ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದು 10 ವರ್ಷಗಳು ಕಳೆದರೂ ನರೇಂದ್ರ ಮೋದಿಜೀ ಅವರ ಜನಪ್ರಿಯತೆ ಇನ್ನೂ ಉತ್ತುಂಗಕ್ಕೆ ಏರಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.
ಹೋಟೆಲ್ “ಜಿ.ಎಂ. ರಿಜಾಯ್ಸ್” ನಲ್ಲಿ ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದ ಉದ್ಘಾಟನೆ ಸಂದರ್ಭದಲ್ಲಿ ಅವರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ಮತ್ತೊಮ್ಮೆ ಮೋದಿ ಸರಕಾರ ಎಂಬುದು ಕೇವಲ ಬಿಜೆಪಿ ಕಾರ್ಯಕರ್ತರ ಆಶಯವಲ್ಲ; ಇದು ರಾಜ್ಯದ ಮತ್ತು ದೇಶದ ಜವಾಬ್ದಾರಿಯುತ ನಾಗರಿಕ ಮತದಾರರ ನಿರ್ಧಾರ. ನರೇಂದ್ರ ಮೋದಿಯವರ ಕಳೆದ 10 ವರ್ಷಗಳ ಕಾರ್ಯವೈಖರಿ, ಆಡಳಿತ ವೈಖರಿ, ಕೇಂದ್ರದ ಮೋದಿಜೀ ನೇತೃತ್ವದ ಜನಪರ ಯೋಜನೆಗಳ ಪರಿಣಾಮವಾಗಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದು 10 ವರ್ಷಗಳು ಕಳೆದರೂ ನರೇಂದ್ರ ಮೋದಿಜೀ ಅವರ ಜನಪ್ರಿಯತೆ ಇನ್ನೂ ಉತ್ತುಂಗಕ್ಕೆ ಏರಿದೆ ಎಂದು ವಿಶ್ಲೇಷಿಸಿದರು.
ಇದು ಮೊತ್ತಮೊದಲ ಬಾರಿಗೆ ಹೀಗಾಗಿದೆ. ದೇಶದ ಜನತೆ ಮೋದಿಯವರ ನಾಯಕತ್ವವನ್ನು ಮೆಚ್ಚಿಕೊಂಡಿದ್ದಾರೆ. ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಮೋದಿಯವರ ಮತ್ತು ಬಿಜೆಪಿ ಕೇಂದ್ರ ಸರಕಾರದ ಯೋಜನೆಗಳು ಮನೆಮನೆಗೆ ತಲುಪಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ವಿವರಿಸಿದರು. ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವ ಸಂಕಲ್ಪದೊಂದಿಗೆ ಕೇಂದ್ರದ ಮೋದಿಯವರ ನೇತೃತ್ವದ ಸರಕಾರ ಜನಪರ ಯೋಜನೆಗಳನ್ನು ನೀಡಿದೆ. ಹಾಗಾಗಿ ಮೋದಿ ಮತ್ತೊಮ್ಮೆ ಎಂಬ ಘೋಷಣೆ ದೇಶಾದ್ಯಂತ ಕೇಳಿಸುತ್ತಿದೆ ಎಂದು ತಿಳಿಸಿದರು.
ಕರ್ನಾಟಕವು ದಕ್ಷಿಣ ಭಾರತದ ಬಿಜೆಪಿಯ ಹೆಬ್ಬಾಗಿಲು ಎಂಬುದನ್ನು ನಾವು ಮತ್ತೆ ಸಾಬೀತು ಮಾಡಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ನಿಷ್ಕ್ರಿಯವಾಗಿದೆ. ಅದು ಬರಗಾಲ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಗಳು ಎಚ್ಚತ್ತುಕೊಳ್ಳದೆ ಇರುವುದು ನಿಜಕ್ಕೂ ದುರಂತವೇ ಸರಿ ಎಂದು ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.
ಇಲ್ಲಿನ ಕಾಂಗ್ರೆಸ್ ಸರಕಾರ ಅಭಿವೃದ್ಧಿ ಶೂನ್ಯ. ಅಲ್ಪಸಂಖ್ಯಾತರ ತುಷ್ಟೀಕರಣವನ್ನು ಮಾಡುತ್ತಲೇ ಬಂದಿದೆ. ಇದಕ್ಕೆ ತಕ್ಕ ಉತ್ತರವನ್ನು ಕೊಡುವ ಸಂದರ್ಭ, ಕಾಲ ಕೂಡಿ ಬಂದಿದೆ ಎಂಬ ಭಾವನೆ ಪ್ರತಿಯೊಬ್ಬರದು. ಹಿಂದೆ ಬಿಜೆಪಿ ಸರಕಾರ ಅಸ್ತಿತ್ವದಲ್ಲಿ ಇದ್ದಾಗ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ನೀಡಿದ ಕೊಡುಗೆಗಳು, ಕಾರ್ಯಕ್ರಮಗಳು, ಮಾನ್ಯ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ನೀಡಿದ ಜನಪರ ಯೋಜನೆಗಳನ್ನು ರಾಜ್ಯದ ಜನತೆ ಮರೆತಿಲ್ಲ. ಒಂದು ಕಡೆ ಕೇಂದ್ರದಲ್ಲಿ ನರೇಂದ್ರ ಮೋದಿಜೀ ಅವರು, ಅಯೋಧ್ಯೆಯ ಭವ್ಯ ರಾಮಮಂದಿರ ನಿರ್ಮಿಸಿದ್ದಾರೆ. ಇದು ದೀರ್ಘ ಕಾಲದ ಹೋರಾಟ ಮತ್ತು ಪ್ರತಿಯೊಬ್ಬ ಭಾರತೀಯರ ಕನಸು ನನಸಾದ ಕಾಲ ಎಂದು ವಿಶ್ಲೇಷಣೆ ಮಾಡಿದರು.
370ನೇ ವಿಧಿ ರದ್ದತಿ, ತ್ರಿವಳಿ ತಲಾಖ್ ರದ್ದು ಸೇರಿ ಅನೇಕ ಕಾರ್ಯಗಳು ನಡೆದಿವೆ. ಮೂಲಭೂತ ಸೌಕರ್ಯ ನೀಡಲು ಕೇಂದ್ರ ಸರಕಾರ ಶ್ರಮಿಸುತ್ತಿದೆ. ಇದೆಲ್ಲದರ ಪರಿಣಾಮವಾಗಿ ದೇಶ ಮಾತ್ರವಲ್ಲದೆ ಕರ್ನಾಟಕ ರಾಜ್ಯದಲ್ಲಿ ಮತ್ತೊಮ್ಮೆ ಮೋದಿ ಸರಕಾರ ಎಂಬ ಅಭಿಪ್ರಾಯ ಸರ್ವಸಾಮಾನ್ಯವಾಗಿದೆ. ಎಲ್ಲ ಕಡೆಗಳಲ್ಲಿ ಅದನ್ನು ಕೇಳುವಂತಾಗಿದೆ ಎಂದು ತಿಳಿಸಿದರು.
ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗದಷ್ಟೇ ಪ್ರಾಮುಖ್ಯತೆಯನ್ನು ಅದು ಪಡೆದಿದೆ. ಮಾಧ್ಯಮ ರಂಗ ಪರಿವರ್ತನೆ ಆಗಿ ಪ್ರಜಾಪ್ರಭುತ್ವಕ್ಕೆ ದೊಡ್ಡ ಶಕ್ತಿ ಕೊಟ್ಟಿದೆ. ಚುನಾವಣೆ ಬಂದಾಗ ಪತ್ರಿಕಾ ರಂಗಕ್ಕೆ ಇನ್ನೂ ಹೆಚ್ಚು ಪ್ರಾಮುಖ್ಯತೆ ಸಹಜವಾಗಿಯೇ ಇರುತ್ತದೆ ಎಂದು ನುಡಿದರು.
ಇಂಥ ಸಂದರ್ಭದಲ್ಲಿ ಬಿಜೆಪಿ ವತಿಯಿಂದ ಮೀಡಿಯ ಸೆಂಟರ್ ಉದ್ಘಾಟನೆ ಮಾಡಿದ್ದೇವೆ. ಮಾಧ್ಯಮಗಳು ನಿರಂತರವಾಗಿ ಸುದ್ದಿ ಪ್ರಸಾರ ಮಾಡಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಈ ಮಾಧ್ಯಮ ಕೇಂದ್ರದಲ್ಲಿ ವೈಫೈ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆ ಇರಲಿದೆ. ನಮ್ಮ ರಾಷ್ಟ್ರೀಯ ನಾಯಕರು ಯಾರೇ ಬಂದರೂ ಈ ಮಾಧ್ಯಮ ಕೇಂದ್ರಕ್ಕೆ ಭೇಟಿ ಕೊಡಲಿದ್ದಾರೆ. ಪತ್ರಿಕಾಗೋಷ್ಠಿಗಳನ್ನೂ ಇಲ್ಲಿಯೇ ಅಧಿಕೃತವಾಗಿ ನಡೆಸಲಾಗುವುದು ಎಂದು ವಿವರಿಸಿದರು.
ಚುನಾವಣಾ ಫಲಿತಾಂಶ ಪ್ರಕಟವಾಗುವವರೆಗೆ ಈ ಕೇಂದ್ರದಲ್ಲಿ ನಿರಂತರವಾಗಿ ಚಟುವಟಿಕೆಗಳು ನಡೆಯಲಿವೆ. ಈ ವ್ಯವಸ್ಥೆಯ ಸದುಪಯೋಗವನ್ನು ಪತ್ರಿಕಾ ಹಾಗೂ ಮಾಧ್ಯಮ ಸ್ನೇಹಿತರು ಪಡೆಯಬೇಕು ಎಂದು ಅವರು ಮನವಿ ಮಾಡಿದರು.
ಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ‘ನದಿಗಳಲ್ಲಿ ನೀರಿಲ್ಲ; ಕುಡಿಯುವ ನೀರಿನ ಹಾಹಾಕಾರ ಇದೆ’ ಎಂದು ತಿಳಿಸಿದ್ದನ್ನು ಗಮನಿಸಿದ್ದೇನೆ. ಈ ಹಿಂದೆ ಯಾವತ್ತು ಕಾವೇರಿ ನೀರನ್ನು ತಮಿಳುನಾಡಿಗೆ ಯಥೇಚ್ಛವಾಗಿ ಹರಿಸುತ್ತಿದ್ದರೋ ಆಗಲೇ ಕಾಂಗ್ರೆಸ್ ಸರಕಾರ- ಮುಖ್ಯಮಂತ್ರಿಗಳಿಗೆ ಜ್ಞಾನೋದಯ ಆಗಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇಂದು ನೀರಿಗಾಗಿ ಹಾಹಾಕಾರ ಇರುತ್ತಿರಲಿಲ್ಲ ಎಂದು ಅವರು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.