಕೈಗೆತ್ತಿಕೊಂಡಿದೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ 18ರಿಂದ 20 ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದ ಕಾಂಗ್ರೆಸ್ ಮುಖಂಡರು ಫಲಿತಾಂಶ ಬಂದ ಬಳಿಕ ಹತಾಶರಾಗಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಶಾಸಕರೇ ಗ್ಯಾರಂಟಿ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ ಎಂದ ಅವರು, ವಿರೋಧ ಪಕ್ಷದಲ್ಲಿ ಇದ್ದಾಗ ಸಿದ್ದರಾಮಯ್ಯನವರಿಗೆ ಇದ್ದ ಜನಪರ ಕಾಳಜಿ ಮುಖ್ಯಮಂತ್ರಿಗಳಾದ ಬಳಿಕ ಎಲ್ಲಿ ಕಳೆದುಹೋಗಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರಕ್ಕೆ ಕಳೆದ ಒಂದು ವರ್ಷದ ಅಧಿಕಾರದಲ್ಲಿ ಒಂದೇ ಒಂದು ರೂಪಾಯಿಯನ್ನೂ ಅಭಿವೃದ್ಧಿಗೆ ಕೊಡಲು ಸಾಧ್ಯವಾಗಿಲ್ಲ ಎಂದು ಆಕ್ಷೇಪಿಸಿದರು. ಮುದ್ದೇಬಿಹಾಳದ ಕಾಂಗ್ರೆಸ್ ಶಾಸಕ ನಾಡಗೌಡರು ಅಭಿವೃದ್ಧಿ ಕಾರ್ಯ ಸ್ಥಗಿತವಾದ ಕುರಿತು ಹೇಳಿಕೆ ಕೊಟ್ಟಿದ್ದಾರೆ. ತಾವು ಕ್ಷೇತ್ರದಲ್ಲಿ ತಲೆ ಎತ್ತಿ ಓಡಾಡಲೂ ಆಗದ ಸ್ಥಿತಿ ಎಂದು ಗಮನ ಸೆಳೆದಿದ್ದಾರೆ; ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲೂ ಸಿದ್ಧ ಎಂದು ಹೇಳಿರುವುದಾಗಿ ಗಮನ ಸೆಳೆದರು. ರಸ್ತೆ, ಶಾಲೆಗಳ ಅಭಿವೃದ್ಧಿ, ಆಸ್ಪತ್ರೆಗಳ ವಿಚಾರದಲ್ಲೂ ಅಭಿವೃದ್ಧಿ ಎಂಬುದು ಕನಸಾಗಿದೆ ಎಂದು ಟೀಕಿಸಿದರು.
ಬಿಜೆಪಿ ಸರಕಾರ ಇದ್ದಾಗ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಾಗ ರಾಜ್ಯದಲ್ಲಿ ಕಂದಾಯ ಮಿಗತೆ ಇತ್ತು. ಹೆಚ್ಚು ಸಾಲಗಳೂ ಇರಲಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ಒಂದೇ ಒಂದು ವರ್ಷದಲ್ಲಿ ಕರ್ನಾಟಕ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ರಾಜ್ಯ ದಿವಾಳಿ ಅಂಚಿಗೆ ಹೋಗಿದೆ. ಹಾಗಿದ್ದರೆ ಯಾವ ಪುರುಷಾರ್ಥಕ್ಕೆ ಆಡಳಿತ ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಬೆಲೆ ಏರಿಕೆ, ಹಣದುಬ್ಬರದ ಕುರಿತು ತಿಳಿದಿದ್ದರೂ ಅನುಭವಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಲೋಕಸಭಾ ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ದರ ಹೆಚ್ಚಳದ ಈ ಜನವಿರೋಧಿ ನಿರ್ಧಾರ ಮಾಡಿದ್ದು, ಇದು ಅಕ್ಷಮ್ಯ ಅಪರಾಧ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಸಿದ್ದರಾಮಯ್ಯನವರಿಗೆ ಎರಡು ನಾಲಿಗೆ ಎಂದು ಟೀಕಿಸಿದರು. ಹಿಂದೆ ಅವರು ವಿರೋಧ ಪಕ್ಷದಲ್ಲಿದ್ದಾಗ ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಯನ್ನು ಖಂಡಿಸಿದ್ದರು ಎಂದು ಸಿದ್ದರಾಮಯ್ಯನವರ ವಿಡಿಯೋ ಪ್ರದರ್ಶನ ಮಾಡಿದರು.
ಸಿದ್ದರಾಮಯ್ಯನವರು ಮಾನಮರ್ಯಾದೆ ಇಲ್ಲದ ಕಾಂಗ್ರೆಸ್ಸಿಗೆ ಸೇರಿದವರು. ಸಿದ್ರಾಮಣ್ಣ ನುಂಗಣ್ಣ ಎಂದರಲ್ಲದೆ, ವಾಲ್ಮೀಕಿ ನಿಗಮಕ್ಕೆ ಸೇರಿದ 187 ಕೋಟಿ ನುಂಗಿದ ನಾಗೇಂದ್ರರ ವಿಕೆಟ್ ಪತನವಾಗಿದೆ. ಈಗ ಎರಡನೇ ವಿಕೆಟ್ ಸಿದ್ದರಾಮಯ್ಯನವರದು ಎಂದು ತಿಳಿಸಿದರು. ಏರಿಸಿದ ಪೆಟ್ರೋಲ್, ಡೀಸೆಲ್ ದರವನ್ನು ಇಳಿಸಲು ಒತ್ತಾಯಿಸಿದರು. ಗ್ಯಾರಂಟಿಗೆ ಸಂಬಂಧಿಸಿ ಖಜಾನೆಯಿಂದಲೇ ಹಣ ನೀಡುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿಯವರು, ಕಾಂಗ್ರೆಸ್ ಪಕ್ಷದಿಂದ ಹಣ ಕೊಡುತ್ತಿಲ್ಲ ಎಂದು ಅವರು ತಿಳಿಸಿದರು.
ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರವು ಕಳೆದೊಂದು ವರ್ಷದಲ್ಲಿ ನಿರಂತರವಾಗಿ ಬೆಲೆ ಏರಿಕೆ, ದರ ಏರಿಕೆಯನ್ನು ಮಾಡುತ್ತಲೇ ಬಂದಿದೆ ಎಂದು ದೂರಿದರು. ಏರಿಸಿದ ಪೆಟ್ರೋಲ್, ಡೀಸೆಲ್ ದರ ಹಿಂಪಡೆಯಲು ಅವರು ಆಗ್ರಹಿಸಿದರು.
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮಾತನಾಡಿ, ಕರ್ನಾಟಕ ಸೇರಿ 3 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ಜನರಿಗೆ ಮೂರು ನಾಮ ಹಾಕುತ್ತಿದೆ. ಸಿದ್ದರಾಮಯ್ಯನವರು ತಾವು ಮಾತ್ರ ಟೋಪಿ ಹಾಕುವುದಲ್ಲ. ಜನರಿಗೆಲ್ಲ ಟೋಪಿ ಹಾಕುತ್ತಿದ್ದಾರೆ ಎಂದು ಟೀಕಿಸಿದರು. ಟೋಪಿ ಹಾಕಿ ನಾಮ ಹಾಕಿ ಜನರಿಗೆ ಚೆಂಬು ಕೊಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.