ಬೆಂಗಳೂರು: ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಪರ ಅಲೆ ಇದೆ. ಆದರೂ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತ ನಡೆಸುವ ಸಂದರ್ಭದಲ್ಲಿ ನಮ್ಮ ವಿರೋಧಿಗಳನ್ನು ಹಗುರವಾಗಿ ಪರಿಗಣಿಸದಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಕಿವಿಮಾತು ಹೇಳಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ರಾಜ್ಯದ ನೂತನ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಚುನಾವಣೆಯಲ್ಲೂ ಕೂಡ ವಿವಿಧ ರೀತಿಯ ಸವಾಲುಗಳಿರುತ್ತವೆ. ಆ ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತು ಸಾಧನೆ ಮಾಡಲು ನಮ್ಮ ಎದುರಾಳಿಗಳನ್ನು ನಾವು ಹಗುರವಾಗಿ ಪರಿಗಣಿಸಬಾರದು. ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು ಎಂದು ಮನವಿ ಮಾಡಿದರು.
ಸ್ವಾತಂತ್ರ್ಯ ಬಂದ ಬಳಿಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ಮನೆ ಬಾಗಿಲಿಗೆ ಸೌಲಭ್ಯಗಳನ್ನು ಬಿಜೆಪಿಯ ಕೇಂದ್ರ ಸರಕಾರ ತಲುಪಿಸಿದೆ. ಇತರ ಯಾವ ಸರಕಾರಗಳೂ ಇಂಥ ಕೆಲಸ ಮಾಡಿರಲಿಲ್ಲ. ರಾಜ್ಯದ ಕಾರ್ಯಕರ್ತರ ಮೂಲಕ ಕೇಂದ್ರ ಸರಕಾರದ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸಬೇಕಿದೆ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಬಲ ತುಂಬುವ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ, ಬಿಬಿಎಂಪಿ ಚುನಾವಣೆ, ವಿಧಾನಪರಿಷತ್ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿ ಮುಂದಕ್ಕೆ ಅಡಿ ಇಡಬೇಕು ಎಂದು ಸೂಚಿಸಿದರು.
ಅತ್ಯಂತ ಪ್ರಮುಖ ಕಾಲಘಟ್ಟದಲ್ಲಿ ನಮಗೆಲ್ಲರಿಗೂ ರಾಜ್ಯ ಪದಾಧಿಕಾರಿಗಳಾಗಿ ಕೆಲಸ ಮಾಡುವ ಜವಾಬ್ದಾರಿ ಲಭಿಸಿದೆ. ನಾವೆಲ್ಲರೂ ಹೊಣೆಯರಿತು ಕರ್ತವ್ಯ ನಿರ್ವಹಿಸಬೇಕು. ನಮಗೆ ಹೊಣೆಗಾರಿಕೆ ಯಾವ ಕಾಲಘಟ್ಟದಲ್ಲಿ ಲಭಿಸಿದೆ ಎಂಬುದು ಅತ್ಯಂತ ಪ್ರಮುಖವಾದುದು. ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಆಗಬೇಕೆಂಬ ಕಳೆದ ಹಲವಾರು ದಶಕಗಳ ಎಲ್ಲ ಹಿಂದೂ ಕಾರ್ಯಕರ್ತರ ಕನಸು, ಹೋರಾಟ ಇದೀಗ ನನಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಜೀ ಅವರ ಅಮೃತಹಸ್ತದಿಂದ ಅದು ಲೋಕಾರ್ಪಣೆ ಆಗಲಿದೆ ಎಂದರು. ಅದೇ ಕಾಲಘಟ್ಟದಲ್ಲಿ ನಮಗೂ ಜವಾಬ್ದಾರಿ ಲಭಿಸಿದೆ ಎಂದು ವಿಶ್ಲೇಷಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಿ ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಗುರಿ ನಮ್ಮ ಎದುರಿಗಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ಕೊಡುವುದು; ಅದಕ್ಕಿಂತ ಹೆಚ್ಚಾಗಿ ನರೇಂದ್ರ ಮೋದಿಯವರ ಕೈ ಬಲಪಡಿಸುವ ಕೆಲಸ ಕರ್ನಾಟಕದಿಂದ ಆಗಬೇಕಿದೆ ಎಂದು ಅವರು ತಿಳಿಸಿದರು. ಕರ್ನಾಟಕವು ಕೇವಲ ದಕ್ಷಿಣ ಭಾರತದ ಬಿಜೆಪಿಯ ಭದ್ರಕೋಟೆಯಲ್ಲ; ಅದೊಂದು ಸುಭದ್ರ ಕೋಟೆಯಾಗಿದೆ ಎಂಬ ಸಂದೇಶವನ್ನು ನಾವು ನೀಡಬೇಕಿದೆ ಎಂದು ನುಡಿದರು.
ನಮ್ಮ ಮುಂದಿರುವ ಸವಾಲು ದೊಡ್ಡದೇನಲ್ಲ. ಮೋದಿಜೀ ಅವರ ಪರವಾದ ವಾತಾವರಣ ದೇಶ ಮತ್ತು ರಾಜ್ಯದಲ್ಲಿದೆ. ಅಪಾರ ಜನಪ್ರಿಯತೆಯೂ ಅವರಿಗೆ ಇದೆ. ಅವರ ಜನಪ್ರಿಯತೆಯನ್ನು ಮತಗಳನ್ನಾಗಿ ಪರಿವರ್ತಿಸುವುದು ಹೇಗೆ ಎಂಬ ಸವಾಲಿಗೆ ಉತ್ತರ ಕಂಡುಕೊಂಡು ಕಾರ್ಯಪ್ರವೃತ್ತರಾಗುವಂತೆ ಅವರು ಸಲಹೆ ನೀಡಿದರು.
ಕೇಂದ್ರದಲ್ಲಿ ಎರಡು ಬಾರಿ ಕಾಂಗ್ರೆಸ್ಸೇತರ ಪಕ್ಷವಾಗಿ ಬಿಜೆಪಿ ಎರಡು ಬಾರಿ ಆಡಳಿತ ನಡೆಸಿದೆ. ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಆಗುವ ಎರಡನೇ ಮಹತ್ತರ ಕಾಲಘಟ್ಟದಲ್ಲೇ ಈ ಹೊಣೆ ನಮ್ಮೆಲ್ಲರ ಹೆಗಲಿಗೇರಿದೆ ಎಂದು ನುಡಿದರು. ದೇಶದ ರಾಜಕೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರದಿಡುವಂಥ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ಲೋಕಸಭಾ ಚುನಾವಣೆ ಮುಗಿಯುವ ವರೆಗೆ ನಮಗೆ ಭಾನುವಾರ, ಹಬ್ಬ, ಹರಿದಿನ ಎಂಬುದಿರಬಾರದು. ಕುಟುಂಬ ಎಲ್ಲವನ್ನೂ ಬದಿಗಿಡಿ. ಲೋಕಸಭಾ ಚುನಾವಣೆಯ ಗುರಿ ಮುಟ್ಟುವತನಕ ನಾವು ವಿಶ್ರಾಂತಿ ಪಡೆಯುವ ಪ್ರಶ್ನೆ ಉದ್ಭವ ಆಗಬಾರದು. ನರೇಂದ್ರ ಮೋದಿಜೀ ಅವರು ವಿಶ್ರಾಂತಿ ಪಡೆಯದೆ ಕಳೆದ ಒಂಬತ್ತೂವರೆ ವರ್ಷಗಳಿಂದ ನಿರಂತರವಾಗಿ ದೇಶಸೇವೆ ಮಾಡುತ್ತಿದ್ದಾರೋ ಅದೇ ಮಾದರಿಯಲ್ಲಿ ಒಗ್ಗಟ್ಟಾಗಿ ಒಂದಾಗಿ ಕೆಲಸ ಮಾಡಬೇಕು. ಜಾತಿರಹಿತವಾಗಿ ಬಿಜೆಪಿ, ಹಿಂದುತ್ವದ ಜಾತಿಯಡಿ ಒಂದು ತಂಡವಾಗಿ ಕೆಲಸ ಮಾಡೋಣ ಎಂದು ವಿಜಯೇಂದ್ರ ಅವರು ಮನವಿ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.