ಮೈಸೂರು: ಕೊರೋನಾ ಸೋಂಕಿನಿಂದ ಹೆತ್ತವರನ್ನು, ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿ ನೀಡಲು ಮೈಸೂರು ವಿವಿ ನಿರ್ಧರಿಸಿದೆ.
ಕೊರೋನಾದಿಂದ ತಮ್ಮವರನ್ನು ಕಳೆದುಕೊಂಡ ಅಶಕ್ತ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಉಚಿತ ಸೀಟು ನೀಡಲು ವಿವಿ ಮುಂದಾಗಿದೆ ಎಂದು ಕುಲಪತಿ ಪ್ರೊ. ಜಿ ಹೇಮಂತ್ ಕುಮಾರ್ ತಿಳಿಸಿದ್ದಾರೆ. ಈ ಸಂಬಂಧ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
ಕೊರೋನಾ ಕಾರಣದಿಂದ ವಿವಿ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿ ಅಪಾರ ಸಾವು, ನೋವು ಉಂಟಾಗಿದೆ. ಅನೇಕರು ತಂದೆ, ತಾಯಿ, ಮಕ್ಕಳನ್ನು ಕಳೆದುಕೊಂಡು ನೋವಲ್ಲಿದ್ದಾರೆ. ಬಡ ಕುಟುಂಬಗಳಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೂ ಅನಾನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೊರೋನಾದಿಂದ ಕುಟುಂಬದ ಜವಾಬ್ದಾರಿ ಹೊತ್ತವರನ್ನೇ ಕಳೆದುಕೊಂಡ ಮನೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೂ ಸಮಸ್ಯೆ ಉಂಟಾದಲ್ಲಿ ಅವರಿಗೆ ಉಚಿತ ಸೀಟು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ವ್ಯವಸ್ಥೆಯನ್ನು ವಿವಿ ವ್ಯಾಪ್ತಿಯಲ್ಲಿ ಬರುವ ಮಹಾರಾಜ ಕಾಲೇಜು, ಯುವರಾಜ ಕಾಲೇಜು, ಸಂಜೆ ಕಾಲೇಜು ,ಲಲಿತಕಲಾ ಕಾಲೇಜು ಗಳಲ್ಲಿ ಪದವಿ ವಿದ್ಯಾರ್ಥಿಗಳಿಗೆ 5 ಸೀಟು ಕಾಯ್ದಿರಿಸಲಾಗುವುದು. ಈ ಸೀಟುಗಳನ್ನು ಅರ್ಹರಿಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಕೊರೋನಾದಿಂದ ಹೆತ್ತವರು, ಪೋಷಕರನ್ನು ಕಳೆದುಕೊಂಡು, ಆರ್ಥಿಕವಾಗಿಯೂ ಹಿಂದುಳಿದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬಹುದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.