ಬೆಂಗಳೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ 60 ಮತದೊಂದಿಗೆ 28ಕ್ಕೆ 28 ಕ್ಷೇತ್ರಗಳಲ್ಲೂ ಬಿಜೆಪಿ-ಜೆಡಿಎಸ್ ಗೆಲ್ಲಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮನವಿ ಮಾಡಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ನರೇಂದ್ರ ಮೋದಿಯವರ ಸಂದೇಶ, ಅವರ ಕೆಲಸ, ಕಾಂಗ್ರೆಸ್ಸಿನ ಅಭಿವೃದ್ಧಿಶೂನ್ಯತೆ- ಭ್ರóಷ್ಟಾಚಾರ ಕುರಿತು ಮನೆಮನೆಗೆ ಮಾಹಿತಿ ತಲುಪಿಸಿ ಎಂದು ವಿನಂತಿಸಿದರು. ಈ ಮೂಲಕ 28ಕ್ಕೆ 28 ಕ್ಷೇತ್ರಗಳಲ್ಲೂ ಎನ್ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಕೋರಿದರು.
2014ರಲ್ಲಿ ಬಿಜೆಪಿಗೆ 43 ಶೇ ಮತದೊಂದಿಗೆ 17 ಕ್ಷೇತ್ರ, 2019ರಲ್ಲಿ 51 ಶೇ ಮತದೊಂದಿಗೆ 25 ಕ್ಷೇತ್ರದಲ್ಲಿ ಗೆಲ್ಲಿಸಿದ್ದೀರಿ. ಒಂದೆಡೆ ಪ್ರಧಾನಮಂತ್ರಿ ಮೋದಿಜೀ ಇದ್ದಾರೆ. ಮುಖ್ಯಮಂತ್ರಿ ಆಗಿದ್ದಾಗ ಮತ್ತು ಪ್ರಧಾನಮಂತ್ರಿ ಆಗಿರುವಾಗ ಅವರ ಮೇಲೆ ಭ್ರಷ್ಟಾಚಾರದ ಆರೋಪವೇ ಇರಲಿಲ್ಲ. ಇನ್ನೊಂದೆಡೆ 12 ಲಕ್ಷ ಕೋಟಿಯ ಭ್ರಷ್ಟಚಾರದ ಕೂಟ ಇಂಡಿ ಇದೆ ಎಂದು ಅವರು ಟೀಕಿಸಿದರು.
ಕರ್ನಾಟಕದ ಜನರು ಭ್ರಷ್ಟಾಚಾರಿಗಳನ್ನು ಇಷ್ಟಪಡುವುದಿಲ್ಲ. ಕಾಮನ್ವೆಲ್ತ್, 2 ಜಿ, ಸೇಬು ಮಾರಾಟದ ಹಗರಣ, ಮಂತ್ರಿ ನಿವಾಸ ಹಗರಣ, ಜಮ್ಮು- ಕಾಶ್ಮೀರ ಹಗರಣ, ಆಗಸ್ತ ಹೆಲಿಕಾಪ್ಟರ್ ಹಗರಣ ಸೇರಿ 12 ಲಕ್ಷ ಕೋಟಿಯ ಹಗರಣ ಮಾಡಿದವರು ಇಂಡಿ ಕೂಟದಲ್ಲಿದ್ದಾರೆ. ಮೋದಿಯವರು ಒಂದು ಪೈಸೆಯ ಭ್ರಷ್ಟಾಚಾರ ಮಾಡಿಲ್ಲ ಎಂದು ವಿವರಿಸಿದರು.
ಮೋದಿಯವರೊಂದಿಗೆ ನಾನು 4 ದಶಕದಿಂದ ಕೆಲಸ ಮಾಡುತ್ತಿದ್ದೇನೆ. ಮೋದಿಯವರು 2 ದಶಕಕ್ಕೂ ಹೆಚ್ಚು ಕಾಲ ಮುಖ್ಯಮಂತ್ರಿ- ಪ್ರಧಾನಿಯಾಗಿ ಕೆಲಸ ಮಾಡಿದ್ದು, ಒಂದು ದಿನವೂ ರಜೆ ಪಡೆದಿಲ್ಲ. ರಾಹುಲ್ ಬಾಬಾ ಅವರು ಬೇಸಿಗೆ ಬಂದೊಡನೆ ವಿದೇಶಕ್ಕೆ ತೆರಳುತ್ತಾರೆ ಎಂದು ಟೀಕಿಸಿದರು.
ಬಡವರು, ವಂಚಿತರು, ಮಹಿಳೆಯರು, ಯುವಜನರಿಗಾಗಿ ವಿವಿಧ ಜನಪರ ಯೋಜನೆಗಳನ್ನು ಮೋದಿಜೀ ಜಾರಿಗೊಳಿಸಿದ್ದಾರೆ. 12 ಕೋಟಿ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. 4 ಕೋಟಿ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. 10 ಕೋಟಿ ಗ್ಯಾಸ್ ಸಿಲಿಂಡರ್ ಸಂಪರ್ಕ ಕೊಟ್ಟಿದ್ದಾರೆ. 5 ಲಕ್ಷದ ಆರೋಗ್ಯ ವಿಮೆ ಕಲ್ಪಿಸಿಕೊಟ್ಟಿದ್ದಾರೆ. ಹಲವು ದಶಕಗಳ ನಮ್ಮ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ. 370ನೇ ವಿಧಿ ರದ್ದು ಮಾಡಿದ್ದೇವೆ ಎಂದು ವಿವರಿಸಿದರು.
500 ವರ್ಷಗಳಿಂದ ಟೆಂಟ್ನಲ್ಲಿದ್ದ ರಾಮಲಲಾನಿಗೆ ಭವ್ಯ ರಾಮಮಂದಿರ ನಿರ್ಮಿಸಿದ್ದೇವೆ. ಕಾಂಗ್ರೆಸ್ ಈ ವಿಚಾರದಲ್ಲಿ ನಿರಂತರ ವಿಳಂಬ ಮಾಡಿತ್ತು. ತುಷ್ಟೀಕರಣ- ಮತಬ್ಯಾಂಕಿನ ಕಾರಣಕ್ಕಾಗಿ ರಾಮಮಂದಿರದ ಉದ್ಘಾಟನೆಗೆ ಕೂಡ ಕಾಂಗ್ರೆಸ್ ಮುಖಂಡರು ಹಾಜರಾಗಿಲ್ಲ ಎಂದು ಆಕ್ಷೇಪಿಸಿದರು. ಶರಣಾರ್ಥಿಗಳಾಗಿ ಪಾಕಿಸ್ತಾನ ಮತ್ತಿತರ ದೇಶಗಳಿಂದ ಬಂದ ಹಿಂದೂ, ಸಿಕ್ಖ, ಕ್ರಿಶ್ಚಿಯನ್ ಮತ್ತಿತರರಿಗೆ ಇಲ್ಲಿನ ಪೌರತ್ವ ಕೊಡಲಾಗಿದೆ ಎಂದು ತಿಳಿಸಿದರು.
ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಾವು ಚುನಾವಣಾ ಕಣದಲ್ಲಿದ್ದೇವೆ. ಕುಟುಂಬವಾದ, ಭ್ರಷ್ಟಾಚಾರದ ಇಂಡಿ ಒಕ್ಕೂಟ ಇನ್ನೊಂದೆಡೆ ಕಣದಲ್ಲಿದೆ. ಪ್ರವಾಸಕ್ಕೆ ಹೋದಾಗ ಎಲ್ಲ ರಾಜ್ಯಗಳಲ್ಲೂ ಮೋದಿ, ಮೋದಿ ಘೋಷಣೆ ಕೇಳುತ್ತಿದೆ ಎಂದು ತಿಳಿಸಿದರು.
ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, ಹೊಸ ಸಂಸತ್ ಭವನ, ಕ್ರಿಮಿನಲ್ ಕಾನೂನು ಬದಲಾವಣೆ, 5ನೇ ಆರ್ಥಿಕ ಶಕ್ತಿಯಾಗಿ ದೇಶವನ್ನು ಕೊಂಡೊಯ್ದ ಕುರಿತು ವಿವರ ನೀಡಿದರು. ಮೂಲಸೌಕರ್ಯಕ್ಕೆ ಆದ್ಯತೆ ಕೊಟ್ಟ ಕುರಿತು ವಿವರಿಸಿದರು. ಪ್ರಜಾಪ್ರಭುತ್ವಕ್ಕೆ ಏನೂ ಆಗಿಲ್ಲ. ಭ್ರಷ್ಟಾಚಾರಿಗಳನ್ನು ಬಚಾವ್ ಮಾಡಲು ಇಂಡಿ ಒಕ್ಕೂಟ ಮಾಡಿದ್ದಾರೆ. ಭ್ರಷ್ಟಾಚಾರಿಗಳನ್ನು ಜೈಲಿಗೆ ಕಳುಹಿಸಿದ್ದೇವೆ; ಮುಂದೆಯೂ ಕಳುಹಿಸಲಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಅಭಿವೃದ್ಧಿ ಕಡೆ ಕಾಂಗ್ರೆಸ್ ಗಮನ ಕೊಡುತ್ತಿಲ್ಲ. ಕುರ್ಚಿ ಉಳಿಸಿಕೊಳ್ಳಲು ಸಿಎಂ ಪ್ರಯತ್ನ ನಡೆದರೆ, ಕುರ್ಚಿ ಕಸಿದುಕೊಳ್ಳಲು ಇತರರು ಪ್ರಯತ್ನ ಮಾಡುತ್ತಿದ್ದಾರೆ. ಯುಪಿಎ 10 ವರ್ಷಗಳಲ್ಲಿ ಕರ್ನಾಟಕಕ್ಕೆ 1,42,000 ಕೋಟಿ ಕೊಟ್ಟರೆ, ನಾವು 10 ವರ್ಷಗಳಲ್ಲಿ 4,91,000 ಕೋಟಿ ಕೊಟ್ಟಿದ್ದೇವೆ ಎಂದು ತಿಳಿಸಿದರು.
ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶ ಇದು ಎಂದು ತಿಳಿಸಿದರು. 2047ರ ವೇಳೆಗೆ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವದ ಸಂದರ್ಭದಲ್ಲಿ ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶವಾಗಬೇಕೆಂದು ಸಂಕಲ್ಪದೊಂದಿಗೆ ಪ್ರಧಾನಿ ಮೋದಿಜೀ ಅವರು ಹಗಲು- ರಾತ್ರಿ ದುಡಿಯುತ್ತಿದ್ದಾರೆ ಎಂದು ವಿವರಿಸಿದರು. ಬಿಜೆಪಿ 10 ವರ್ಷಗಳಲ್ಲಿ ಭ್ರಷ್ಟಾಚಾರ ಆರೋಪ ಇಲ್ಲದ ಅಭಿವೃದ್ಧಿಪರ ಆಡಳಿತ ನೀಡಿದೆ ಎಂದು ತಿಳಿಸಿದರು.
ಆರ್ಥಿಕವಾಗಿ 12ನೇ ಸ್ಥಾನದಲ್ಲಿದ್ದ ಭಾರತ ಇದೀಗ ಜಗತ್ತಿನ 5ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. 20 ಲಕ್ಷ ಕೋಟಿಗೂ ಹೆಚ್ಚು ಅನುದಾನವನ್ನು ಮೂಲಸೌಕರ್ಯ ಹೆಚ್ಚಳಕ್ಕೆ ಮೋದಿಜೀ ಅವರ ಸರಕಾರ ನೀಡಿದೆ ಎಂದರು. ಯುಪಿಎ ಸರಕಾರವು ಭ್ರಷ್ಟಾಚಾರ- ಹಗರಣಗಳನ್ನೇ ದೇಶಕ್ಕೆ ಕೊಡುಗೆಯಾಗಿ ಕೊಟ್ಟಿತ್ತು ಎಂದು ಟೀಕಿಸಿದರು.
ಅಭಿವೃದ್ಧಿ ಶೂನ್ಯ ರಾಜ್ಯ ಸರಕಾರ ಕಾಂಗ್ರೆಸ್ ಪಕ್ಷದ್ದು ಎಂದು ಆರೋಪಿಸಿದ ಅವರು, ಮತದಾರರು ಕಾಂಗ್ರೆಸ್ ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಮಹಿಳಾ ಸುರಕ್ಷತೆ ಇಲ್ಲ. ಬಡವರು, ರೈತರಿಗೆ ಅನ್ಯಾಯವಾಗುತ್ತಿದೆ. ದೇಶದ ಸುರಕ್ಷತೆಗಾಗಿ, ಸರ್ವಾಂಗೀಣ ಅಭಿವೃದ್ಧಿಗಾಗಿ ಮೋದಿಜೀ ಮತ್ತೊಮ್ಮೆ, ಕೇಂದ್ರದಲ್ಲಿ ಬಿಜೆಪಿ ಸರಕಾರ ಬರಬೇಕೆಂದು ಜನರು ನಿರ್ಧಾರ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು. ಮೋದಿಜೀ ಅವರ ಜನಪರ ಯೋಜನೆಗಳನ್ನು ತಿಳಿಸಿ ಬೂತ್ ಸಶಕ್ತೀಕರಣಕ್ಕೆ ಆದ್ಯತೆ ಕೊಡಿ ಎಂದು ಮನವಿ ಮಾಡಿದರು. ಬಿಜೆಪಿ- ಜೆಡಿಎಸ್ ಒಗ್ಗೂಡಿ ಕಣಕ್ಕೆ ಇಳಿದುದನ್ನು ಗಮನಿಸಿದ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹತಾಶರಾಗಿದ್ದಾರೆ. ಎಲ್ಲ 28 ಕ್ಷೇತ್ರಗಳನ್ನು ಗೆಲ್ಲಲು ಪಣತೊಡೋಣ ಎಂದು ವಿನಂತಿಸಿದರು.
ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಹಣ, ಹೆಂಡದ ಮೇಲೆ ತುಘಲಕ್ ಸರಕಾರ ನಡೆಸುವವರು ಕಾಂಗ್ರೆಸ್ಸಿಗರು ಎಂದು ಆಕ್ಷೇಪಿಸಿದರು. ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರೆಂದು ನೀವು ಕಾಂಗ್ರೆಸ್ಸಿನವರನ್ನು ಪ್ರಶ್ನಿಸಬೇಕು ಎಂದು ಮನವಿ ಮಾಡಿದರು. 28ಕ್ಕೆ 28 ಲೋಕಸಭಾ ಕ್ಷೇತ್ರಗಳಲ್ಲಿ ನಾವು ಗೆಲ್ಲಲಿದ್ದೇವೆ ಎಂದು ವಿಶ್ವಾಸ ಸೂಚಿಸಿದರು.
ಬರಗಾಲ, ಅಭಿವೃದ್ಧಿ ರಹಿತ ಸ್ಥಿತಿಯಿಂದ ಕಾಂಗ್ರೆಸ್ ವಿರೋಧಿ ಅಲೆ ಇದೆ. ನಾವು ಪ್ರಯತ್ನಶೀಲರಾಗಿ ಎಲ್ಲ ಕ್ಷೇತ್ರಗಳನ್ನು ಗೆಲ್ಲಬೇಕಿದೆ ಎಂದು ಅವರು ತಿಳಿಸಿದರು. ಮೋದಿಜೀ ಅವರು ಮತ್ತೊಮ್ಮೆ ರಾಜ್ಯಕ್ಕೆ ಪ್ರವಾಸ ಬರಲಿದ್ದಾರೆ ಎಂದರು.
ವಿಪಕ್ಷ ನಾಯಕ ಆರ್.ಅಶೋಕ ಅವರು ಮಾತನಾಡಿ, ಮೋದಿಯವರೇ ನಮ್ಮ ಅಭ್ಯರ್ಥಿ ಎಂದು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಮನವಿ ಮಾಡಿದರು. ಭ್ರಷ್ಟ ಕಾಂಗ್ರೆಸ್, ಭ್ರಷ್ಟ ಸಿಎಂ, ಡಿಸಿಎಂ ಅವರನ್ನು ಮಟ್ಟ ಹಾಕಲು ಬಿಜೆಪಿ- ಜೆಡಿಎಸ್ ಪಕ್ಷಗಳ ಎಲ್ಲ 28 ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸಬೇಕಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.