ಬೆಂಗಳೂರು: ಯಲಹಂಕದಲ್ಲಿ ದಲಿತರ ಮೇಲೆ ದೌರ್ಜನ್ಯ ಮಾಡಿದ ಸುಧಾಕರ್ ಅವರನ್ನು ಸಚಿವಸಂಪುಟದಿಂದ ವಜಾ ಮಾಡಬೇಕು. ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಒತ್ತಾಯಿಸಿದರು.
ಯಲಹಂಕದಲ್ಲಿ ಸಚಿವರಿಂದ ದೌರ್ಜನ್ಯಕ್ಕೆ ಒಳಗಾದ ದಲಿತ ಮಹಿಳೆ ಮುನಿಯಮ್ಮ ಅವರನ್ನು ಬಿಜೆಪಿ ನಿಯೋಗವು ಇಂದು ಭೇಟಿ ಮಾಡಿತು. ದಲಿತರ ಆಸ್ತಿ ಕಬಳಿಕೆಗೆ ಸಚಿವರೇ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಸ್ವಾತಂತ್ರ್ಯೋತ್ತರದ 75 ವರ್ಷಗಳ ಆಡಳಿತದಲ್ಲಿ ಇದೊಂದು ಕಪ್ಪುಚುಕ್ಕೆ ಎಂದು ಗೋವಿಂದ ಕಾರಜೋಳ ಅವರು ಆರೋಪಿಸಿದರು.
ಸುಧಾಕರ್ ಅವರನ್ನು ಸಚಿವಸಂಪುಟದಿಂದ ವಜಾ ಮಾಡಬೇಕು. ದಲಿತರ ಆಸ್ತಿ ಕಬಳಿಸಿ ದೌರ್ಜನ್ಯ ಮಾಡಿದ್ದು ಖಂಡನೀಯ. ರಸ್ತೆಗಳನ್ನು ಬಂದ್ ಮಾಡಿದ್ದು ಆಕ್ಷೇಪಾರ್ಹ. ಈ ಸರಕಾರ ದಲಿತರನ್ನು ರಕ್ಷಿಸಲು ಬಂದಿದೆಯೇ ಅಥವಾ ದೌರ್ಜನ್ಯ ಮಾಡಲು ಬಂದಿದೆಯೇ ಎಂದು ಸಿದ್ದರಾಮಯ್ಯನವರು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು. ಒಳಗೆ ಸೇರಿಕೊಂಡ ಗೂಂಡಾಗಳನ್ನು ಬಂಧಿಸಿ ಸಂತ್ರಸ್ತರಿಗೆ ರಕ್ಷಣೆ ಕೊಡಲು ಅವರು ಒತ್ತಾಯ ಮಾಡಿದರು.
ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಮಾಧ್ಯಮದವರು ಇಲ್ಲಿನ ವಿದ್ಯಮಾನಗಳನ್ನು ಗಮನಿಸಿದ್ದೀರಿ. ಬಡವರಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಲು ಮತ್ತು ತೊಂದರೆ ಮಾಡಿದ್ದರೆ ಶಿಕ್ಷೆ ವಿಧಿಸಲು ಆಗ್ರಹಿಸಲು ನಾವು ಬಂದಿದ್ದೇವೆ. 2019ರಲ್ಲಿ ಇಲ್ಲಿಗೆ ಸುಧಾಕರ್ ಅವರು ಬಂದಿದ್ದರು. ಇದನ್ನು ಅಭಿವೃದ್ಧಿ ಮಾಡಲು ಒಪ್ಪಿಗೆ ಪತ್ರ ಕೇಳಿದ್ದರು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೋದಾಗ 5.70 ಕೋಟಿಗೆ ಜಾಗ ಖರೀದಿ ಒಪ್ಪಂದ ಮಾಡಿಕೊಂಡಿದ್ದರು ಎಂದು ಆರೋಪಿಸಿದರು.
4.30 ಕೋಟಿ ನಗದು ಕೊಟ್ಟಿದ್ದಾಗಿ ಬರೆಸಿಕೊಂಡರು. ಇವರು ಕೊಟ್ಟ 1.40 ಕೋಟಿಯ ಚೆಕ್ಗಳು ಬೌನ್ಸ್ ಆಗಿದ್ದವು. ಅಗ್ರಿಮೆಂಟ್ ರದ್ದತಿಗೆ ಹೋದ ಬಳಿಕ ವಿಕ್ರಯ ಚೀಟಿ ಕುರಿತು ತಿಳಿಯಿತು. ಡಿ.ಸುಧಾಕರ್ ಈ ಜಾಗದ ಮೇಲೆ 25 ಕೋಟಿ ಸಾಲವನ್ನು ಅವರದೇ ಸೊಸೈಟಿಯಿಂದ ಪಡೆದಿದ್ದಾರೆ. ಇಷ್ಟೆಲ್ಲ ಆದ ಮೇಲೆ ಅಧಿಕಾರಕ್ಕೆ ಬಂದಿದ್ದು, ಕೇಸುಗಳು ಬಾಕಿ ಇರುವಾಗಲೇ ಖಾತೆಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಇವರನ್ನು ಎತ್ತಂಗಡಿ ಮಾಡಲು ಸಚಿವರು ಮುಂದಾಗಿದ್ದಾರೆ ಎಂದು ದೂರಿದರು.
ಇದೊಂದು ವಂಚನೆ ಪ್ರಕರಣ. ನ್ಯಾಯ ಕೋರಿ ಇಲ್ಲಿ ಬಂದಿದ್ದೇವೆ. ಇದರಲ್ಲಿ ಸಚಿವರಿದ್ದಾರೆ ಎಂದರೆ ಇದರ ಹಿಂದೆ ಸರಕಾರ ಇರುವುದು ಸ್ಪಷ್ಟ. ಆದ್ದರಿಂದ ತಕ್ಷಣವೇ ಈ ಸಚಿವರನ್ನು ಸಂಪುಟದಿಂದ ಹೊರ ಹಾಕಬೇಕು. ಇಲ್ಲವಾದರೆ ಅವರೇ ರಾಜೀನಾಮೆ ಕೊಡಬೇಕು ಎಂದರಲ್ಲದೆ, ಸರಕಾರ ಈ ಕುರಿತು ಕೂಲಂಕಷ ಪರಿಶೀಲನೆ ನಡೆಸಬೇಕು. ಶೆಡ್ಗಳನ್ನು ಒಡೆಯಲಾಗಿದೆ. ಪೊಲೀಸರು ಏನು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಮಾತನಾಡಿ, ಜನರು ನಿಮಗೆ ಮತ ಕೊಟ್ಟು ಅಧಿಕಾರ ನೀಡಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ, ದೀನದಲಿತರು, ಬಡವರ ಪರ ನೀವು ಎಂದು ಕಾಂಗ್ರೆಸ್ ಚುನಾವಣೆ ಹೇಳಿದ್ದು ಸುಳ್ಳೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಆರೋಪಿ ಸಚಿವರನ್ನು ಸಂಪುಟದಿಂದ ವಜಾ ಮಾಡಿ. ಈ ಕುಟುಂಬಕ್ಕೆ ನ್ಯಾಯ ಕೊಡಿ. ಇಲ್ಲವಾದರೆ ಇನ್ನಷ್ಟು ತೀವ್ರವಾದ ಹೋರಾಟ ಮಾಡಿ ಜನರ ಕಣ್ಣನ್ನು ತೆರೆಸುತ್ತೇವೆ ಎಂದು ಎಚ್ಚರಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಮಾತನಾಡಿ, ಸಚಿವರನ್ನು ಅವರ ಸ್ಥಾನದಿಂದ ವಜಾ ಮಾಡಿ. ದಲಿತ ಕುಟುಂಬಗಳಿಗೆ ನ್ಯಾಯ ಕೊಡಿಸಿ ಎಂದು ಒತ್ತಾಯ ಮಾಡಿದರು. ಈ ಜಾಗವನ್ನು ನೋಡಿದರೆ ಸುಧಾಕರರ ಗೂಂಡಾಗಿರಿ ಗೊತ್ತಾಗುತ್ತದೆ. ಇಲ್ಲಿ ದಲಿತ ಮಹಿಳೆ ಮತ್ತಿತರರು ನಿರಾಶ್ರಿತರಾಗಿದ್ದಾರೆ. ಇದಕ್ಕೆ ಸಿದ್ದರಾಮಯ್ಯನವರು ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.
ಸಚಿವರಾಗಿ ಕಾನೂನಿಗೆ ವಿರುದ್ಧವಾಗಿ ಜಾಗವನ್ನು ಕಬ್ಜಾ ಮಾಡಿದ್ದಾರೆ. ಇದು ಸರಿಯೇ? ಇವರನ್ನು ಖಾಲಿ ಮಾಡಿದ್ದು ಸರಿಯೇ? ಎಸ್ಸಿ, ಎಸ್ಟಿ ಮಹಿಳೆಯರು, ಪುರುಷರು ನಿರಾಶ್ರಿತರಾಗಿದ್ದಾರೆ. ಅವರು ಎಲ್ಲಿ ಬದುಕಬೇಕು ಎಂದು ಕೇಳಿದರು.
25 ಕೋಟಿ ಸಾಲ ಹೇಗೆ ಸಿಕ್ಕಿದೆ? ಬ್ಯಾಂಕ್ ಇವರದೇ ಆದರೂ ಇವರು ಆಡಿದ್ದೇ ಆಟವೇ? ಕಾನೂನೇ ಪಾಲಿಸಿಲ್ಲವೇ? ಇದರ ಬಗ್ಗೆ ತನಿಖೆ ಆಗಬೇಕು. ಒತ್ತಾಯಪೂರ್ವಕ ಸಹಿ ಹಾಕಿಸಿಕೊಂಡಿದ್ದು, ಹೆಬ್ಬೆಟ್ಟು ಗುರುತು ಹಾಕಿಸಿದ್ದು ಕಾನೂನಿಗೆ ವಿರುದ್ಧವಾಗಿದೆ. ಇದರ ಬಗ್ಗೆಯೂ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ನೂರಾರು ಕೋಟಿ ಬೆಲೆಯ ಜಾಗವನ್ನು ಕನಿಷ್ಠ ಬೆಲೆಯಲ್ಲಿ ಕೊಂಡುಕೊಳ್ಳುವುದು ಯಾವ ನ್ಯಾಯ? ಮಾತೆತ್ತಿದರೆ ಸಾಮಾಜಿಕ ನ್ಯಾಯದ ಮಾತನಾಡುವ ಸಿದ್ದರಾಮಯ್ಯನವರು ಎಲ್ಲಿದೆ ಸಾಮಾಜಿಕ ನ್ಯಾಯ? ಎಲ್ಲಿದೆ ದಲಿತರಿಗೆ ನ್ಯಾಯ? ಎಂಬ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಡಾ.ಅಂಬೇಡ್ಕರ್ ಫೋಟೊ ಇಟ್ಟು ಧರಣಿ ಕುಳಿತ ಇವರಿಗೆ ನ್ಯಾಯ ಕೊಡುವವರು ಯಾರು ಎಂದು ಕೇಳಿದರು. ಗೃಹ ಸಚಿವರು ಇಲ್ಲಿಗೆ ಭೇಟಿ ಕೊಟ್ಟು ದಲಿತ ಕುಟುಂಬಗಳಿಗೆ ನ್ಯಾಯ ಕೊಡಬೇಕು ಎಂದು ಅವರು ಒತ್ತಾಯವನ್ನು ಮುಂದಿಟ್ಟರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.