ಬೆಂಗಳೂರು: ನೆರೆಯ ರಾಜ್ಯ ಕೇರಳದಲ್ಲಿಯೂ ಡೆಲ್ಟಾ ಪ್ಲಸ್ ರೂಪಾಂತರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಅಲ್ಲಿನ ಜನರು ಕರ್ನಾಟಕಕ್ಕೆ ಆಗಮಿಸಲು ಆರ್ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದ್ದು, ವಿಮಾನ, ಬಸ್, ರೈಲು, ಟ್ಯಾಕ್ಸಿ ಸೇರಿದಂತೆ ಇನ್ನಿತರ ವಾಹನಗಳಲ್ಲಿ ರಾಜ್ಯಕ್ಕೆ ಬರುವ ಪ್ರಯಾಣಿಕರು 72 ಗಂಟೆಗೂ ಮೊದಲು ಮಾಡಲಾದ ಆರ್ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ಹೊಂದಿರಲೇ ಬೇಕು ಎಂದು ತಿಳಿಸಿದೆ.
ಹಾಗೆಯೇ 72 ಗಂಟೆಗಳಿಗೂ ಮೊದಲು ಮಾಡಿಸಿದ ಆರ್ಟಿಪಿಸಿಆರ್ ನೆಗೆಟಿವ್ ವರದಿ ಇದ್ದರಷ್ಟೇ ವಿಮಾನಗಳಲ್ಲಿ ಪ್ರಯಾಣಿಸಲು ಅವಕಾಶ ನೀಡುವಂತೆ ವಿಮಾನಯಾನ ಸಂಸ್ಥೆಗಳಿಗೂ ಸೂಚಿಸಲಾಗಿದೆ. ಹಾಗೆಯೇ ರೈಲು ಪ್ರಯಾಣಿಕರು ಸಹ ಈ ಪ್ರಮಾಣಪತ್ರ ಹೊಂದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.
ಈ ಸಂಬಂಧ ಚೆಕ್ಪೋಸ್ಟ್ಗಳಲ್ಲಿ ತಪಾಸಣೆಗೆ ಅಗತ್ಯ ಸಿಬ್ಬಂದಿ ನಿಯೋಜನೆಗೂ ಸೂಚಿಸಲಾಗಿದೆ. ಆದರೆ ಕೊರೋನಾ ಎರಡು ಡೋಸ್ ಲಸಿಕೆ ಪಡೆದವರು, ಆರೋಗ್ಯ ಕಾರ್ಯಕರ್ತರು, ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಹಾಗೆಯೇ, ತುರ್ತು ಸಂದರ್ಭಗಳಲ್ಲಿ ಈ ವರದಿ ಅವಶ್ಯಕತೆ ಇಲ್ಲ ಎಂದು ಸರ್ಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.