ಬೆಂಗಳೂರು: ಕೊರೋನಾ ಸೋಂಕಿನ ಪ್ರಮಾಣವನ್ನು 5% ಗಳಿಗಿಂತ ಕಡಿಮೆ ಮಾಡುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಮೈಸೂರು, ಮಂಡ್ಯ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ.
ಕೊರೋನಾ ಪ್ರಕರಣ ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ 65 ಸಾವಿರ ಪ್ರಕರಣಗಳು ಈ ಎಂಟು ಜಿಲ್ಲೆಗೆ ಸಂಬಂಧಿಸಿದಂತೆಯೇ ಇದೆ. ಕೊರೋನಾ ಎರಡನೇ ಅಲೆಯಲ್ಲಿ ರಾಜ್ಯ ಸರ್ಕಾರದ ಕಠಿಣ ನಿರ್ಬಂಧಗಳಿಂದ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಕೆಲ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣದಲ್ಲಿ ಇಲ್ಲವಾದ್ದರಿಂದ, ಪ್ರಕರಣಗಳ ಇಳಿಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.
ಹಾಗೆಯೇ ಕೊರೋನಾ ನಿಯಂತ್ರಣ ಕ್ರಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುವುದನ್ನು ಖಾತ್ರಿ ಮಾಡಿಕೊಳ್ಳಬೇಕು. ಜನತೆ ನಿಯಮ ಉಲ್ಲಂಘನೆ ಮಾಡದಂತೆ ಕ್ರಮ ಕೈಗೊಳ್ಳಬೇಕು. ಕಂಟೈನ್ಮೆಂಟ್ ವಲಯಗಳಲ್ಲಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಕೊರೋನಾ ಪ್ರಕರಣಗಳು ತೀವ್ರಗತಿಯಲ್ಲಿ ಇಳಿಕೆಯಾಗುವಂತೆ ಎಚ್ಚರ ವಹಿಸಬೇಕೆಂದು ತಿಳಿಸಿದ್ದಾರೆ.
ಕೊರೋನಾ ಮಾದರಿ ಪರೀಕ್ಷೆ ಹೆಚ್ಚಿಸಬೇಕು. ವರದಿಯನ್ನು 24 ಗಂಟೆಗಳೊಳಗಾಗಿ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಸೋಂಕಿತರನ್ನು ಆರೈಕೆ ಕೇಂದ್ರಗಳಿಗೆ ದಾಖಲಿಸಬೇಕು. ಸಂಪರ್ಕಿತರ ಪತ್ತೆಗೆ ಕ್ರಮ ಕೈಗೊಳ್ಳಬೇಕು. ಕೊರೋನಾ ಪ್ರಕರಣಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಕೆಲ ಚಟುವಟಿಕೆಗಳನ್ನು ಹೊರತು ಪಡಿಸಿ, ನಿರ್ಬಂಧಗಳನ್ನು ಮುಂದುವರಿಸುವಂತೆ ಸಚಿವರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಎಂದು ಸಿಎಂ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.