ಬೆಂಗಳೂರು: ರಾಜ್ಯ ಸರಕಾರವು ಹುಕ್ಕಾ ಬಾರ್ ನಿಷೇಧಿಸಿದ ಕ್ರಮವನ್ನು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರೂ ಆಗಿರುವ ಶಾಸಕ ಸಿ.ಕೆ. ರಾಮಮೂರ್ತಿ ಅವರು ಸ್ವಾಗತಿಸಿದ್ದಾರೆ. ಸರಕಾರವು ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಹುಕ್ಕಾ ಬಾರ್ಗಳಿಂದ ರಾಜ್ಯದ ಯುವಜನತೆ ದುಶ್ಚಟಕ್ಕೆ ಬಲಿ ಆಗುತ್ತಿದ್ದರು. ಪೋಷಕರು ಕೂಡ ತಮ್ಮ ಮಕ್ಕಳ ಭವಿಷ್ಯದ ಕುರಿತು ಆತಂಕ ಪಡುವಂತಾಗಿತ್ತು. ಇದೇ ವಿಚಾರವನ್ನು ನಾನು ಈ ಹಿಂದೆ ಸದನದಲ್ಲೂ ಕೂಡ ಪ್ರಸ್ತಾಪಿಸಿದ್ದೆ. ಹುಕ್ಕಾ ಬಾರ್ ನಿಷೇಧಕ್ಕೆ ಕೋರಿಕೆ ಸಲ್ಲಿಸಿದ್ದೆ; ಇದರ ಕುರಿತು ಸದನ ಸಮಿತಿಗೆ ಶಿಫಾರಸು ಮಾಡಲಾಗಿತ್ತು. ಇದೀಗ ಸರಕಾರವು ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ, ತಂಬಾಕು, ನಿಕೋಟಿನ್ ಸಹಿತ ಮತ್ತು ರಹಿತ ಎಲ್ಲ ಮಾದರಿಯ ಹುಕ್ಕಾ ನಿಷೇಧಿಸಿ ಆದೇಶಿಸಿರುವುದು ಸ್ವಾಗತಾರ್ಹ ಕ್ರಮ ಎಂದು ಅವರು ತಿಳಿಸಿದ್ದಾರೆ.
ಯುವಜನತೆಯ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯ ಸರಕಾರವು ತನ್ನ ನಿಷೇಧ ಕುರಿತ ಆದೇಶವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ರಾಜಕೀಯಪ್ರೇರಿತ ಒತ್ತಡಕ್ಕೆ ಮಣಿಯದೆ ಕೂಡಲೇ ಹುಕ್ಕಾ ಬಾರ್ಗಳನ್ನು ಬಂದ್ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ತಕ್ಷಣದಿಂದಲೇ ಹುಕ್ಕಾ ಬಾರ್ಗಳನ್ನು ಕಡ್ಡಾಯವಾಗಿ ಮತ್ತು ಖಾಯಂ ಆಗಿ ಬಂದ್ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.