ಬೆಂಗಳೂರು: ಹಿಂದೂ ಎಂಎಲ್ಎಗಳು ಬೇಕು. ಎಂಪಿಗಳೂ ಬೇಕು. ಆದರೆ, ನಮ್ಮ ಊರಿನಲ್ಲಿ, ದೇವಸ್ಥಾನಗಳ ಮೇಲೆ ಹಿಂದೂ ಧ್ವಜ, ಕೇಸರಿ ಧ್ವಜ, ಭಗವಾಧ್ವಜ ಹಾರಿಸುವುದು ಯಾಕೆ ಬೇಡ? ಇದು ಯಾವ ಸೀಮೆಯ ಸೆಕ್ಯುಲರಿಸಂ ಎಂಬ ಹಿನ್ನೆಲೆಯಲ್ಲಿ 12 ಪ್ರಶ್ನೆಗಳನ್ನು ನಾವು ಸಿದ್ದರಾಮಯ್ಯರ ಸರಕಾರಕ್ಕೆ ಕೇಳುತ್ತಿರುವುದಾಗಿ ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮೊನ್ನೆ ತಾನೇ ಚಿತ್ರದುರ್ಗದಲ್ಲಿ ಶೋಷಿತರ ಸಮಾವೇಶ ಮಾಡಿದ್ದೀರಿ. ಶೋಷಿತರ ಎಲ್ಲ ಮತ ಪಡೆದ ನೀವು ಅವರಿಗೆ ಏನು ಕೊಟ್ಟಿದ್ದೀರಿ ಎಂದು ಕೇಳಿದರು. ನಿಮ್ಮ ಈ ಸಮಾವೇಶ ಕೇವಲ ‘ಚಿಕನ್ ಬಿರಿಯಾನಿಗೆ’ ಸೀಮಿತವಾಗಲಿಲ್ಲವೇ? ಎಂದು ಪ್ರಶ್ನೆಯನ್ನು ಮುಂದಿಟ್ಟರು. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಹಿಂದವನ್ನು ಕೈಬಿಟ್ಟು ಅಲ್ಪಸಂಖ್ಯಾತರನ್ನು ಮಾತ್ರ (ಅ) ಅಪ್ಪಿಕೊಂಡಿದ್ದಿರಿ ಎಂದು ಟೀಕಿಸಿದರು.
ಅಂಬೇಡ್ಕರ್ ನಿಗಮ, ಬಂಜಾರ ನಿಗಮ, ಆದಿಜಾಂಬವ ನಿಗಮ, ಅಂಬಿಗರ ಚೌಡಯ್ಯ ನಿಗಮ, ಕಾಡುಗೊಲ್ಲ ಅಭಿವೃದ್ಧಿ ನಿಗಮ ಇತ್ಯಾದಿ ಹಿಂದುಳಿದ ವರ್ಗಗಳಿಗೆ ಎಸ್.ಸಿ., ಎಸ್.ಟಿ. ನಿಗಮಗಳಿಗೆ ಯಾವುದೇ ಹಣಕಾಸಿನ ಅನುದಾನ ನೀಡದಿರುವುದು ಸರಿಯೇ? ಎಂದರು. ಅವುಗಳಿಗೆ ಕೊಡುವ ಎಲ್ಲ ಹಣಕಾಸು ಅನುದಾನ ರದ್ದು ಮಾಡಿದ್ದಾರೆ ಎಂದು ವಿವರಿಸಿದರು.
ಬಿಜೆಪಿಯವರು ಮಾತ್ರ ಹಿಂದುಗಳೇ? ನಾವು ಹಿಂದುಗಳಲ್ಲವೇ ಎಂದು ಮಾನ್ಯ ಸಿದ್ದರಾಮಯ್ಯ ಮತ್ತು ಮಾನ್ಯ ಡಿ.ಕೆ.ಶಿವಕುಮಾರ್ ಅವರು ಕೇಳುತ್ತಿದ್ದಾರೆ. ನೀವೂ ಹಿಂದುಗಳಾಗಿದ್ದರೆ ಕೆರೆಗೋಡಿನಲ್ಲಿ ಹಾಕಿದ ಭಗವಾಧ್ವಜ, ಕೇಸರಿ ಧ್ವಜವನ್ನು ಇಳಿಸಿದಿರಿ? ಎಸ್ಸಿ ಎಸ್ಟಿ ಅಭಿವೃದ್ಧಿಗೆ ನೀಡಿದ ಹಣ, ಆದಿಜಾಂಬವ ಅಭಿವೃದ್ಧಿ ನಿಗಮ, ಬಂಜಾರ ಅಭಿವೃದ್ಧಿ ನಿಗಮಕ್ಕೆ ನೀಡಿದ ಅನುದಾನವನ್ನು ಸಂಪೂರ್ಣವಾಗಿ ಯಾಕೆ ನಿಲ್ಲಿಸಿದಿರಿ ಎಂದೂ ಅವರು ಪ್ರಶ್ನೆ ಮಾಡಿದರು.
ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಘೋಷಿಸಿ 1 ಸಾವಿರ ಕೋಟಿಯ ಕಾರ್ಯಾದೇಶ ಮಾಡಿಸಿದ್ದಾರೆ. ಹಿಂದುಗಳಿಗೇನು ಕೊಟ್ಟಿರಿ? ತೆಂಗಿನಕಾಯಿ ಚಿಪ್ಪು ಕೊಟ್ಟಿರಿ. ಇದ್ಯಾವ ನ್ಯಾಯ ಸಿದ್ದರಾಮಯ್ಯನವರೇ ಎಂದು ಆಕ್ಷೇಪಿಸಿದರು. ಇದು ಸಿದ್ದರಾಮಯ್ಯರ ಸರಕಾರ ಅಲ್ಲ. ಮುಲ್ಲಾ ಮೌಲ್ವಿಗಳ ಸರಕಾರ ಎಂದು ಎನ್.ರವಿಕುಮಾರ್ ಅವರು ಆರೋಪಿಸಿದರು.
ಬಿಜೆಪಿ ಸರ್ಕಾರವಿದ್ದಾಗ ಮತಾಂತರ ಮತ್ತು ಗೋಹತ್ಯೆ ನಿಷೇಧ ಕಾನೂನುಗಳನ್ನು ಜಾರಿಗೊಳಿಸಲಾಗಿತ್ತು, ಆದರೆ ಈಗ ನಿರಂತರ ಗೋಹತ್ಯೆ ಮತ್ತು ರಾಜಾರೋಷವಾಗಿ ಮತಾಂತರಕ್ಕೆ ಅನುಮತಿ ನೀಡಿರುವುದು ಸರಿಯೇ? ನಿಮ್ಮದು ಹಿಂದೂಗಳ ಸರಕಾರವೇ ಎಂದು ಪ್ರಶ್ನಿಸಿದರು.
ಶಿವನ ದೇವಸ್ಥಾನ, ಕಾಳಮ್ಮನ ದೇವಸ್ಥಾನ, ಬಸವಣ್ಣನ ದೇವಸ್ಥಾನ ಸೇರಿ ರಾಜ್ಯದ ಸಾವಿರಾರು, ಲಕ್ಷಾಂತರ ದೇವಾಲಯಗಳ ಹಣ ಸರ್ಕಾರಕ್ಕೆ ಬೇಕು. ಆದರೆ, ಹಿಂದೂಗಳ ಆರಾಧ್ಯ ದೈವ ಹನುಮ ಧ್ವಜ ಹಾರಿಸುವುದು ಏಕೆ ಬೇಡ? ಇದು ಯಾವ ಸೆಕ್ಯುಲರಿಸಂ? ಎಂದು ಸಿದ್ದರಾಮಯ್ಯರಿಗೆ ಪ್ರಶ್ನೆ ಹಾಕಿದರು.
ಸಮಾಜ ಮುಂದೆ ಬರಲು ಎಸ್.ಸಿ., ಎಸ್.ಟಿ. ಗಳಿಗೆ, ಒಬಿಸಿಗಳಿಗೆ ಆದ್ಯತೆ ಕೊಡಲಾಗುತ್ತದೆ. ಎಸ್.ಸಿ., ಎಸ್.ಟಿ. ವರ್ಗಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣದಲ್ಲಿ 11,114 ಕೋಟಿ ಹಣವನ್ನು ನಿಮ್ಮ ಗ್ಯಾರಂಟಿಗಳಿಗೆ ಬಳಸಿದ್ದೇಕೆ? ಯಾಕೆಂದರೆ ನಿಮ್ಮದು ಮುಲ್ಲಾ ಮೌಲ್ವಿ ಸರಕಾರ ಅಲ್ಲವೇ ಎಂದು ಕೇಳಿದರು.
ಚುನಾವಣೆ ಹತ್ತಿರ ಬಂತೆಂದರೆ ನೀವು ಶೋಷಿತರ ಸಮಾವೇಶ, ಹಿಂದುಳಿದವರ ಸಮಾವೇಶ, ಅಲ್ಪಸಂಖ್ಯಾತರ ಸಮಾವೇಶ ಮಾಡುತ್ತೀರಿ. ಯಾಕೆ ಸಿದ್ದರಾಮಯ್ಯನವರೇ ಈಗ ಅಹಿಂದ ಕೈಬಿಟ್ಟಿದ್ದೀರಿ ಎಂದು ಪ್ರಶ್ನೆ ಕೇಳಿದರು. ಹಿಂದುಳಿದವರಿಗೆ ನೀವು ತೆಂಗಿನಕಾಯಿ ಚಿಪ್ಪು ಕೊಟ್ಟಿರಲ್ಲವೇ? ಎಂದು ಪ್ರಶ್ನಿಸಿದರು.
ಕೆರೆಗೋಡಿನಲ್ಲಿ ಹಿಂದೂ ಧ್ವಜವನ್ನು ತಕ್ಷಣ ಕೆಳಗಿಳಿಸುತ್ತೀರಿ. ಸರಕಾರಿ ಕಚೇರಿಗಳ ಮುಂದೆ, ಸರಕಾರಿ ಸಮುದಾಯ ಭವನದಲ್ಲಿ ಕೋಮುದ್ವೇಷ ಬಿತ್ತದಿರಿ ಎನ್ನುವ ನಿಮ್ಮ ಸರಕಾರವು ಕೋಮು ಸಂಘರ್ಷ ಉಂಟು ಮಾಡುವ ಟಿಪ್ಪು ಸುಲ್ತಾನ ಜಯಂತಿಯನ್ನು ವಿಧಾನಸೌಧದಲ್ಲಿ ಮಾಡಬಹುದೇ? ಬ್ಯಾಂಕ್ವೆಟ್ ಹಾಲ್ನಲ್ಲಿ ಮಾಡಬಹುದೇ? ಹಾಗಾಗಿ ನಿಮ್ಮ ಸರಕಾರ ಮುಲ್ಲಾ ಮೌಲ್ವಿ ಸರಕಾರ ಎಂದು ಟೀಕಿಸಿದರು.
ಹಿಂದೂಗಳ ಹೋರಾಟವಾದರೆ ಅವರ ಮೇಲೆ ಲಾಠಿಚಾರ್ಜ್ ಮಾಡುತ್ತಾರೆ. ಅವರ ಮೇಲೆ ಕೇಸು ಹಾಕುತ್ತಾರೆ. ಆದರೆ, ಕೆಎಫ್ಡಿ, ಪಿಎಫ್ಐ ಮೇಲಿನ ಕೇಸ್ ವಾಪಾಸ್ ಪಡೆಯುತ್ತೀರಿ. ಹಾಗಾಗಿ ಮುಲ್ಲಾ ಮೌಲ್ವಿ ಸರಕಾರ ನಿಮ್ಮದಲ್ಲವೇ ಎಂದರು. 1,600 ಜನ ಪುಂಡ ಪೋಕರಿಗಳು, ಉಗ್ರವಾದಿಗಳನ್ನು ಬಿಡುಗಡೆ ಮಾಡಿದ್ದೀರಿ ಎಂದು ಆಕ್ಷೇಪಿಸಿದರು.
ಸಿದ್ದರಾಮಯ್ಯನವರು ಕನ್ನಡ ವ್ಯಾಕರಣ ಮಾಸ್ತರ್. ಯಾರಾದರೂ ಏಕವಚನದಲ್ಲಿ ಮಾತನಾಡಿದರೆ ಅವರಿಗೆ ಕೋಪ ಬರುತ್ತದೆ. ಆದರೆ, ಸಿದ್ದರಾಮಯ್ಯನವರು ಯಾರಿಗೆ ಬೇಕಾದರೂ ಏಕವಚನದಲ್ಲಿ ಮಾತನಾಡಬಹುದು. ಮೋದಿಯವರಿಗೆ ಏಕವಚನ, ಯಡಿಯೂರಪ್ಪನವರಿಗೆ ಏಕವಚನದಲ್ಲಿ ಮಾತನಾಡಬಹುದು. ಮಾನ್ಯ ರಾಷ್ಟ್ರಪತಿ, ಒಬ್ಬ ಮಹಿಳೆಗೂ ಏಕವಚನದಲ್ಲಿ ಸಂಬೋಧನೆ ಸರಿಯೇ ಎಂದು ಕೇಳಿದರು. ಇದು ಸಂಸ್ಕಾರ ಇಲ್ಲದ ಸರಕಾರ ಎಂದು ಆರೋಪಿಸಿದರು.
ಏಕವಚನದಲ್ಲಿ ಮಾತನಾಡಿದ್ದೀರಿ ಎಂದು ಅನಂತಕುಮಾರ್ ಹೆಗಡೆಯವರಿಗೆ ನೀವು ಪಾಠ ಮಾಡುತ್ತೀರಿ. ನಿಮಗೆ ಪಾಠ ಮಾಡುವವರು ಯಾರೂ ಇಲ್ಲವೇ? ಮೌಲ್ವಿ ಸರಕಾರದ ಮುಖ್ಯಸ್ಥರಾದ ಸಿದ್ದರಾಮಯ್ಯನವರೇ ನಿಮಗೆ ಈ ಪ್ರಶ್ನೆ ಕೇಳುತ್ತೇನೆ ಎಂದರು.
ರಾಜ್ಯ ಸರಕಾರವು ಈ 12 ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಎಂದು ಅವರು ಆಗ್ರಹಿಸಿದರು. ಇದು ಎಸ್ಸಿ, ಎಸ್ಟಿಗಳಿಗೆ ನ್ಯಾಯ ಕೊಡತಕ್ಕಂಥ, ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡತಕ್ಕಂಥ ಸರಕಾರ ಅಲ್ಲ. ಇದು ಅಹಿಂದ ಸರಕಾರ ಅಲ್ಲ. ಕರ್ನಾಟಕದ 6.5 ಕೋಟಿ ಜನರ ಸರಕಾರ ಅಲ್ಲ. ಇದು ಮುಲ್ಲಾ ಮೌಲ್ವಿಗಳನ್ನು ಮಾತ್ರ ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಒಂದು ವಿಶಿಷ್ಟವಾದ ಸೆಕ್ಯುಲರಿಸಂ ಬೋಧಿಸುವ ಮುಲ್ಲಾ ಮೌಲ್ವಿಗಳ ಸರಕಾರ ಎಂದು ಪುನರುಚ್ಚರಿಸಿದರು. ಈ ಸರಕಾರದಿಂದ ಕರ್ನಾಟಕಕ್ಕೆ ನ್ಯಾಯ ಸಿಗಲು ಸಾಧ್ಯವಿದೆಯೇ ಎಂದೂ ಕೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.