ಬೆಂಗಳೂರು: ನವಭಾರತ ನಿರ್ಮಾಣದ ಕನಸಿನ ಬೀಜ ಬಿತ್ತಿದವರು ಅಟಲ್ ಬಿಹಾರಿ ವಾಜಪೇಯಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.
ಅರಮನೆ ರಸ್ತೆಯ ಸೆಂಟ್ರಲ್ ಕಾಲೇಜು ಸಂಯುಕ್ತ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ನಡೆದ ಸುಶಾಸನ ದಿನ (ಉತ್ತಮ ಆಡಳಿತ ದಿನ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತ ದೇಶದಲ್ಲಿ ಉತ್ತಮ ಆಡಳಿತ ನಿರೀಕ್ಷೆ ಮಾಡಲು ಸಾಧ್ಯವೇ; ಅಥವಾ ನಮ್ಮ ರಾಜ್ಯಗಳಲ್ಲಿ ಇದು ಅಸಾಧ್ಯವಾದ ಮಾತು ಎಂಬ ಸ್ಥಿತಿ ಹಿಂದೆ ಇತ್ತು ಎಂದು ತಿಳಿಸಿದರು. ಉತ್ತಮ ಆಡಳಿತ ಕೊಟ್ಟ ವಾಜಪೇಯಿ ಅವರ ಸುಶಾಸನವನ್ನು ನೆನಪಿಸಲು ಆದರಣೀಯ ಪ್ರಧಾನಿ ನರೇಂದ್ರ ಮೋದಿಜೀ ಅವರು ತಿಳಿಸಿದ್ದು, ಇವತ್ತು ಸುಶಾಸನ ದಿನ ಆಚರಿಸುತ್ತೇವೆ ಎಂದು ತಿಳಿಸಿದರು.
ಉತ್ತಮ ಆಡಳಿತವು ಕೇವಲ ಅಮೆರಿಕ, ಇಂಗ್ಲೆಂಡ್, ಜಪಾನ್ನಂಥ ದೇಶಗಳಿಗೆ ಸೀಮಿತವಾಗಿತ್ತು. ಅವಶ್ಯಕತೆ ಇದ್ದರೂ ನಮ್ಮ ದೇಶದಲ್ಲಿ ಅದು ಅಸಾಧ್ಯ ಎಂಬ ಮನಸ್ಥಿತಿ ಇತ್ತು ಎಂದು ವಿವರಿಸಿದರು.
ಭಾರತದಲ್ಲಿ ಮೊದಲ ಬಾರಿಗೆ ಭ್ರಷ್ಟಾಚಾರಮುಕ್ತ ರಾಷ್ಟ್ರ ಮಾಡಬಹುದು; ನಮ್ಮ ದೇಶದಲ್ಲೂ ಉತ್ತಮ ಆಡಳಿತ ನೀಡಿ ಅಭಿವೃದ್ಧಿ ಕಾಣಬಹುದು ಎಂಬುದನ್ನು ದೇಶದ ನೆಚ್ಚಿನ ಪ್ರಧಾನಮಂತ್ರಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಮನವರಿಕೆ ಮಾಡಿಕೊಟ್ಟರು. ಅದಕ್ಕಾಗಿ ನಾವು ಇವತ್ತು ಅವರನ್ನು ನೆನಪಿಸುತ್ತೇವೆ ಎಂದು ತಿಳಿಸಿದರು.
ಗೋಲ್ಡನ್ ಟ್ರಿಯಾಂಗಲ್ ರಸ್ತೆ ಎಂದಾಗ ವಾಜಪೇಯಿಯವರು ನೆನಪಾಗುತ್ತಾರೆ. ಅವರು ಪ್ರಧಾನಿಯಾಗಿದ್ದ ಕಾಲಘಟ್ಟದಲ್ಲಿ ಭಾರತದ ವಿದೇಶಾಂಗ ನೀತಿ ಅತ್ಯಂತ ಹೆಮ್ಮೆ ಪಡುವಂತಿತ್ತು ಎಂದು ಹೇಳಿದರು. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಸುಶಾಸನ ದಿನವಾಗಿ ಆಚರಿಸಲಾಗುತ್ತಿದೆ. ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆ ಇವತ್ತು ಅಸ್ತಿತ್ವಕ್ಕೆ ಬಂದಿರುವುದು ಸಂತಸದ ವಿಚಾರ ಎಂದು ತಿಳಿಸಿದರು.
ಭಾರತವನ್ನು ಕಳೆದೊಂದು ದಶಕದಿಂದೀಚೆಗೆ ಹೆಮ್ಮೆಯಿಂದ ನೋಡುವಂಥ ಬದಲಾವಣೆ ಆಗಿದೆ. ಅದಕ್ಕೆ ನರೇಂದ್ರ ಮೋದಿಜೀ ಅವರ ಉತ್ತಮ ಆಡಳಿತ ಕಾರಣ ಎಂದು ನುಡಿದರು. ಭಾರತದ ಅಭಿವೃದ್ಧಿಯನ್ನು ಕುತೂಹಲದಿಂದ ಜಗತ್ತು ಇವತ್ತು ಗಮನಿಸುತ್ತಿದೆ. ಇಲ್ಲಿನ ಭ್ರಷ್ಟಾಚಾರರಹಿತ ಆಡಳಿತವು ವಿಶ್ವಕ್ಕೇ ಮಾದರಿ ಆಗುವಂತಿದೆ ಎಂದು ತಿಳಿಸಿದರು.
2047ಕ್ಕೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲು ಹಗಲುರಾತ್ರಿ ಮೋದಿಜೀ ಅವರು ತಪಸ್ಸಿನ ರೀತಿಯಲ್ಲಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ವಾಜಪೇಯಿಯವರ ಕನಸನ್ನು ಮೋದಿಯವರು ನನಸು ಮಾಡಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ್, ಹಿರಿಯರಾದ ವಿ.ಆರ್.ಪ್ರಸನ್ನ, ನರೇಶ್, ಸುಬ್ರಹ್ಮಣ್ಯ, ಮಧುಶೆಟ್ಟಿ, ಜಯರಾಮ್ ಸೇರಿದಂತೆ ಅನೇಕ ಹಿರಿಯರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.