ಮಂಗಳೂರು: ನಾಟಕಗಳು ವ್ಯಕ್ತಿ ಮತ್ತು ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ ಎಂದು ಸಂಕೇಶ್ವರ ನಿಡಸೋಸಿ ದುರುದುಂಡೇಶ್ವರ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ನುಡಿದರು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ಶಶಿರಾಜ್ ರಾವ್ ಕಾವೂರು ವಿರಚಿತ ಛತ್ರಪತಿ ಶಿವಾಜಿ ಮತ್ತು ಪರಶುರಾಮ ನಾಟಕ ಕೃತಿಗಳ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀಗಳು ಆಶೀರ್ವಚನ ನೀಡಿದರು.
ಮಂಗಳೂರು ನಗರವು ಎರಡು ದಶಕಗಳ ಕಾಲ ತನಗೆ ಎಲ್ಲಾ ತರಹದ ಪ್ರೀತಿ, ಸಹಕಾರವನ್ನು ನೀಡಿದೆ ಇದಕ್ಕೆ ತಾನು ಚಿರಋಣಿಯಾಗಿದ್ದೇನೆ ಎಂದರು. ಸತ್ಯಹರಿಶ್ಚಂದ್ರ ನಾಟಕವು ಮಹಾತ್ಮ ಗಾಂಧಿಯನ್ನು ಪ್ರಭಾವಿಸಿತ್ತು ಮಾತ್ರವಲ್ಲ, ನಂತರ ಅವರು ಸತ್ಯದ ಪಥದಲ್ಲಿ ಮುಂದುವರಿಯಲೂ ಈ ನಾಟಕವು ಪ್ರೇರಣೆಯಾಗಿತ್ತು ಎಂದು ಹೇಳಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ನಾ.ದಾಮೋದರ ಶೆಟ್ಟಿಯವರು ಛತ್ರಪತಿ ಶಿವಾಜಿ ನಾಟಕದಲ್ಲಿ ಬಂದಿರುವ ಹಲವು ಸ್ವಾರಸ್ಯಕರ ಅಂಶಗಳನ್ನು ಪ್ರಸ್ತುತಪಡಿಸಿದರು. ಯುವ ರಂಗಪ್ರೇಮಿ ಮತ್ತು ಕೃತಿಕಾರರಾಗಿರುವ ಶಶಿರಾಜ ರಾವ್ ಕಾವೂರು ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಹಿರಿಯ ಸಾಹಿತಿ ಡಾ.ಬಿ.ಎ ವಿವೇಕ ರೈ ಛತ್ರಪತಿ ಶಿವಾಜಿʼ ಶಶಿರಾಜ್ ರಾವ್ ಅವರ ಮೊದಲ ಚಾರಿತ್ರಿಕ ನಾಟಕವಾಗಿದ್ದು ಚಿಕ್ಕ ಮತ್ತು ಚೊಕ್ಕದಾಗಿದೆ ಎಂದರು. ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳಿಗಿಂತ ಚಾರಿತ್ರಿಕ ನಾಟಕಗಳ ರಚನೆ ಸವಾಲಿನದು ಮತ್ತು ಕಷ್ಟಕರವಾದುದು. ಪ್ರಸ್ತುತ ನಾಟಕದಲ್ಲಿ ಶಿವಾಜಿಯ ಮಾನವೀಯ ಗುಣಗಳ ಅನಾವರಣವಿದೆ. ಶಿವಾಜಿಯ ವ್ಯಕ್ತಿತ್ವದ ಉದಾತ್ತೀಕರಣದ ಆಶಯವಿದೆ ಎಂದರು. ಈ ನಾಟಕವು ರಂಗಭೂಮಿಗೆ ಚೆನ್ನಾಗಿ ಅಳವಡಿಕೆಯಾಗಿ ಪ್ರೇಕ್ಷಕರನ್ನು ತಟ್ಟುವ ಎಲ್ಲ ಅಂಶಗಳನ್ನು ಒಳಗೊಂಡಿದೆ ಎಂದರು.
ಪರಶುರಾಮ ನಾಟಕ ಕೃತಿಯ ಬಗ್ಗೆ ರಂಗಕರ್ಮಿ ಜೀವನರಾಂ ಸುಳ್ಯ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೋಹನ್ ಆಳ್ವ ಬಿಡುಗಡೆ ಕಂಡ ಎರಡು ನಾಟಕ ಕೃತಿಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ದಕ್ಷಿಣ ಕನ್ನಡದಲ್ಲಿ ಬಹಳ ಮಂದಿ ರಂಗಭೂಮಿ ಕಲಾವಿದರು ಇದ್ದಾರೆ, ಇವರೆಲ್ಲರನ್ನೂ ಒಟ್ಟುಗೂಡಿಸುವ ಪ್ರಯತ್ನ ಮುಂದಿನ ದಿನಗಳಲ್ಲಿ ಆಗಲಿದ್ದು, ಪಿಲಿಕುಳ ಸಮೀಪದಲ್ಲಿ ರಂಗಭೂಮಿ ನಾಟಕಗಳ ಪ್ರದರ್ಶನಕ್ಕೆ ಸಹಕಾರಿಯಾಗಬಲ್ಲ ನೂತನ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ ಎಂದರು. ಎಲ್ಲಾ ಕಲಾವಿದರನ್ನು ಒಟ್ಟುಗೂಡಿಸುವ ಸಣ್ಣ ಪ್ರಯತ್ನ ಶೀಘ್ರದಲ್ಲಿ ಸಕಾರಗೊಳ್ಳಲಿದೆ ಎಂದರು.
ಕಾರ್ಯಕ್ರಮದಲ್ಲಿ ಕೃತಿಕಾರ ಶಶಿರಾಜ್ ರಾವ್ ಕಾವೂರು, ರಂಗಸಂಗಾತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಅಲೋಶಿಯಸ್ ಸಂಸ್ಥೆಯ ರಿಜಿಸ್ಟ್ರಾರ್ ಅಲ್ವಿನ್ ಡೇಸಾ ಉಪಸ್ಥಿತರಿದ್ದರು, ಕುದ್ರೋಳಿ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಿಂದ ಏಕಾದಶಾನನ ನಾಟಕ ಪ್ರದರ್ಶನಗೊಂಡಿತು. ಕುದ್ರೋಳಿ ಗಣೇಶ್ ಅವರಿಂದ ಮೈಂಡ್ ಮ್ಯಾಜಿಕ್ ಪ್ರದರ್ಶನವಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.