ಬೆಂಗಳೂರು: ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ವೈದ್ಯ ಡಾ ಸುನಿಲ್ ಕುಮಾರ್ ಹೆಬ್ಬಿ ಅವರು ಮೊಬೈಲ್ ಕ್ಲಿನಿಕ್ ಆರಂಭಿಸಿ ಕೊರೋನಾ ಸೇನಾನಿಯಾಗಿ ಸೋಂಕಿತರಿಗೆ ಸೇವೆ ನೀಡುತ್ತಿದ್ದಾರೆ.
ಹೆಬ್ಬಿ ಅವರು ತಮ್ಮ ಕಾರ್ ಅನ್ನು ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತನೆ ಮಾಡಿದ್ದು, ಈಗಾಗಲೇ ಇದರ ಮೂಲಕ ಸುಮಾರು 200 ಮಂದಿಗೂ ಅಧಿಕ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದಾರೆ. ತಮಗೆ ಬರುವ ಕರೆಗಳು, ವಾಟ್ಸಾಪ್ ಸಂದೇಶಗಳ ಮಾಹಿತಿಯನ್ನು ಆಧರಿಸಿ ರೋಗಿಗಳ ಬಳಿಗೆ ತೆರಳುವ ಅವರು, ಸೌಮ್ಯ ಲಕ್ಷಣ ಹೊಂದಿರುವ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ.
ಹಾಗೆಯೇ ತುರ್ತು ಸಂದರ್ಭದಲ್ಲಿ ಕೊರೋನಾ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡುವ ಮೂಲಕ ವೃತ್ತಿ ಧರ್ಮ ಮೆರೆಯುತ್ತಿದ್ದು, ಆ ಮೂಲಕ ಮಾದರಿಯಾಗುತ್ತಿದ್ದಾರೆ. ಬಿಬಿಎಂಪಿ ಯಲ್ಲಿ ಕಾಂಟ್ರ್ಯಾಕ್ಟ್ ಆಧಾರದಲ್ಲಿ ವೈದ್ಯರಾಗಿರುವ ಹೆಬ್ಬಿ, ರಾತ್ರಿ 8 ರಿಂದ ಬೆಳಗ್ಗೆ 8 ರ ವರೆಗೆ ಅಲ್ಲಿ ಸೇವೆ ನೀಡುತ್ತಿದ್ದಾರೆ. ಬೆಳಗ್ಗೆ 8 ರಿಂದ 10 ಗಂಟೆಯ ವರೆಗೆ ವಿಶ್ರಮಿಸಿ ಬೆಳಗ್ಗೆ 10 ಗಂಟೆಯ ಬಳಿಕ ತಮ್ಮ ಸಂಚಾರಿ ಕಾರ್ ಕ್ಲಿನಿಕ್ನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದ್ದಾರೆ.
ವೃದ್ಧರು, ಸೌಮ್ಯ ಲಕ್ಷಣಗಳನ್ನು ಒಳಗೊಂಡ ಸೋಂಕಿತರು, ಏಕಾಂಗಿಯಾಗಿರುವ ಸೋಂಕಿತರಿಗೆ ಇವರ ಚಿಕಿತ್ಸೆ ನೀಡುತ್ತಿದ್ದಾರೆ. ದಿನ ನಿತ್ಯ ಹಲವು ಸೋಂಕಿತರಿಂದ ಚಿಕಿತ್ಸೆಗಾಗಿ ಇವರಿಗೆ ಕರೆಗಳು, ವಾಟ್ಸಾಪ್ ಸಂದೇಶಗಳೂ ಬರುತ್ತಿದ್ದು, ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಡಾ ಸುನಿಲ್ ಕುಮಾರ್ ಹೆಬ್ಬಿ ಸದ್ಯ ಸುದ್ದಿಯಲ್ಲಿದ್ದಾರೆ.
ದಿನನಿತ್ಯ ಇವರಿಗೆ ಸುಮಾರು 100 – 150 ಸೋಂಕಿತರು ಕರೆ ಮಾಡುತ್ತಿದ್ದು, ಅವರಲ್ಲಿ ಸಾಧ್ಯವಾದಷ್ಟು ಪ್ರಮಾಣದಲ್ಲಿ ಹೆಚ್ಚಿನವರಿಗೆ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಹೆಬ್ಬಿ ಶ್ರಮಿಸುತ್ತಿದ್ದಾರೆ. ಕೆಲವು ಗಂಭೀರ ಪ್ರಮಾಣದ ಸಮಸ್ಯೆಗಳಿದ್ದಲ್ಲಿ ಅವರೇ ತೆರಳಿ ಚಿಕಿತ್ಸೆ ನೀಡುತ್ತಾರೆ. ಜೊತೆಗೆ ಇಚರ ಸೌಮ್ಯ, ಗಂಭೀರವಲ್ಲದ ರೋಗಿಗಳಿಗೆ ಅವರ ಆರೋಗ್ಯ ವರದಿಗಾಧರಿಸಿ ಫೋನ್ ಮೂಲಕವೇ ಸಲಹೆ ನೀಡುತ್ತಾರೆ.
ಪ್ರಾಥಮಿಕ ಚಿಕಿತ್ಸೆಗೆ ಯೋಗ್ಯವಾದ ವೈದ್ಯಕೀಯ ಸಲಕರಣೆಗಳ ಜೊತೆಗೆ ಹೆಬ್ಬಿ ಅವರು ದಿನ ನಿತ್ಯ ನಗರದೆಲ್ಲೆಡೆ ಸಂಚರಿಸಿ ಚಿಕಿತ್ಸೆ ಒದಗಿಸುವ ಮೂಲಕ ವೈದ್ಯೋ ನಾರಾಯಣೋ ಹರಿ ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.