ನವದೆಹಲಿ: ಉದ್ಯೋಗಸ್ಥ ಮಹಿಳೆಯರು ಹಲವಾರು ಸವಾಲುಗಳನ್ನು ಎದುರಿಸುತ್ತಾರೆ. ಈ ಸವಾಲುಗಳು ಸಾಮಾಜಿಕವಾಗಿರಬಹುದು, ಕೆಲವೊಮ್ಮೆ ಅವು ತಾರತಮ್ಯದ ಕಾನೂನುಗಳು ತಂದೊಡ್ಡುವ ಸವಾಲುಗಳು ಕೂಡ ಆಗಿರಬಹುದು. ಅಂತಹುದೇ ಒಂದು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪೋಂದನ್ನು ನೀಡಿದೆ. ಮಹಿಳಾ ಉದ್ಯೋಗಿಗಳ ಮದುವೆ ಮತ್ತು ಅವರ ಮನೆಯ ಜವಾಬ್ದಾರಿಗಳನ್ನು ಅಸಮರ್ಥತತೆ ಎಂದು ಪರಿಗಣಿಸುವ ಯಾವುದೇ ಕಾನೂನು ಅಸಾಂವಿಧಾನಿಕ ಎಂದು ಹೇಳಿದೆ.
1988 ರಲ್ಲಿ ವಿವಾಹದ ನಂತರ ಕೆಲಸದಿಂದ ವಜಾಗೊಂಡ ಮಿಲಿಟರಿ ನರ್ಸಿಂಗ್ ಸೇವೆಯ ಮಾಜಿ ಖಾಯಂ ಆಯೋಗದ ಅಧಿಕಾರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತ ಈ ಮಹತ್ವದ ತೀರ್ಪನ್ನು ಸುಪ್ರೀಂ ನೀಡಿದೆ. ಅಲ್ಲದೇ ಆಕೆಗೆ 60 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ‘ಇಂತಹ ಪುರುಷ ಪ್ರಧಾನ ನಿಯಮಗಳು ಸಮಾನತೆಯ ಹಕ್ಕುಗಳನ್ನು ಉಲ್ಲಂಘಿಸುತ್ತದೆ’ ಎಂದು ಹೇಳಿದೆ. ಸುಪ್ರೀಂನ ಈ ಮಹತ್ವದ ತೀರ್ಪಿನೊಂದಿಗೆ ಮೂರು ದಶಕಗಳ ಕಾಲದ ಮಹಿಳಾ ಅಧಿಕಾರಿಯ ಕಾನೂನು ಹೋರಾಟ ಅಂತ್ಯಗೊಂಡಿದೆ.
ಮಾಜಿ ಲೆಫ್ಟಿನೆಂಟ್ ಸೆಲಿನಾ ಜಾನ್ ಅವರು ಮಿಲಿಟರಿ ನರ್ಸಿಂಗ್ ಸೇವೆಯಲ್ಲಿ ಖಾಯಂ ಆಯೋಗದ ಅಧಿಕಾರಿಯಾಗಿದ್ದರು. ಅವರು 1982 ರಲ್ಲಿ ನಿಯಮಗಳ ಅಡಿಯಲ್ಲಿ ಮಿಲಿಟರಿ ನರ್ಸಿಂಗ್ ಸೇವೆಗೆ ಸೇರಿದರು, ದೆಹಲಿಯ ಆರ್ಮಿ ಆಸ್ಪತ್ರೆಯಲ್ಲಿ ಟ್ರೈನಿಯಾಗಿ ಸೇವೆ ಸಲ್ಲಿಸಿದರು. ನಂತರ ಮದುವೆಯಾದ ಕಾರಣ ಅವರನ್ನು ವಜಾಗೊಳಿಸಲಾಗಿತ್ತು.
ಅವರ ವಜಾವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಪ್ರತಿಪಾದಿಸಿದೆ. ಮದುವೆಯಾಗುವಂತಿಲ್ಲ ಎಂಬ ನಿಯಮ ಮಹಿಳಾ ನರ್ಸಿಂಗ್ ಅಧಿಕಾರಿಗಳಿಗೆ ಮಾತ್ರ ಅನ್ವಯಿಸುತ್ತದೆ. ತನ್ನ ಅಂತಿಮ ತೀರ್ಪಿನಲ್ಲಿ, ಮಿಲಿಟರಿ ನರ್ಸಿಂಗ್ ಸೇವೆಯಿಂದ ವಜಾಗೊಳಿಸಿರುವುದು ತಪ್ಪು ಮತ್ತು ಕಾನೂನುಬಾಹಿರ ಎಂದು ನ್ಯಾಯಾಲಯ ಹೇಳಿದೆ.
ಮಹಿಳೆಯ ಮದುವೆಯ ಕಾರಣದಿಂದ ಉದ್ಯೋಗವನ್ನು ಕೊನೆಗೊಳಿಸುವುದು ಲಿಂಗ ತಾರತಮ್ಯ ಮತ್ತು ಅಸಮಾನತೆಯನ್ನು ರೂಪಿಸುವುದರಿಂದ ಅಂತಹ ನಿಯಮವು ಅನಿಯಂತ್ರಿತವಾಗಿದೆ ಎಂದು ನ್ಯಾಯಾಲಯ ಟೀಕಿಸಿದೆ. ಲಿಂಗ ಪಕ್ಷಪಾತವನ್ನು ಆಧರಿಸಿದ ನಿಯಮಗಳು ಸಾಂವಿಧಾನಿಕವಾಗಿ ಸ್ವೀಕಾರಾರ್ಹವಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.