ನವದೆಹಲಿ: ಕೋವಿಡ್ ಸಾಂಕ್ರಾಮಿಕ ಮತ್ತು ಮಳೆಗಾಲದ ಹೊರತಾಗಿಯೂ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 2021-22ರ ಆರ್ಥಿಕ ವರ್ಷದಲ್ಲಿ ಇದುವರೆಗೆ 3,385 ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು (NH) ನಿರ್ಮಾಣ ಮಾಡಿದೆ.
ನಿರ್ಮಾಣದ ವೇಗವು ದಿನಕ್ಕೆ 21.8 ಕಿಮೀ ಆಗಿದೆ ಮತ್ತು ಸಚಿವಾಲಯವು ಈ ಅವಧಿಯಲ್ಲಿ 3,068 ಕಿಮೀ ಹೆದ್ದಾರಿ ಯೋಜನೆಗಳನ್ನು ನೀಡಿದೆ.
“ಪ್ರಸಕ್ತ ಹಣಕಾಸು ವರ್ಷ 2021-22 (ಸೆಪ್ಟೆಂಬರ್ 2 ರವರೆಗೆ)ರಲ್ಲಿ 3,385.02 ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಮಿಸಿದೆ ಮತ್ತು ಈ ಅವಧಿಯಲ್ಲಿ ಇದು 3,068.26 ಕಿಮೀ ಹೆದ್ದಾರಿ ಯೋಜನೆಗಳನ್ನು ನೀಡಿದೆ. ನಿರ್ಮಾಣದ ವೇಗವು 21.8 km/day ಆಗಿತ್ತು” ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿದೆ.
ದಿನಕ್ಕೆ 100 ಕಿಮೀ ಗಿಂತ ಹೆಚ್ಚು ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.
“ನಾವು ದಿನಕ್ಕೆ 38 ಕಿಮೀ ಹೆದ್ದಾರಿ ನಿರ್ಮಾಣದ ವಿಶ್ವದಾಖಲೆಯನ್ನು ಹೊಂದಿದ್ದೇವೆ. ಪ್ರಸ್ತುತ ಕಾರ್ಯಕ್ಷಮತೆಯಿಂದ ನನಗೆ ತೃಪ್ತಿಯಿಲ್ಲ. ನನ್ನ ಗುರಿ ದಿನಕ್ಕೆ 100 ಕಿಮೀ ಗಿಂತಲೂ ಹೆಚ್ಚು” ಎಂದು ಗಡ್ಕರಿ ಹೇಳಿದ್ದರು.
ಅಮೆರಿಕದ ಗುಣಮಟ್ಟಕ್ಕೆ ಸಮನಾದ ರೀತಿಯಲ್ಲಿ ಭಾರತದಲ್ಲಿ ರಸ್ತೆ ಮೂಲಸೌಕರ್ಯವನ್ನು ನಿರ್ಮಾಣ ಮಾಡಲು ಬಯಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.
“ಈಗಿರುವ ಹೆದ್ದಾರಿಗಳಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು, ನಾವು ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇಗಳ ಮೇಲೆ ಹೆಚ್ಚು ಗಮನ ಹರಿಸುತ್ತೇವೆ. ಈ ಹಸಿರು ಜೋಡಣೆಗಳಾದ್ಯಂತ, ನಾವು ಲಾಜಿಸ್ಟಿಕ್ ಪಾರ್ಕ್ಗಳು, ಸ್ಮಾರ್ಟ್ ಸಿಟಿಗಳು, ಕೈಗಾರಿಕಾ ಕೇಂದ್ರಗಳು, ಮೂಲಸೌಕರ್ಯ ಕ್ಲಸ್ಟರ್ಗಳು ಇತ್ಯಾದಿಗಳನ್ನು ಅಭಿವೃದ್ಧಿಪಡಿಸಲು ಬಯಸುತ್ತೇವೆ” ಎಂದು ಗಡ್ಕರಿ ಹೇಳಿದ್ದಾರೆ.
ಅಲ್ಲದೆ, ಅವರು ದೇಶದ ಹಸಿರು ಯೋಜನೆಗಳಲ್ಲಿ ಭಾಗವಹಿಸಲು ಇಚ್ಛಿಸುವವರೊಂದಿಗೆ ಸರ್ಕಾರವನ್ನು ಸಂಪರ್ಕಿಸಲು ಉದ್ಯಮದ ಬೆಂಬಲವನ್ನು ಕೋರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.