ಬಾಗಲಕೋಟೆ : ಕಾಂಗ್ರೆಸ್ನ ಇತಿಹಾಸ ದೇಶದ ಲೂಟಿ ಮಾಡುವುದೇ ಆಗಿದೆ. ಅಂಥ ಪಕ್ಷದವರ ಕೈಯಲ್ಲಿ ದೇಶ ಕೊಡಲು ಸಾಧ್ಯವೇ ಎಂದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನರನ್ನು ಪ್ರಶ್ನಿಸಿದರು.
ಬಾಗಲಕೋಟೆಯಲ್ಲಿ ಇಂದು ಬೆಳಿಗ್ಗೆ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನೂ ತಮ್ಮ ಲೂಟಿಯ ಎಟಿಎಂ ಮಾಡಿದೆ. ಇಷ್ಟು ಕಡಿಮೆ ಸಮಯದಲ್ಲೇ ಕರ್ನಾಟಕದ ಸರಕಾರಿ ಖಜಾನೆ ಖಾಲಿಯಾಗಿದೆ. ರಾಜ್ಯ ಸರಕಾರಿ ನೌಕರರಿಗೆ ವೇತನ ಕೊಡಲೂ ಸಾಧ್ಯವಾಗದ ಸ್ಥಿತಿ ಬರಲಿದೆ. ನಿಮ್ಮ ಮಕ್ಕಳೂ ಹಸಿವಿನಿಂದ ಒದ್ದಾಡುವ ಸ್ಥಿತಿ ಬಂದೀತು ಎಂದು ಎಚ್ಚರಿಸಿದರು.
ನಮ್ಮ ಸರಕಾರವು ಕರ್ನಾಟಕದಲ್ಲಿ ವಿಜಯಪುರ ಸೇರಿ ಹಲವಾರು ವಿಮಾನನಿಲ್ದಾಣ ನಿರ್ಮಿಸುತ್ತಿದೆ. ಬಾಗಲಕೋಟೆಯಲ್ಲಿ ಆಧುನಿಕ ರೈಲು ನಿಲ್ದಾಣ ಬರಲಿದೆ. ರಾಷ್ಟ್ರೀಯ ಹೆದ್ದಾರಿ ಕೂಡ ಮಾಡಲಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಮೋದಿಯು ಮೂಲಸೌಕರ್ಯಕ್ಕೆ ಒತ್ತು ಕೊಟ್ಟಿದ್ದಾನೆ. ವಂಚಿತ ವರ್ಗಕ್ಕೆ ನಾವು ಆದ್ಯತೆ ಕೊಟ್ಟಿದ್ದೇವೆ. ಮೋದಿ ಅಧಿಕಾರಕ್ಕೆ ಬರುವ ಮೊದಲೇ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಆ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕೊಡಲಾಗಿದೆ ಎಂದು ವಿವರಿಸಿದರು.
ನೀರಿನ ಸಮಸ್ಯೆ ಪರಿಹಾರಕ್ಕೆ ಜಲಜೀವನ್ ಮಿಷನ್ ಅನುಷ್ಠಾನ ಮಾಡಿದ್ದು, ಶೇ 75ಕ್ಕೂ ಹೆಚ್ಚು (11 ಕೋಟಿ ಮನೆ) ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಕೊಟ್ಟಿದ್ದೇವೆ. ಹಿಂದೆ ಅದು ಕೇವಲ ಶೇ 16ರಷ್ಟಿತ್ತು. ಇದನ್ನು ಇವರು ಯಾಕೆ ಮಾಡಿಲ್ಲ ಎಂದು ಕೇಳಿದರು. ಕಾಂಗ್ರೆಸ್ಸಿಗೆ ಬಡವರ, ದಲಿತರ, ವಂಚಿತರ ಕಡೆ ಗಮನ ಕೊಡಲು ಪುರುಸೊತ್ತಿಲ್ಲ ಎಂದು ಟೀಕಿಸಿದರು.
ಈಗ ಅಭಿವೃದ್ಧಿ ಎಂಬುದು ದೇಶದ ಎಲ್ಲ ಗ್ರಾಮಗಳನ್ನು ತಲುಪುತ್ತಿದೆ. ಎಸ್ಸಿ, ಎಸ್ಟಿ ಸಮುದಾಯ ಅಭಿವೃದ್ಧಿ ವಂಚಿತವಾಗಿತ್ತು. ಗ್ಯಾಸ್ ಸಿಲಿಂಡರ್ಗಳನ್ನು ನೀಡಿದ್ದು, ಎಸ್ಸಿ, ಎಸ್ಟಿ ಒಬಿಸಿ ಸಮುದಾಯದವರಿಗೆ ಗರಿಷ್ಠ ಪ್ರಯೋಜನ ಲಭಿಸಿದೆ. ಯಡಿಯೂರಪ್ಪ ಅವರು ರೈತರಿಗೆ ನೆರವಾದವರು. ನಾವು ಇಥೇನಾಲ್ ಮೂಲಕ ರೈತರಿಗೆ ನೆರವಾಗಿದ್ದೇವೆ ಎಂದು ವಿವರಿಸಿದರು.
ಬೆಂಗಳೂರನ್ನು ಟ್ಯಾಂಕರ್ ಹಬ್ ಮಾಡಿದ ಕಾಂಗ್ರೆಸ್..
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ವಸೂಲಿ ಗ್ಯಾಂಗ್ ನಡೆಸುತ್ತಿದೆ. ಭ್ರಷ್ಟಾಚಾರದ ಮೂಲಕ ವಸೂಲಿ ಮಾಡುವುದೇ ಇವರ ದಂಧೆ. ಬೆಂಗಳೂರು ಟೆಕ್ ಹಬ್ ಎಂದೇ ಗುರುತಿಸಿಕೊಂಡಿದೆ. ಇದನ್ನು ಟ್ಯಾಂಕರ್ ಹಬ್ ಮಾಡಿದ್ದಾರೆ. ನೀರಿಗಾಗಿ ಟ್ಯಾಂಕರ್ ಮಾಫಿಯದ ಮೂಲಕ ಕಾಂಗ್ರೆಸ್ ಕಮಿಷನ್ ಪಡೆಯುತ್ತಿದೆ. ಕಾಂಗ್ರೆಸ್ಸಿಗರು 2 ಜಿ ಹಗರಣದಂಥ ಭ್ರಷ್ಟಾಚಾರದ ದೊಡ್ಡ ಹಗರಣ ಮಾಡಲು ಕಾಯುತ್ತಿದ್ದಾರೆ. ಭ್ರಷ್ಟಾಚಾರಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಿ ಎಂದು ಮೋದಿಯವರು ಮನವಿ ಮಾಡಿದರು.
ಕಾಂಗ್ರೆಸ್ಸಿಗರು ಮುಸ್ಲಿಮರಿಗೆ ಒಬಿಸಿ ಮೀಸಲಾತಿಯಡಿ ಅವಕಾಶ ಕೊಟ್ಟಿದ್ದಾರೆ. ದಲಿತರನ್ನು ವಂಚಿಸುವ ಹುನ್ನಾರವಿದು. ಧರ್ಮದ ಆಧಾರದಲ್ಲಿ ತಮ್ಮ ಮತಬ್ಯಾಂಕ್ ರಕ್ಷಿಸಲು ಇವರು ಮುಂದಾಗಿದ್ದಾರೆ. ಎಸ್ಸಿ, ಎಸ್ಟಿ, ಒಬಿಸಿ ಸಂಸದರು ಬಿಜೆಪಿಯಲ್ಲಿದ್ದಾರೆ. ಆದ್ದರಿಂದ ಅಲ್ಪಸಂಖ್ಯಾತರನ್ನು ಪ್ರೋತ್ಸಾಹಿಸಲು ಕಾಂಗ್ರೆಸ್ಸಿಗರು ಮುಂದಾಗಿದ್ದಾರೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ನ ಇಂಥ ಹುನ್ನಾರ ಅನುಷ್ಠಾನಕ್ಕೆ ಮೋದಿ ಅವಕಾಶ ಕೊಡುವುದಿಲ್ಲ ಎಂದು ವಿಶ್ವಾಸದಿಂದ ನುಡಿದರು.
ವಿರೋಧ ಪಕ್ಷದವÀರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ನನ್ನ ಧ್ವನಿಯಲ್ಲಿ ನಕಲಿ ವಿಡಿಯೋ ಮಾಡುತ್ತಿದ್ದಾರೆ. ಇಂಥ ವಿಡಿಯೋ ಕಂಡರೆ ನಮ್ಮ ಪಕ್ಷದವರ ಗಮನಕ್ಕೆ ತನ್ನಿ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ನಾವು ಕದ್ದುಮುಚ್ಚಿ ಬಾಲಕೋಟ್ ದಾಳಿ ಮಾಡಿಲ್ಲ ಎಂದು ವಿವರಿಸಿದರು.
ಹುಬ್ಬಳ್ಳಿಯ ಘಟನೆ ಆತಂಕಕಾರಿ..
ಹುಬ್ಬಳ್ಳಿಯ ಘಟನೆ ಆತಂಕಕಾರಿ. ನಮ್ಮ ಮಗಳಂಥ ಯುವತಿಯ ಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದ ಅವರು, ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ. ಮತಬ್ಯಾಂಕಿಗಾಗಿ, ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಅದನ್ನು ಪ್ರಮುಖ ವಿಚಾರವಾಗಿ ಪರಿಗಣಿಸಿಲ್ಲ. ಹನುಮಾನ್ ಚಾಲೀಸವನ್ನು ಕೇಳುವ ಅಂಗಡಿ ಮಾಲೀಕನ ಮೇಲೆ ಹಲ್ಲೆ ಆಗುತ್ತದೆ. ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದರೆ ಸಿಲಿಂಡರ್ ಸ್ಫೋಟ ಎಂದು ಸರಕಾರದ ಪ್ರತಿನಿಧಿ ಹೇಳುತ್ತಾರೆ. ಇವೆಲ್ಲವೂ ಆತಂಕವಾದ, ಭಯೋತ್ಪಾದನೆಯ ಮಾನಸಿಕವಾದದ ಪ್ರತಿಬಿಂಬ. ಕಾಂಗ್ರೆಸ್ ಪಕ್ಷ ಮತಕ್ಕಾಗಿ ಇಂಥವರನ್ನು ಬೆಂಬಲಿಸುತ್ತದೆ ಎಂದು ಮೋದಿಯವರು ಟೀಕಿಸಿದರು.
ದೇಶದ ನಿರ್ದೋಷಿ ನಾಗರಿಕರನ್ನು ಕೊಲ್ಲಲು ಬಯಸುವವರನ್ನು ಸುಮ್ಮನೆ ಬಿಡುವುದಿಲ್ಲ. ವಿಕಸಿತ ಕರ್ನಾಟಕ, ವಿಕಸಿತ ಭಾರತಕ್ಕಾಗಿ ಮತ ಕೊಡಿ. ಪಿ.ಸಿ.ಗದ್ದಿಗೌಡರ್, ರಮೇಶ್ ಜಿಗಜಿಣಗಿ ಅವರನ್ನು ಗರಿಷ್ಠ ಬಹುಮತದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
2024ರ ಚುನಾವಣೆಯು ವಿಕಸಿತ ಭಾರತದ ಸಂಕಲ್ಪ ಹೊಂದಿದ ಚುನಾವಣೆ. ಆತ್ಮನಿರ್ಭರ ಭಾರತದ ಸಿದ್ಧಿಯ ಚುನಾವಣೆ ಇದು ಎಂದರಲ್ಲದೆ, ಭಾರತವು ವಿಶ್ವದ 3ನೇ ಪ್ರಮುಖ ಆರ್ಥಿಕ ಶಕ್ತಿಯಾಗಲು ಪೂರಕ ಚುನಾವಣೆ ಇದು ಎಂದತು. ನಿಮ್ಮ ಒಂದು ಮತವು ಇದನ್ನು ಸಾಧಿಸಲು ಸಹಕಾರಿ. ಮೋದಿಗೆ ಶಕ್ತಿ ಕೊಡಲು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು. ಪ್ರತಿ ಮನೆಗೆ ಹೋಗಿ ಮೋದಿಜೀ ಬಂದಿದ್ದರು. ನಿಮಗೆ ನಮಸ್ಕಾರ ಹೇಳಿದ್ದಾರೆ ಎಂದು ತಿಳಿಸಿ ಎಂದು ಮನವಿ ಮಾಡಿದರು.
ಭಾರತವನ್ನು ಕೌಶಲ್ಯಯುಕ್ತ ದೇಶ, ಉತ್ಪಾದನಾ ಹಬ್ ಆಗಿ ಪರಿವರ್ತಿಸಲು ದೂರದೃಷ್ಟಿ ಬೇಕು. ಇದು ಮೋಜಿನಿಂದ ಇರುವವರಿಂದ ಸಾಧ್ಯವಿಲ್ಲ. ಒಂದು ಸಂಕಲ್ಪಕ್ಕಾಗಿ 24-7 ಗಂಟೆಯೂ ಕೆಲಸ ಮಾಡುವವರು ಇದಕ್ಕೆ ಅಗತ್ಯ. ಮೋದಿಯ ದೂರದೃಷ್ಟಿ ಸ್ಪಷ್ಟವಾಗಿದೆ. ಮೋದಿಯ ಜೀವನವೂ ಸುಸ್ಪಷ್ಟವಾಗಿದೆ ಎಂದ ಅವರು ‘ಫಿರ್ ಏಕ್ ಬಾರ್..’ ಎಂದು ಘೋಷಣೆ ಕೂಗಿ ಮೋದಿ ಕಿ ಸರಕಾರ್ ಎಂದು ಉತ್ತರ ಪಡೆದರು. ಮೋದಿಯವರು ತಮ್ಮ ತಾಯಿಯ ಜೊತೆಗಿನ ಭಾವಚಿತ್ರವನ್ನು ನೇರಪ್ರಸಾರದಲ್ಲಿ ಟಿವಿಗಳಲ್ಲಿ ಪ್ರಸಾರ ಮಾಡಿದಾಗ ಜನರು ಮೋದಿ, ಮೋದಿ ಎಂದು ಕೂಗಿದರು.
ಕೇಂದ್ರದ ಮಾಜಿ ಸಚಿವ ಶ್ರೀನಿವಾಸಪ್ರಸಾದ್ ಅವರ ನಿಧನ ದುಃಖದ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು. ನೈಜ ಜನಸೇವಕರೊಬ್ಬರನ್ನು ನಾವು ಕಳಕೊಂಡಿದ್ದೇವೆ ಎಂದು ನುಡಿದರು.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಅಭ್ಯರ್ಥಿಗಳಾದ ರಮೇಶ್ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ್, ಮಾಜಿ ಸಚಿವರು, ಶಾಸಕರು, ಪಕ್ಷದ ರಾಜ್ಯ- ಜಿಲ್ಲಾ ಪದಾಧಿಕಾರಿಗಳು, ಪಕ್ಷದ ಮುಖಂಡರು ವೇದಿಕೆಯಲ್ಲಿದ್ದರು. ಪ್ರಧಾನಿಯವರ ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಸಾಗರೋಪಾದಿಯಲ್ಲಿ ಸೇರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.