ಬೆಂಗಳೂರು: ಯಾರ ಮುಂದೆಯೂ ಕೈ ಚಾಚದೇ ಸ್ವಾವಲಂಬಿಗಳಾಗಿ ಬದುಕಬೇಕು. ಉದ್ಯೋಗ ಹುಡುಕುವ ಬದಲಾಗಿ ಉದ್ಯೋಗ ಸೃಷ್ಟಿ ಮಾಡಬೇಕು ಎಂದು ಸ್ವದೇಶಿ ಜಾಗರಣ್ ಮಂಚ್ ನ ಕ್ಷೇತ್ರೀಯ ಸಂಘಟಕ ಜಗದೀಶ್ ಹೇಳಿದರು.
ಸ್ವದೇಶಿ ಜಾಗರಣ ಮಂಚ್ ವತಿಯಿಂದ ಬೆಂಗಳೂರಿನ ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ (ಶಾಲಿನಿ ಗ್ರೌಂಡ್) ಬೃಹತ್ ಸ್ವದೇಶಿ ಮೇಳದಲ್ಲಿ ಅವರು ‘ನಿರುದ್ಯೋಗ ಸಮಸ್ಯೆ ಮತ್ತು ಪರಿಹಾರದ ಮಾರ್ಗಗಳು’ ಕುರಿತು ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದರು.
ಸ್ವಾವಲಂಬಿ ಭಾರತ ಅಭಿಯಾನದ ಮೂಲಕ ನಾವು ಭಾರತದ ಭವಿಷ್ಯ ಭದ್ರವಾಗಿಸಲು ಹೆಜ್ಜೆಯಿಡುತ್ತಿದ್ದೇವೆ. ಭಾರತ ತರುಣರ ದೇಶವಾಗಿದ್ದು ಅವರ ಸಾಮರ್ಥ್ಯದಿಂದ ಸದೃಢ ದೇಶ ಕಟ್ಟಲು ಸಾಧ್ಯ. ಆದರೆ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ವಿವರಿಸಿದರು. ಯಾರ ಮುಂದೆಯೂ ಕೈ ಚಾಚದೇ ಸ್ವಾವಲಂಬಿಗಳಾಗಿ ಬದುಕಬೇಕು. ಉದ್ಯೋಗ ಹುಡುಕುವ ಬದಲು, ಸೃಷ್ಟಿಸಬೇಕು ಎಂದು ಸಲಹೆ ನೀಡಿದರು.
ನಮ್ಮ ದೇಶದಲ್ಲಿ ಕೃಷಿ, ವ್ಯಾಪಾರ, ಗುಡಿ ಕೈಗಾರಿಕೆಗಳು ಉದ್ಯೋಗ ಸೃಷ್ಟಿ ಮಾಡುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತವೆ. ಕಾಲೇಜು ಮುಗಿದ ನಂತರ ಉಳಿದ ಸಮಯದಲ್ಲಿ ಅರೆಕಾಲಿಕ ವೃತ್ತಿ ಮಾಡುವ ಮೂಲಕ ಯುವಜನರು ಸಂಗೀತ, ಸಾಹಿತ್ಯ, ಯೋಗ, ಕೃಷಿ ಇತ್ಯಾದಿಗಳನ್ನು ಕಲಿಯಬೇಕು. ಕಾಲೇಜಿನ ಮತ್ತು ದೈನಂದಿನ ವೆಚ್ಚಗಳಿಗಾಗಿ ಪೋಷಕರನ್ನು ಅವಲಂಬಿಸದೇ ನೀವೇ ಸಂಪಾದನೆ ಮಾಡಲು ಆರಂಭಿಸಬೇಕು ಎಂದರು.
ನಿರುದ್ಯೋಗಿಗಳಲ್ಲಿ ಕೆಲವರು ಸಮಾಜಘಾತುಕರಾಗಿ ದೇಶಕ್ಕೆ ಆತಂಕ ತಂದೊಡ್ಡುತ್ತಾರೆ. ಇದು ಇಂದು ಬಹಳ ಗಂಭೀರವಾದ ಸಮಸ್ಯೆಯಾಗಿದೆ. ಇದರ ಪರಿಹಾರವೆಂದರೆ ಸ್ವಯಂ ಉದ್ಯೋಗ ಮಾಡುವುದು. ಇದಕ್ಕಾಗಿ ನಮ್ಮ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಸಂಪನ್ಮೂಲ ವ್ಯಕ್ತಿಗಳ ಮೂಲಕ ಮಾರ್ಗದರ್ಶನ ನೀಡುವುದು, ಸಾಲಗಳ ಮೂಲಕ ಆರ್ಥಿಕ ಸಹಾಯ ನೀಡುವುದಲ್ಲದೇ ಉದ್ಯಮಗಳು ಸ್ವಾವಲಂಬನೆಯ ಹಂತ ತಲುಪುವವರೆಗೂ ಬೆಂಬಲ ನೀಡುತ್ತವೆ. ಆದ್ದರಿಂದ ಸಿಗುತ್ತಿರುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ನ್ಯಾಯಯುತವಾದ ರೀತಿಯಲ್ಲಿ ದುಡಿದರೆ ದೇಶವನ್ನು ಕೆಲವೇ ವರ್ಷಗಳಲ್ಲಿ ಸಂಪದ್ಭರಿತವಾಗಿಸಲು ಸಾಧ್ಯ ಎಂದರು.
ಪ್ಯಾಕೇಜಿಂಗ್ ಉದ್ಯಮ ಕಟ್ಟಿ ಬೆಳೆಸಿರುವ ಸ್ವ-ಉದ್ಯಮಿ ಉಷಾ ಅವರು ಮಾತನಾಡಿ ಸ್ವದೇಶಿ ಮೇಳಗಳನ್ನು ಆಯೋಜಿಸುವ ಉದ್ದೇಶವೇ ಸ್ವದೇಶಿ ಉತ್ಪನ್ನಗಳಿಗೆ ಜಾಹೀರಾತು ಮಾಡುವುದು ಮತ್ತು ಮಾರುಕಟ್ಟೆ ಕಲ್ಪಿಸುವುದು. ಆದ್ದರಿಂದ ಕುಟುಂಬದ ಸಮೇತರಾಗಿ ಇಂತಹ ಮೇಳಗಳಿಗೆ ಬಂದು ದೇಶೀಯ ಉದ್ಯಮಿಗಳಿಗೆ ಬೆಂಬಲ ನೀಡಬೇಕು. ವಿದ್ಯಾರ್ಜನೆಯ ಸಮಯದಲ್ಲೇ ಇನ್ನೊಂದು ಕೆಲಸ ಮಾಡುವ ಬಗ್ಗೆ ಯೋಚನೆ ಮಾಡಿ ಆ ದಿಶೆಯಲ್ಲಿ ಮುಂದಡಿಯಿಟ್ಟರೆ ಮಾರ್ಗದರ್ಶನಕ್ಕೆಂದು ಸಾಕಷ್ಟು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿವೆ ಎಂದು ತಿಳಿಸಿದರು.
ಯಾವುದೇ ಸ್ವತ್ತುಗಳನ್ನು ಅಡಮಾನ ಕೇಳದೆ ಯೋಜನಾ ವರದಿಯ ಆಧಾರದ ಮೇಲೆಯೇ ಕೋಟಿಯವರೆಗೂ ಸಾಲ ನೀಡುವಂಥ ಯೋಜನೆಗಳಿವೆ. ಇದಲ್ಲದೇ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಬೆಳೆಸಿ, ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಅನೇಕ ಸಂಸ್ಥೆಗಳು ಮುಂಚೂಣಿಯಲ್ಲಿವೆ. ಇಲ್ಲಿ ತಳಮಟ್ಟದಿಂದ ತರಬೇತಿ ನೀಡುವುದರಿಂದ ಹಿಡಿದು ಉದ್ಯಮ ಸ್ಥಾಪನೆ ಮಾಡುವವರೆಗೂ ಮಾರ್ಗದರ್ಶನ ನೀಡಿ, ಸ್ಥಾಪನೆಯಾದ ನಂತರವೂ ಅವಶ್ಯಕತೆಗೆ ತಕ್ಕಂತೆ ನಿರಂತರ ಬೆಂಬಲವನ್ನು ನೀಡಲಾಗುತ್ತದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.