ಸಾನ್ ಜೋಸ್: ಅನಿವಾಸಿ ಭಾರತೀಯರು ಭಾರತಕ್ಕೆ ಹೊಸ ಗುರುತನ್ನು ನೀಡಿದ್ದಾರೆ, ಮಾತ್ರವಲ್ಲದೇ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಮೆರಿಕಾದ ಸಾನ್ ಜೋಸ್ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಅವರು, ’ನಿಮ್ಮ ಕೈಬೆರಳುಗಳು ಕೀ ಬೋರ್ಡ್ ಮತ್ತು ಕಂಪ್ಯೂಟರ್ನಲ್ಲಿ ಮ್ಯಾಜಿಕ್ ಮಾಡಿದೆ. ಇದು ಭಾರತಕ್ಕೆ ಹೊಸ ಗುರುತನ್ನು ನೀಡಿದೆ. ನಿಮ್ಮ ಕೌಶಲ್ಯ ಮತ್ತು ಶ್ರದ್ಧೆ ಅದ್ಭುತ’ ಎಂದರು.
ಸುಧೀರ್ಘ ಕಾಲದಿಂದ ಚರ್ಚಿತವಾಗುತ್ತಿರುವ ’ಪ್ರತಿಭಾ ಪಲಾಯನ’ (ನುರಿತ ಮತ್ತು ಅರ್ಹ ವ್ಯಕ್ತಿಗಳ ವಲಸೆ) ಬಗ್ಗೆ ಉಲ್ಲೇಖಿಸಿದ ಅವರು, ಪ್ರತಿಭಾ ಪಲಾಯನವೂ ಲಾಭವಾಗಿ ಪರಿಣಮಿಸುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ. ಈಗ ಪ್ರತಿಭಾ ಪಲಾಯನ ಪ್ರತಿಭೆಯ ಕ್ರೋಢೀಕರಣವಾಗಿ ಪರಿಣಮಿಸಿದೆ ಎಂದರು.
ಭಾರತದ ಬಗೆಗಿನ ಜಗತ್ತಿನ ಭಾವನೆ ಈಗ ಬದಲಾಗಿದೆ. ನಾಯಕತ್ವಕ್ಕಾಗಿ ಜನ ಈಗ ಭಾರತದತ್ತ ನೋಡುತ್ತಿದ್ದಾರೆ. ಜಾಮ್ (JAM) ನನ್ನ ಸರ್ಕಾರದ ಮುಖ್ಯ ಯೋಜನೆ. ಜೆ ಅಂದರೆ ಜನಧನ್, ಎ ಅಂದರೆ ಆಧಾರ್ ಕಾರ್ಡ್ ಮತ್ತು ಎಂ ಅಂದರೆ ಮೊಬೈಲ್ ಗವರ್ನೆನ್ಸ್.
ಉಪನಿಷದ್ನಿಂದ ಹಿಡಿದು ಭಾರತ ಈಗ ಉಪಗ್ರಹದವರೆಗೆ ಮುಂದುವರೆದಿದೆ. ಮೊದಲ ಪ್ರಯತ್ನದಲ್ಲೇ ಮಂಗಳಯಾನವನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ ಎಂದರು
ನಾನು ಬದುಕುವುದೂ, ಸಾಯುವುದು ದೇಶಕ್ಕಾಗಿ, ನನ್ನ ಜೀವನದ ಕಣ ಕಣವನ್ನು ದೇಶ ಸೇವೆಗಾಗಿ ಮುಡುಪಾಗಿಡುತ್ತೇನೆ. ಪ್ರತಿ ಗಂಟೆಯೂ ದೇಶದ ಜನರಿಗಾಗಿ ಕೆಲಸ ಮಾಡುತ್ತೇನೆ ಎಂದು ನಿಮಗೆ ಭರವಸೆ ನೀಡುತ್ತೇನೆ. ಇದುವರೆಗೆ ನಾನೂ ವಿಶ್ರಾಂತಿಯನ್ನೇ ಪಡೆದಿಲ್ಲ ಎಂದು ದೇಶಾಭಿಮಾನದ ನುಡಿಗಳನ್ನು ಆಡಿದರು.
ಭಯೋತ್ಪಾದನೆ ಮತ್ತು ಹವಮಾನ ವೈಪರೀತ್ಯ ಜಗತ್ತು ಎದುರಿಸುತ್ತಿರುವ ದೊಡ್ಡ ಸಮಸ್ಯೆ. ಅದನ್ನು ಎದುರಿಸಲು ಎಲ್ಲರೂ ಒಂದುಗೂಡಬೇಕಾಗಿದೆ ಎಂದು ಪ್ರತಿಪಾದಿಸಿದರು.
ಸ್ವಾತಂತ್ರ್ಯ ಯೋಧ ಶಹೀದ್ ಭಗತ್ ಸಿಂಗ್ ಅವರ ಜನ್ಮ ದಿನದ ಅಂಗವಾಗಿ ನಮನಗಳನ್ನು ಸಲ್ಲಿಸಿದ ಅವರು, ಸಭಿಕರಿಂದ ವೀರ್ ಭಗತ್ ಸಿಂಗ್ ಅಮರ್ ರಹೇ ಅಮರ್ ರಹೇ ಎಂಬ ಉದ್ಘೋಷವನ್ನು ಮೊಳಗಿಸಿದರು.
ಮೋದಿಯ ಈ ಸಮಾರಂಭದಲ್ಲಿ 45ಸಾವಿರ ಜನ ಹಾಜರಿದ್ದರು. ಅನೇಕರು ಟಿವಿ ಸ್ಕ್ರೀನ್ನಲ್ಲಿ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.