ಬೆಂಗಳೂರು: ರಾಜ್ಯ ಬಿಜೆಪಿ ವತಿಯಿಂದ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ 311 ಮಂಡಲಗಳಲ್ಲಿ 622 ಕಡೆ ಯೋಗ ದಿನಾಚರಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರು ತಿಳಿಸಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿ.ಕೆ. ಅರುಣಾ ಅವರ ನೇತೃತ್ವದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ನಡೆದಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಕೋವಿಡ್ ನಿಯಮ ಪಾಲನೆಯ ಜೊತೆ ಯೋಗ ದಿನಾಚರಣೆ ನಡೆಯಲಿದೆ ಎಂದು ಅವರು ವಿವರಿಸಿದರು. ಶುದ್ಧ ಜಲಮೂಲಗಳಿಗಾಗಿ ಕೆರೆ, ನದಿ ಮತ್ತಿತರ ಕಡೆಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಹೆಕ್ಕಿ ತೆಗೆಯುವ ಕಾರ್ಯಕ್ರಮವನ್ನು ಜೂನ್ 23ರಿಂದ ಜುಲೈ 6ರವರೆಗೆ ನಡೆಸಲಾಗುವುದು ಎಂದು ತಿಳಿಸಿದರು.
ಕೋವಿಡ್ ಮಹಾಮಾರಿ ಬಂದ ಸಂದರ್ಭದಲ್ಲಿ ಬಹಳಷ್ಟು ಜನರಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ 1.20 ಲಕ್ಷ ಕಾರ್ಯಕರ್ತರನ್ನು ಆರೋಗ್ಯ ಕಾರ್ಯಕರ್ತರನ್ನಾಗಿ ಮಾಡಲು ಯೋಜಿಸಲಾಗಿದೆ. 60 ಸಾವಿರ ಬೂತ್ನಲ್ಲಿ 1.20 ಲಕ್ಷ ಕಾರ್ಯಕರ್ತರನ್ನು ತರಬೇತಿಗೊಳಿಸಲಾಗುವುದು. ಅವರಿಗೆ ಆಕ್ಸಿಮೀಟರ್, ಥರ್ಮಾಮೀಟರ್, ಮಧುಮೇಹ (ಶುಗರ್) ತಪಾಸಣೆ ಯಂತ್ರ ಮೊದಲಾದವು ಇರುವ ಹೆಲ್ತ್ ಕಿಟ್ ಅನ್ನು ಕೊಡಲಾಗುವುದು ಎಂದರು.
ಜೂನ್ 23 ರಂದು ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿ ಮತ್ತು ಜುಲೈ 6ರಂದು ಅವರ ಜನ್ಮ ದಿನಾಚರಣೆ ಇದ್ದು, ಈ ಅವಧಿಯಲ್ಲಿ ಇಡೀ ರಾಜ್ಯಾದ್ಯಂತ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. 11 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಬಿಜೆಪಿ ವತಿಯಿಂದ ನೆಡಲಾಗುವುದು. ಅದರ ಜೊತೆಗೆ ವಿಶೇóಷವಾಗಿ ಇದೇ 23ರಂದು ವೆಬೆಕ್ಸ್ ಸಭೆಗಳನ್ನೂ ಆಯೋಜಿಸಲಾಗುವುದು ಎಂದು ಅವರು ವಿವರಿಸಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ್ ಅವರು ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಬಂದ ಬಳಿಕ ದೇಶದಲ್ಲಿ ಆಗಿರುವ ಬದಲಾವಣೆಗಳು ಅಗಾಧವಾಗಿದೆ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ನಿರಂತರವಾಗಿ ಆರೋಗ್ಯ ಕ್ಷೇತ್ರವನ್ನು ಕಡೆಗಣಿಸಿತ್ತು. ಆದರೆ, ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರವು ಕೇವಲ ಒಂದು ವರ್ಷದ ಅವಧಿಯಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಆರೋಗ್ಯ ರಂಗದ ಮೂಲಭೂತ ಸೌಕರ್ಯ ಹೆಚ್ಚಳಕ್ಕೆ ಕೈಗೊಂಡ ಯೋಜನೆಗಳು ಮತ್ತು ಅವುಗಳ ಅನುಷ್ಠಾನ ಅಭೂತಪೂರ್ವ ಎಂದರು. ಆಕ್ಸಿಜನ್ ಪೂರೈಕೆ, ವೆಂಟಿಲೇಟರ್ ಸರಬರಾಜು, ಬೆಡ್ ಹೆಚ್ಚಳವೂ ಸೇರಿದಂತೆ ಎಲ್ಲಾ ಅಗತ್ಯಗಳನ್ನು ತ್ವರಿತವಾಗಿ ಬಿಜೆಪಿ ಕೇಂದ್ರ ಸರಕಾರ ಈಡೇರಿಸಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಹಿಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು 1975ರಲ್ಲಿ ಜಾರಿಗೊಳಿಸಿದ್ದ ತುರ್ತು ಪರಿಸ್ಥಿತಿಯ ಕರಾಳ ನೆನಪನ್ನು ಜೂನ್ 25ರಂದು “ತುರ್ತು ಪರಿಸ್ಥಿತಿಯ ಒಂದು ನೆನಪು” ಎಂಬ ಕಾರ್ಯಕ್ರಮದ ಮೂಲಕ ಬಿಜೆಪಿ ಆಚರಿಸಲಿದೆ. ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ನಮ್ಮ ದೇಶದ ಅಗ್ರಮಾನ್ಯ ನಾಯಕರು ಜೈಲಿನಲ್ಲಿ ಇರಬೇಕಾದ ಸಂದರ್ಭ ಉಂಟಾಗಿತ್ತು. ಇಂದಿರಾಗಾಂಧಿ ಅವರ ಚುನಾವಣಾ ಅಕ್ರಮಗಳ ವಿರುದ್ಧ ಅಲಹಾಬಾದ್ ಹೈಕೋರ್ಟ್ನ ತೀರ್ಪು, ತುರ್ತು ಪರಿಸ್ಥಿತಿ ತರಲು ಕಾರಣಗಳೇನು ಎಂಬಿತ್ಯಾದಿ ವಿಷಯಗಳ ಕುರಿತಂತೆ ಯುವಜನರಿಗೆ ತಿಳಿಸಲಾಗುವುದು ಎಂದರು.
ಪಕ್ಷವು ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ಪ್ರಶಿಕ್ಷಣ ಕಾರ್ಯಕ್ರಮವನ್ನು ನಡೆಸಲಿದೆ. ರಾಜ್ಯದ ಪದಾಧಿಕಾರಿಗಳು, ರಾಜ್ಯದಲ್ಲಿರುವ ರಾಷ್ಟ್ರ ಮಟ್ಟದ ಪದಾಧಿಕಾರಿಗಳು, ಶಾಸಕರು, ಸಂಸದರು, ಮುಖ್ಯಮಂತ್ರಿಗಳು ರಾಜ್ಯ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬಳಿಕ ಜಿಲ್ಲಾ ಮಟ್ಟದ ಪ್ರಶಿಕ್ಷಣವೂ ನಡೆಯಲಿದೆ. ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ 7 ವರ್ಷದ ಸರಕಾರದ ಸಾಧನೆಯನ್ನು ಪರಿಚಯಿಸಲಾಗುವುದು. ಬಡವರಿಗಾಗಿ ಜಾರಿಗೊಳಿಸಿದ ವಿವಿಧ ಯೋಜನೆಗಳ ಉಪಯುಕ್ತತೆಯನ್ನು ಕಾರ್ಯಕರ್ತರು ಜನರಿಗೆ ತಿಳಿಸಿಕೊಡಲಿದ್ದಾರೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.