ಬೆಳಗಾವಿ: ರೈತರಿಗೆ ಮೋಸಮಾಡುವ ನಕಲುಕೋರರಿಗೆ ಕೃಷಿ ಇಲಾಖಾಧಿಕಾರಿಗಳು ಸಿಂಹ ಸ್ವಪ್ನವಾಗಬೇಕು ಎಂದು ಕೃಷಿ ಸಚಿವರೂ ಆಗಿರುವ ಚಿತ್ರದುರ್ಗ ಮತ್ತು ಗದಗ ಜಿಲ್ಲಾ ಉಸ್ತುವಾರಿ ಬಿ.ಸಿ.ಪಾಟೀಲ್ ಖಡಕ್ ಸೂಚನೆ ನೀಡಿದರು.
ಬೆಳಗಾವಿಯ ಸುವರ್ಣಸೌಧ ಸೆಂಟ್ರಲ್ ಹಾಲ್ನಲ್ಲಿ ನಡೆದ ಸಚಿವರ ಅಧ್ಯಕ್ಷತೆಯಲ್ಲಿ ನಡೆದ 2022-23 ನೇ ಸಾಲಿನ ಜಿಲ್ಲಾ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅನ್ನ ನೀಡುವ ರೈತನಿಗೆ ಕಳಪೆ ಗೊಬ್ಬರ, ರಾಸಾಯನಿಕ, ಔಷಧಿ, ಬಿತ್ತನೆ ಬೀಜ ಮಾರಾಟ ಮಾಡುವಷ್ಟು ನೀಚ ಕೆಲಸದ ಮತ್ತೊಂದಿಲ್ಲ. ಇಂತವರ ಮೇಲೆ ಕೃಷಿ ಇಲಾಖೆ ಸದಾ ಹದ್ದಿನಕಣ್ಣು ಇಟ್ಟಿರಬೇಕು.ರೈತನನ್ನು ಪೋಷಿಸಿ ಬೆಳೆಸಿ ಅನ್ನದಾತನಿಗೆ ಹರಸಬೇಕು. ಹಿಂದೆ ಕೃಷಿ ಇಲಾಖೆ ಅಧಿಕಾರಿಗಳೆಂದರೆ ಹೆಚ್ಚು ಗೌರವ ಬೆಲೆ ಅಷ್ಟಾಗಿ ಸಿಗುತ್ತಿರಲಿಲ್ಲ .ಆದರೆ ಇದೀಗ ತಾವು ಬಂದಮೇಲೆ ಕೃಷಿ ವಿಚಕ್ಷಣಾ ದಳದ ಕಾರ್ಯವೈಖರಿಯಿಂದ ಇಡೀ ಇಲಾಖೆಗೆ ಮಹತ್ವ ಗೌರವ ಬಂದಿದೆ. ನಕಲುಕೋರರು ರೈತನಿಗೆ ಮೋಸ ಮಾಡುವವರು ಕೃಷಿ ಇಲಾಖೆ ಕೃಷಿ ಇಲಾಖಾಧಿಕಾರಿಗಳೆಂದರೆ ಎಚ್ಚೆತ್ತುಕೊಳ್ಳಬೇಕು.ತಪ್ಪು ಮಾಡಬಾರದು ರೈತನಿಗೆ ಮೋಸ ಮಾಡಬಾರದು ಎಂದು ಅಂಜಬೇಕು. ಇಂತಹ ಕೆಲಸವನ್ನು ಕೃಷಿ ಇಲಾಖಾಧಿಕಾರಿಗಳು ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ನಕಲು ರಸಗೊಬ್ಬರ, ಕಳಪೆ ಬೀಜ, ಕೃತಕ ಅಭಾವದ ವಿರುದ್ಧ ರಾಜ್ಯದಲ್ಲಿ ಕೃಷಿ ವಿಚಕ್ಷಣಾ(ಜಾಗೃತ)ದಳ ಹೆಚ್ಚು ಕ್ರಿತಾತ್ಮಕವಾಗಿದೆ. ಜಾಗೃತದಳದಿಂದ ಇಲ್ಲಿವರೆಗೆ 28 ಕೋ ರೂ ಮೊತ್ತದ ನಕಲಿ ಕಳಪೆ ರಸಗೊಬ್ಬರ ಬಿತ್ತನೆ ಬೀಜವನ್ನು ಸೀಜ್ ಮಾಡಲಾಗಿದೆ. 15 ಲಕ್ಷ ರೂ ದಂಡವಾಗಿ 148 ನಕಲುಕೋರರ ಪರವಾನಿಗೆಯನ್ನು ರದ್ದುಪಡಿಸಲಾಗಿದೆ. ರೈತನಿಗೆ ಮೋಸ ಮಾಡುವವರನ್ನು ಗುರುತಿಸುವುದು ಅವರ ಮೇಲೆ ಕಣ್ಣಿಡುವುದು ಬರೀ ಜಾಗೃತದಳದ ಕೆಲಸವೆಂಬುದನ್ನು ತಾತ್ಸಾರ ಭಾವನೆ ತೋರದೇ ಇದು ರೈತನ ಕೆಲಸ ಅನ್ನದಾತನ ಕೆಲಸ ಇದಕ್ಕಾಗಿ ಎಲ್ಲರೂ ಮುಂದಾಗಿ ಕೃಷಿಕನನ್ನು ಹರಸಬೇಕೆಂಬ ಸದ್ಭಾವನೆ ಎಲ್ಲರ ಮನದಲ್ಲಿ ತಾಳಬೇಕು ಎಂದು ಬಿ.ಸಿ.ಪಾಟೀಲ್ ಸಭೆಯಲ್ಲಿ ಸಲಹೆ ನೀಡಿದರು.
ರಸಗೊಬ್ಬರದ ಕೊರತೆ ಎಲ್ಲಿಯೂ ಇಲ್ಲ.ಆದರೆ ಕೆಲ ವ್ಯಾಪಾರಸ್ಥರು ದುರಾಸೆಯ ಲಾಭಕ್ಕಾಗಿ ಕೃತಕ ಲಾಭ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರುವ ಹುನ್ನಾರ ಮಾಡುತ್ತಲೇ ಇರುತ್ತಾರೆ.ರಸಗೊಬ್ಬರವನ್ನು ಕೇಂದ್ರ ಸಕಾಲದಲ್ಲಿ ಸಮರ್ಪಕವಾಗಿ ಪೂರೈಸುತ್ತಲೇ ಇದೆ.ರಸಗೊಬ್ಬರದ ದಾಸ್ತಾನು ಇದೆ.ಇದನ್ನು ಅಧಿಕಾರಿಗಳು ರೈತರಿಗೆ ಒತ್ತಿ ಹೇಳುವ ಕೆಲಸ ಮಾಡಬೇಕು.
ನ್ಯಾನೋ ಗೊಬ್ಬರ ಬಳಕೆಗೆ ಹೆಚ್ಚು ಪ್ರೋತ್ಸಾಹಿಸಬೇಕು. ಭೂಮಿಯನ್ನು ಮಣ್ಣನ್ನು ಉಳಿಸುವ ಕೆಲಸ ಮಾಡಬೇಕು. ಮಳೆಯಿಂದ ಹಾನಿಗೊಳಗಾದ ರೈತರ ಜಮೀನುಗಳಿಗೆ ತಾಕುಗಳಿಗೆ ಕಂದಾಯ ಇಲಾಖಾಧಿಕಾರಿಗಳೊಂದಿಗೆ ಕೃಷಿ ಇಲಾಖಾಧಿಕಾರಿಗಳೂ ಸಹ ಭೇಟಿ ನೀಡಿ ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.ರೈತ ವಿದ್ಯಾನಿಧಿ ಯೋಜನೆಯನ್ನು ರೈತ ಕೂಲಿಕಾರ್ಮಿಕ ಮಕ್ಕಳಿಗೂ ಸರ್ಕಾರ ವಿಸ್ತರಿಸಿದರ ಬಗ್ಗೆ ಹೆಚ್ಚು ಪ್ರಚಾರ ಮೂಡಿಸಬೇಕು. ಸರ್ಕಾರದ ಸೌಲಭ್ಯ ರೈತರಿಗೆ ದೊರೆಯುವ ಬಗ್ಗೆ ಹಾಗೂ ರೈತ ಸ್ನೇಹಿ ಆಡಳಿತ ನೀಡುವ ಬಗ್ಗೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಬೆಳಗಾವಿ ವಿಭಾಗದ ಎಲ್ಲಾ ಜಿಲ್ಲೆಗಳು ಒಂದು ವಾರದಲ್ಲಿ ಪರಿಹಾರ ತಂತ್ರಾಂಶದಲ್ಲಿ ಜಂಟಿ ಬೆಳೆ ಸಮೀಕ್ಷೆಯ ರೈತರ ವರದಿಗಳನ್ನು ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಆದೇಶಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.